ದಿನದ ಸುದ್ದಿ
ವಿಧಾನಸಭಾ ಚುನಾವಣೆ; ಅಭ್ಯರ್ಥಿಗಳ ಪರ ಇಂದೂ ಸಹ ರಾಷ್ಟ್ರೀಯ ನಾಯಕರ ಪ್ರಚಾರ
ಸುದ್ದಿದಿನ,ಡೆಸ್ಕ್ : ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಮತ್ತಷ್ಟು ಬಿರುಸುಗೊಂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ರಾಜ್ಯದಲ್ಲೇ ಬೀಡಬಿಟ್ಟು ತಮ್ಮ ಪಕ್ಷಗಳ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ ಹಿರಿಯ ಧುರೀಣ ಹಾಗೂ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಚಿತ್ರದುರ್ಗ ಹಾಗೂ ಹೊಸಪೇಟೆ ಹಾಗೂ ರಾಯಚೂರಿನ ಸಿಂಧನೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಂತರ ಕಲಬುರಗಿಯಲ್ಲಿ ರೋಡ್ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ಪಕ್ಷದ ಅನೇಕ ಹಿರಿಯ ನಾಯರಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ, ಇಂದು ಮಂಗಳೂರಿನ ಕೊಳ್ನಾಡು, ಮೂಡಬಿದರೆ, ಅಂಕೋಲಾ ಹಾಗೂ ಬೈಲಹೊಂಗಲದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಇನ್ನೋರ್ವ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ನಿನ್ನೆ ಚುರುಕಿನ ಪ್ರಚಾರ ನಡೆಸಿದರು. ಮೈಸೂರಿನ ವರುಣಾ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ನಂತರ ಅವರು ಕೊಳ್ಳೇಗಾಲ ಕ್ಷೇತ್ರದ ಸಂತೇಮಾರನಹಳ್ಳಿ ಹಾಗೂ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಗಮನ ಸೆಳೆದರು. ಚಿತ್ರನಟ ಸುದೀಪ್ ಸಹ ಬಿರುಸಿನಿಂದ ಪ್ರಚಾರ ಕೈಗೊಂಡಿದ್ದು , ನಿನ್ನೆ ಬಾಗಲಕೋಟೆ, ಬದಾಮಿ ಮತ್ತು ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಸಹ ಚುನಾವಣಾ ಅಖಾಡದಲ್ಲಿ ಚುರುಕಿನಿಂದ ಪ್ರಚಾರ ಕೈಗೊಂಡಿದ್ದು, ನಿನ್ನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಪಕ್ಷದ ಪರ ಪ್ರಚಾರ ನಡೆಸಿದರು. ಚಿತ್ರನಟ ಶಿವರಾಜ್ ಕುಮಾರ್ ಮತ್ತಿತರರು ಈ ಸಂದರ್ಭಲ್ಲಿ ಉಪಸ್ಥಿತರಿದ್ದರು. ನಂತರ ರಾಹುಲ್ ಗಾಂಧಿ ಚಿಕ್ಕಮಗಳೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಡ್ಯದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ನಂತರ ಚಿಂತಾಮಣಿ, ಹೊಸಕೋಟೆ ಹಾಗೂ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಜೆಡಿಎಸ್ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆಯ ಲಿಂಗಸಗೂರು, ಮಾನ್ವಿಯಲ್ಲಿ ಪಕ್ಷದ ಸಮಾವೇಶದಲ್ಲಿ ಮತಯಾಚಿಸಿದರು. ಇಂದು ಚೆನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ್ರು ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಬಿಜೆಪೆ ಅಧ್ಯಕ್ಷ ಜೆ.ಪಿ.ನಡ್ಡಾ ಮಾಗಡಿ ಮತ್ತು ರಾಮನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಮತ್ತು ಪಕ್ಷೇತರರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಚಾರ ನಡೆಸಿ ಮತಯಾಚಿಸುತ್ತಿರುವುದು ಸಾಮಾನ್ಯವಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243