ಕ್ರೀಡೆ

ಏಷ್ಯನ್ ಗೇಮ್ಸ್ | ಭಾರತ ಮಹಿಳಾ ಹಾಕಿ ತಂಡಕ್ಕೆ ಭರ್ಜರಿ ಜಯ

Published

on

ಸುದ್ದಿದಿನ, ಜಕಾರ್ತ: ಇಲ್ಲಿ ನಡೆಯುತ್ತಿರುವ 18 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡ 21-0 ಗೋಲುಗಳಿಂದ ಕಜಕಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ವನಿತೆಯರು ಏಷ್ಯನ್‌ ಗೇಮ್ಸ್ ನಲ್ಲಿ ಸತತ 2 ನೇ ಜಯ ದಾಖಲಿಸಿದ್ದಾರೆ.

ಬಿ ಗುಂಪಿನಲ್ಲಿ ಮಂಗಳವಾರ ಗೆಲೊರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಗುರ್ಜಿತ್ ಕೌರ್ 4 ಗೋಲುಗಳಿಸಿದರು. ಲಾಲ್ರೆಮ್ಸಿಯಾಮಿ, ವಂದನಾ ಕಟಾರಿಯಾ ಮತ್ತು ನವನೀತ್ ಕೌರ್ ಹ್ಯಾಟ್ರಿಕ್ ಗೋಲು ಗಳಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.

ಪಂದ್ಯದ ಆರಂಭದಿಂದಲೇ ಪ್ರಭಾವಿ ಆಟಕ್ಕಿಳಿದ ಭಾರತ ತಂಡ, ಕಜಕಸ್ತಾನ ವನಿತೆಯರ ಮೇಲೆ ಸವಾರಿ ಮಾಡಿತು. ಮೊದಲ ಕ್ವಾರ್ಟರ್ ನ 7 ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲಿನ ಖಾತೆ ತೆರೆದರು. ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ 5-0 ಮುನ್ನಡೆಯಲ್ಲಿ ಭಾರತ ಇತ್ತು.

2 ನೇ ಕ್ವಾರ್ಟರ್ ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ವನಿತೆಯರ ತಂಡ, ಬರೋಬ್ಬರಿ 4 ಗೋಲು ದಾಖಲಿಸಿತು. ಇದರ ಪರಿಣಾಮವಾಗಿ ಮೊದಲಾರ್ಧದ ಮುಕ್ತಾಯಕ್ಕೆ ಭಾರತ 9-0 ಮುನ್ನಡೆ ಪಡೆಯಿತು.

3 ಮತ್ತು 4 ನೇ ಕ್ವಾರ್ಟರ್ ನಲ್ಲಿ ಭಾರತದ ಆಟಗಾರ್ತಿಯರು ಪಾರಮ್ಯ ಮೆರೆದರು. ಪೂರ್ಣಾವಧಿ ಆಟದಲ್ಲಿ ಕಜಕಸ್ತಾನ ತಂಡ, ಭಾರತದ ಗೋಲ್ ಕೀಪರ್ ಭದ್ರಕೋಟೆಯನ್ನು ದಾಟುವ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version