/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ನೆಲದನಿ

ವಿಶ್ವದಾಖಲೆಯ ಸಾಧಕ : ವೀರನಗೌಡ ಪಾಟೀಲ್ ಅವರ ಸಾಧನೆಯ ಹಾದಿ

Published

on

ಸಾಧನೆ ಮತ್ತು ಸಾಧಕನಿಗೆ ಛಲವೊಂದಿದ್ದರೆ ಜಗತ್ತನ್ನೆ ಗೆಲ್ಲುವ ಶಕ್ತಿ ಲಭಿಸುತ್ತದೆ ಎಂಬ ಮಾತೊಂದಿದೆ. ಹಾಗಾಗಿ ಪ್ರತಿಯೊಂದು ಸಾಧನ ವಿದ್ಯೆಯು ಕೂಡ ಸಾಧಕನ ಸೊತ್ತೆ ಹೊರತು ಸೋಮಾರಿಯ ಸೊತ್ತಲ. ಆದ್ದರಿಂದ ಸಾಧನೆಯೆಂಬುದು ರಕ್ತಗತವಾಗಿಯೋ, ವಂಶ ಪಾರಂಪರ್ಯವಾಗಿಯೋ ಇಲ್ಲವೆ ಅದೃಷ್ಟದಿಂದಾಗಿಯೋ ಲಭಿಸುವಂತದ್ದಲ್ಲ. ಇಲ್ಲಿ ಸಾಧಿಸುವಂತಹ ಛಲವೇ ಪ್ರಮುಖ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಾಧನೆಗೆ ಅಪಾರವಾದ ಪಾಂಡಿತ್ಯವಾಗಲಿ, ವಿದ್ವತ್ತಾಗಲಿ ಮುಖ್ಯವಂತೂ ಅಲ್ಲವೇ ಅಲ್ಲ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿ ಹಲವಾರು ವಿಶ್ವದಾಖಲೆ ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ವೀರನಗೌಡ ಪಾಟೀಲ್ ಅವರು ಎದುರಾಗುತ್ತಾರೆ. ತನ್ನ ತಲೆಗೆ ನಾಟದ ಶಿಕ್ಷಣದಿಂದ ಹೊರ ಬಂದರೂ ಸಹ ಸಾಧನೆಯ ಹಾದಿಯೆಡೆಗೆ ತುಡಿದು ‘ಸಾಮ’ ಎಂಬ ಕಾವ್ಯನಾಮದ ಮೂಲಕವೇ ಗುರುತಿಸಿಕೊಂಡಿರುವ ಶ್ರೀಯುತ ವೀರನಗೌಡ ಪಾಟೀಲ್ ಅವರ ಸಾಧನೆಯ ಹಾದಿಯನ್ನು ಅನಾವರಣಗೊಳಿಸುವುದು ಪ್ರಸ್ತುತ ಲೇಖನದ ಆಶಯವಾಗಿದೆ.

ಶ್ರೀಯುತ ವೀರನಗೌಡ ಪಾಟೀಲರು ಆಗಸ್ಟ್, 10, 1988 ರಂದು ಹಾವೇರಿ ತಾಲ್ಲೂಕಿನ ಸೋಮನಕಟ್ಟಿ ಎಂಬ ಗ್ರಾಮದಲ್ಲಿ ಶ್ರೀಮತಿ ಸಾವಿತ್ರವ್ವ ಶ್ರೀ ಮಂಜೆನಗೌಡ ದಂಪತಿಗಳ ಪುತ್ರನಾಗಿ ಜನಿಸಿದರು. ಬಾಲ್ಯದ ದಿನಮಾನಗಳಿಂದ ಬಡತನದ ಬದುಕಿನೊಳಗೆ ಬೆಳೆದು ಬಂದ ಶ್ರೀಯುತ ವೀರನಗೌಡ ಅವರಿಗೆ ಶಾಲಾ ಶಿಕ್ಷಣ ಅನ್ನುವಂತದ್ದು ನುಂಗಲಾರದ ತುತ್ತಾಗಿತ್ತು. ಪ್ರಥಮ ಪಿಯುಸಿ ಶಿಕ್ಷಣಕ್ಕೆ ಪಾದಾರ್ಪಣೆ ಮಾಡುವ ವೇಳೆಗಾಗಲೆ ಇಂಗ್ಲೀಷ್ ಶಿಕ್ಷಣವು ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಇದರಿಂದಾಗಿ ಇಲ್ಲಿಗೆ ತಮ್ಮ ಶಿಕ್ಷಣಕ್ಕೆ ವಿದಾಯವನ್ನು ಹೇಳಿದ ಇವರು ಜೀವನ ಮಾರ್ಗಕ್ಕಾಗಿ ಟೈಲರಿಂಗ್ ವೃತ್ತಿಯೆಡೆಗೆ ತಮ್ಮ ಚಿತ್ತವನ್ನು ಕೇಂದ್ರಿಕರಿಸಿ, ಈ ವೃತ್ತಿಯನ್ನು ತಮ್ಮ ಬದುಕಿನ ಮಾರ್ಗವಾಗಿ ಮುಂದುವರೆಸಿದರು. ಆದರೆ ಸದಾ ಕ್ರಿಯಾಶೀಲರಾಗಿದ್ದ ಶ್ರೀಯುತ ವೀರನಗೌಡ ಅವರು ತಾನು ಏನಾದರು ಸಾಧನೆ ಮಾಡಬೇಕೆಂದು ಒಂದಿಲ್ಲೊಂದು ಕಾರ್ಯಗಳಲ್ಲಿ ಸದಾ ಕಾರ್ಯಪ್ರವೃತ್ತರಾಗುತ್ತಿದ್ದರು. ಇದರ ಭಾಗವಾಗಿ ತನ್ನ ವೃತ್ತಿ ಬದುಕಿನಲ್ಲಿ ಲಭ್ಯವಾಗುತ್ತಿದ್ದ ದಾರದ ಕೊಳವೆಗಳನ್ನು ಸಂಗ್ರಹಿಸಿ ಅವುಗಳಿಂದ ವಿವಿಧ ತೆರನಾದ ಆಕರ್ಷಕ ಕಲಾಕೃತಿಗಳನ್ನು ತಯಾರಿಸಲು ಮುಂದಾದರು. ಹೀಗೆ ಆರಂಭವಾದ ಈ ವೃತ್ತಿಯೊಂದಿಗಿನ ಪ್ರವೃತ್ತಿಯು ದಿನದಿಂದ ದಿನಕ್ಕೆ ಅಧಿಕವಾಗುತ್ತ ಸಾಗಿತು. ನಿರುಪಯುಕ್ತವಾಗಿರುವ ಈ ದಾರದ ಕೊಳವೆಯ ಜೊತೆ ಜೊತೆಗೆ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸುವ ಮೂಲಕ ವಿವಿಧ ಕಲಾಕೃತಿಗಳನ್ನು ತಯಾರಿಸಲು ಮುಂದಾಗಿ ಮಂಟಪ, ಖುರ್ಚಿ, ಮೇಜು ಹಾಗೆಯೇ ಇತರ ವಿವಿಧ ಕಲಾಕೃತಿಗಳ ತಯಾರಿಕೆಯಲ್ಲಿ ಸಿದ್ಧಿಯನ್ನು ಸಾಧಿಸಿದರು.

ಹೀಗೆ ನಿರಂತರವಾದ ಸಾಧನೆಯಲ್ಲಿ ನಿರತರಾದ ಇವರ ಕಲಾ ಕುಸುರಿ ವಸ್ತುಗಳು ಸಾಕಷ್ಟು ಕಡೆಗಳಲ್ಲಿ ಪ್ರದರ್ಶನವಾಗಿ ಕಲಾಸಕ್ತರನ್ನು ಆಕರ್ಷಿಸಿದವು. ಇವರ ಈ ಸಾಧನೆಯು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಇವರ ಸಹೋದ್ಯೋಗಿಗಳಾದ ಸಂತೋಷ್ ಎಂಬುವವರು ತನ್ನ ಸ್ನೇಹಿತನ ಈ ಸಾಧನೆಯನ್ನು ಕಂಡು ಅವರ ಹತ್ತಿರದ ಸಂಬಂಧಿಕರಾದ ಅಂಬಿಕಾ ಎಂಬ ಶಿಕ್ಷಣ ತಜ್ಞರನ್ನು ಪರಿಚಯ ಮಾಡಿಸುವ ಮೂಲಕ ಇವರ ಸಾಧನೆಯ ಪ್ರಚಾರಕ್ಕೆ ಸಹಕರಿಸಿದರು. ಅಂಬಿಕಾ ಎಂಬುವವರು ಇವರ ಕರಕುಶಲತೆಯ ವಿಶೇಷತೆಯನ್ನು ಗಮನಿಸಿ ‘ಗ್ರೀನ್ ಇಂಡಿಯಾ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್’ ಪಟ್ಟಿಯೊಳಗೆ ಇವರ ಸಾಧನೆಯನ್ನು ಪರಿಚಯಿಸಿದರು. ಇವರ ಈ ಸಾಧನೆಯನ್ನು ಗಮನಸಿ ಇವರನ್ನು ವಿಶ್ವದಾಖಲೆ ಪಟ್ಟಿಗೆ ಆಯ್ಕೆ ಮಾಡಲಾಯಿತು. ಆ ಮೂಲಕವಾಗಿ ವಿಶ್ವದಾಖಲೆ ಪಟ್ಟಿಯೊಳಗೆ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡರು.

ಶ್ರೀಯುತರು ಕಲಾಕೃತಿ ರಚನೆಯಲ್ಲಿ ವಿಶ್ವದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡು ಸಾಧನೆಯ ಶಿಖರವೇರಿದೆ ಎಂದು ತೃಪ್ತಿಪಟ್ಟುಕೊಳ್ಳದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡುವ ಹಂಬಲವೊತ್ತು ಮುನ್ನೆಡೆದರು. ಅದಕ್ಕಾಗಿ ಮೊದಲು ಕಾವ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಹಿರಿಯ ಮತ್ತು ಸಮಕಾಲೀನ ಕವಿಗಳ ಅಧ್ಯಯನಕ್ಕೆ ಮುಂದಾದರು. ಆ ಮೂಲಕವಾಗಿ ಹಲವಾರು ಕವಿತೆಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದರು. ನಂತರದಲ್ಲಿ ವಿಭಿನ್ನವಾದ ಕ್ರಿಯಾಶೀಲತೆಯನ್ನು ಪ್ರದರ್ಶಿಸುವ ಆಶಯವೊತ್ತು ಏನನ್ನಾದರು ಸಾಧಿಸಬೇಕು ಹಂಬಲದಿಂದ ‘ಹ’ ಅಕ್ಷರವನ್ನು ಆರಂಭವಾಗಿಟ್ಟುಕೊಂಡು ಹ ಕಾರದಿಂದಲೆ ಕಾದಂಬರಿಯೊಂದನ್ನು ಬರೆಯಲು ಮುಂದಾದರು. ಹೀಗೆ ಆರಂಭವಾದ ಈ ಪ್ರಯತ್ನದ ಫಲವಾಗಿ ಸುಮಾರು ಮೂರು ನೂರಕ್ಕೂ ಅಧಿಕ ಪುಟಗಳ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಹೀಗೆ ತನ್ನ ನಿರಂತರ ಶ್ರಮ ಹಾಗೂ ಕ್ರಿಯಾಶೀಲತೆಯ ಮೂಲಕ ರಚಿಸಿದ ಕೃತಿಯನ್ನು ಮುದ್ರಿಸಲು ಹಣಕಾಸಿನ ತೊಂದರೆಯಿಂದಾಗಿ ಮತ್ತೊಮ್ಮೆ ತನ್ನ ಕೈ ಬರಹದ ಮೂಲಕವೇ ಸ್ಪಷ್ಟವಾಗಿ ರಚಿಸಿ, ವಿಶ್ವದಾಖಲೆಯ ಸ್ಪರ್ಧೆಗೆ ಕಳುಹಿಸಿಕೊಟ್ಟಿರುತ್ತಾರೆ. ಇದನ್ನು ಗಮನಿಸಿ ಈ ಕೃತಿಯೂ ಕೂಡ 2015ರಲ್ಲಿ ‘ಗೋಲ್ಡ್‍ಸ್ಟಾರ್ ಅಚೀವರ್ ಬುಕ್ ಆಫ್ ರೆಕಾಡ್ರ್ಸ್’ ವಿಶ್ವದಾಖಲೆ ಪುರಸ್ಕಾರಕ್ಕೆ ಆಯ್ಕೆಯಾಯಿತು.

ಶ್ರೀಯುತ ವೀರನಗೌಡ ಪಾಟೀಲರು ಕಲೆ ಮತ್ತು ಸಾಹಿತ್ಯ ಸೇವೆಯ ಜೊತೆ ಜೊತೆಯಲ್ಲಿ ಪರಿಸರ ಉಳಿಸಿ, ಬೆಳೆಸುವ ಕಾಳಜಿಯೊತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದಾರೆ. ಆ ಮೂಲಕ ತನ್ನ ಸುತ್ತಮುತ್ತಲಿನ ಜನತೆಗೆ ಪರಿಸರ ಜಾಗೃತಿ ಮೂಡಿಸುವಲ್ಲಿ ಅವಿರತವಾದ ಶ್ರಮವನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಯಲ್ಲಿ ತಾನು ಕಲಿತ ಕರಕುಶಲ ಕಲೆಯನ್ನು ಗ್ರಾಮೀಣ ಶಾಲಾ ಮಕ್ಕಳಿಗೆ ತರಬೇತಿ ನೀಡುವಂತಹ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಾಗಿದ ಇವರ ಕಲಾ ಸೇವೆಯು ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹೀಗೆ ಒಂದಿಲ್ಲೊಂದು ಕಾರ್ಯಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಶಿವನಗೌಡರು ಸರಳತೆ ಮತ್ತು ಸಜ್ಜನಿಕೆಯ ಸ್ವಭಾವದವರಾಗಿದ್ದಾರೆ. ಇವರ ಈ ಸಾಧನೆಗಳನ್ನು ನಾಡಿನ ವಿವಿಧ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಪರಿಚಯಿಸಿವೆ. ಹಾಗೆಯೇ ಹಲವಾರು ಗೌರವ ಮತ್ತು ಪುರಸ್ಕಾರಗಳು ಇವರ ಮುಡಿಗೇರಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ, ರಾಷ್ಟ್ರೀಯ ಚಿಂತನ ಆರ್ಟಿಸ್ಟ್ ಪ್ರಶಸ್ತಿ, ರಾಷ್ಟ್ರೀಯ ಚಿಂತನ ವಿಜ್ಞಾನ ಪ್ರಶಸ್ತಿ, ಗಮನ ಶ್ರೀನಂದಿ ಪ್ರಶಸ್ತಿ, ಜವಹರಲಾಲ ನೆಹರು ಸದ್ಬಾವನಾ ಪ್ರಶಸ್ತಿ, ಕರುನಾಡ ವಿಕ್ರಮ ಶ್ರೀ ಪ್ರಶಸ್ತಿ, ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ, ಕಾವ್ಯಾಂಜಲಿ ಪ್ರಶಸ್ತಿ, ಗ್ರೀನ್ ಇಂಡಿಯಾ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್, ಗೋಲ್ಡ್‍ಸ್ಟಾರ್ ಅಚೀವರ್ ಬುಕ್ ಆಫ್ ರೆಕಾರ್ಡ್, ಎಕ್ಸಲೆಂಟ್ ಬುಕ್ ಆಫ್ ರೆಕಾರ್ಡ್, ಕನ್ನಡ ಸಾಹಿತ್ಯ ರತ್ನ ಶಿಖಿಯಂತಹ ಪ್ರಶಸ್ತಿಗಳ ಜೊತೆಗೆ ‘ಕನ್ನಡದ ಕಂದ’ ಹಾಗೂ ‘ಹ ಕಾರದ ಹಮ್ಮೀರ’ ಎಂಬ ಬಿರುದುಗಳು ಸಹ ಶ್ರೀಯುತರಿಗೆ ಪ್ರಾಪ್ತಿಯಾಗಿವೆ.

ಶ್ರೀಯುತ ವೀರನಗೌಡ ಪಾಟೀಲರು ಬಹುಮುಖಿ ಪ್ರತಿಭೆಯ ವ್ಯಕ್ತಿತ್ವ ಉಳ್ಳವರು. ತುಂಬಿದಕೊಡ ತುಳುಕುವುದಿಲ್ಲವೆಂಬ ಗಾದೆ ಮಾತನ್ನು ಇಂತಹ ವಿಶಿಷ್ಟ ಸಾಧಕರನ್ನು ನೋಡಿಯೇ ನಮ್ಮ ಜಾನಪದರು ಸೃಷ್ಟಿಸಿರುವಂತಿದೆ. ಶ್ರೀಯುತರು ಶಾಲೆಯ ಮೂಲಕ ಕಲಿತು ಪಡೆದ ಶಿಕ್ಷಣ ಅಲ್ಪವಾದರೂ ಅರಿವಿನ ಮೂಲಕ ಪಡೆದ ವಿದ್ಯೆ ಅಪಾರವಾದುದಾಗಿದೆ. ಇವರು ಹಲವಾರು ಸಾಹಿತ್ಯ ಮತ್ತು ಸಾಂಸ್ಕøತಿಕ ಹುದ್ದೆಗಳನ್ನು ಅಲಂಕರಿಸುವುದರ ಜೊತೆಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಂಪಾದಕರಾಗಿ, ಅಂಕಣಕಾರರಾಗಿ, ಪುಟ ವಿನ್ಯಾಸಕರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕವಿಗಳಾಗಿ ಹಲವಾರು ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಹಲವಾರು ಭಾವಗೀತೆಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೋಘವಾದ ಕಾಣಿಕೆಯನ್ನು ನೀಡಿದ್ದಾರೆ. ಈ ಎಲ್ಲದರಾಚೆ ತಮ್ಮ ಗ್ರಾಮದ ಹಲವು ಸಾಧನೆಗಳ ಮೊದಲಿಗರಾಗಿ ಸಾಧನೆ ಮೆರೆದಿದ್ದಾರೆ.

ಶ್ರೀಯುತ ವೀರನಗೌಡ ಪಾಟೀಲ್ ಅವರ ಸಾಧನೆಯು ಅನುಪಮವಾಗಿದ್ದು, ಕ್ರಿಯಾತ್ಮಕ ನೆಲೆಯಿಂದ ಕೂಡಿದೆ. ಕಿರಿಯ ವಯಸ್ಸಿನಲ್ಲಿಯೇ ಮಹತ್ತರವಾದ ಸಾಧನೆಗೆ ಮುಂದಾಗಿ ಅದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಇವರ ಈ ಸಾಧನೆ, ಸಾಮಾಜಿಕ ಸೇವೆ ಮತ್ತು ಪರಿಸರ ಕಾಳಜಿಯಿಂದಾಗಿ ಮತ್ತಷ್ಟು ಸಾಧನೆಯನ್ನು ಕೈಗೊಳ್ಳುವಂತಾಗಲಿ ಎಂಬುದು ನಮ್ಮ ಹಾರೈಕೆ.

Leave a Reply

Your email address will not be published. Required fields are marked *

Trending

Exit mobile version