ಲೈಫ್ ಸ್ಟೈಲ್
ಪಕ್ಷಿ ಪರಿಚಯ | ನೆಲಗುಬ್ಬಿ
- ಭಗವತಿ ಎಂ.ಆರ್
ಈಚಿನ ದಿನಗಳಲ್ಲಿ ಅವನತಿಯ ಅಂಚಿಗೆ ಬಂದಿರುವ ನೆಲಗುಬ್ಬಿಗಳು ಅಪರೂಪಕ್ಕೆ ಕಾಣಸಿಕೊಳ್ಳುತ್ತಿವೆ. ನೆಲಗುಬ್ಬಿಗಳು ಹೆಚ್ಚುಕಮ್ಮಿ ಗಂಡು ಗುಬ್ಬಚ್ಚಿಯನ್ನುಹೋಲುತ್ತವೆ. ಇವುಗಳನ್ನು ಗ್ರಾಮೀಣ ಭಾಷೆಯಲ್ಲಿ ಕಲ್ಲು ಗುಬ್ಬಿ (Ashy-crowned Sparrow -Lark)ಎನ್ನುತ್ತಾರೆ.
ಕುಳ್ಳ ಕಾಲು, ಗಂಡು ಗುಬ್ಬಚ್ಚಿಗಿರುವಂತೆ ನೆಲ ಗಂಡು ಗುಬ್ಬಿಯ ಕಣ್ಣಿನ ಸುತ್ತ ಕಪ್ಪು ವೃತ್ತವಿದೆ. ಗುಬ್ಬಚ್ಚಿಯಂತೆಯೇ ಮೊಂಡು ಕೊಕ್ಕು. ತಲೆ ಬೂದು ಬಣ್ಣದಾಗಿದೆ. ಹೆಣ್ಣು ಹಕ್ಕಿಗಳದು ತಿಳಿ ಕಂದು ಬಣ್ಣವಿದ್ದು, ಕಣ್ಣಿನ ಸುತ್ತ ಕಪ್ಪು ಪಟ್ಟಿಯಿರುವುದಿಲ್ಲ.
ಗಂಡು ನೆಲಗುಬ್ಬಿಗಳ ವಿಶೇಷತೆಯೇನೆಂದರೆ ಕೆಳಗಿನಿಂದ ರಾಕೇಟು ನೇರವಾಗಿ ಮೇಲೇರಿದಂತೆ ಟ್ವೀ ಎಂದು ಸಿಳ್ಳೆ ಹಾಕುತ್ತಾ ಆಕಾಶಕ್ಕೇರಿ, ಇನ್ನೇನು ನೆಲಮುಟ್ಟುತ್ತದೆ ಎನ್ನುವಷ್ಟರಲ್ಲಿ ಮತ್ತೆ ಮೇಲಕ್ಕೆ ಹಾರುತ್ತದೆ.
ಬಹುಶಃ ಇದಕ್ಕೇ ಇವಕ್ಕೆ ಸಿಳ್ಳೆಗುಬ್ಬಿ ಎಂಬ ಮತ್ತೊಂದು ಹೆಸರು ಬಂದಿರಬೇಕು. ಈ ರೀತಿಯ ನಡವಳಿಕೆ ಗಂಡು ನೆಲಗುಬ್ಬಿಗಳಲ್ಲಿ ಕಾಣುವುದು. ಇವು ಬಹುಶಃ ಬೆದೆ ಬಂದ ಕಾಲಕ್ಕೆ ಹೆಣ್ಣು ಗುಬ್ಬಿಗಳನ್ನು ಆಕರ್ಷಿಸಲು ಈ ರೀತಿ ವರ್ತಿಸುತ್ತವೆ.
ನೆಲಗುಬ್ಬಿಗಳು ಬೇಸಿಗೆ ಕಾಲದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನೆಲದಲ್ಲಿಯೇ ಗುಳಿ ಮಾಡಿ ಅದರ ಸುತ್ತ ಕಲ್ಲುಗಳಿಟ್ಟು ಗೂಡು ಕಟ್ಟುತ್ತವೆ. ಇವಕ್ಕೆ ಮೊಟ್ಟೆಯ ಮೇಲೆ ವಿಪರೀತ ಪ್ರೀತಿ ಎನ್ನುವುದು ಬಲ್ಲವರ ಅಂಬೋಣ. ಗೂಡಿನ ಹತ್ತಿರ ಹೋದರೂ ಪಕ್ಕದಲ್ಲಿ ಹಾರಿ ಕುಳಿತು ನಿಮಿಷಾರ್ಧದಲ್ಲಿ ಗೂಡಿಗೆ ಬರುತ್ತವೆ. ಇವು ಸಾಮಾನ್ಯವಾಗಿ ಮೂರು ಮೊಟ್ಟೆಗಳನಿಡುತ್ತವೆ. ಗಂಡು-ಹೆಣ್ಣುಗಳೆರಡು ಕಾವು ಕೂರುತ್ತವೆ.
ಕೀಟಗಳನ್ನು, ಮತ್ತು ಹುಲ್ಲಿನ ಬೀಜಗಳನ್ನು ತಿನ್ನುವ ಇವು ಬಹುತೇಕ ಖಾಲಿ ಬಯಲಿರುವ ಕಡೆಗಳಲ್ಲಿ ಸಣ್ಣ ಹುಲ್ಲುಗಳು ಬೆಳೆದಿರುವ ಜಾಗದಲ್ಲಿ ಆಹಾರ ಹುಡುಕುತ್ತಾ ಇರುವುದನ್ನು ನೋಡಬಹುದು. ನೆಲದ ಬಣ್ಣದ ಇವುಗಳನ್ನು ದೂರದಿಂದ ಗುರುತಿಸುವುದು ಕಷ್ಟವಾಗುತ್ತದೆ. ಬಹುಶಃ ರಕ್ಷಣೆಗಾಗಿ ಇವು ಈ ರೀತಿಯಲ್ಲಿ ವಿಕಾಸ ಹೊಂದಿರಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243