ದಿನದ ಸುದ್ದಿ
ವಾರಾಣಸಿಯ ಗ್ಯಾನವಾಪಿ ಮಸೀದಿಯಲ್ಲಿ ವಿಡಿಯೋ ಸಮೀಕ್ಷೆ ಮುಕ್ತಾಯ
ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಗ್ಯಾನವಾಪಿ ಮಸೀದಿಯಲ್ಲಿ ನಡೆಯುತ್ತಿದ್ದ ವಿಡಿಯೊ ಸಮೀಕ್ಷೆ ಇಂದು ಮುಕ್ತಾಯಗೊಂಡಿದೆ.
ಈ ಪ್ರದೇಶದಲ್ಲಿ ಶಿವಲಿಂಗ ದೊರೆತ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ವಾರಾಣಸಿಯ ಸಿವಿಲ್ ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಈ ಪ್ರದೇಶಕ್ಕೆ ಯಾರೊಬ್ಬರೂ ಪ್ರವೇಶಿಸದಂತೆ ತಕ್ಷಣ ನಿಷೇಧಾಜ್ಞೆ ಹೊರಡಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಗ್ಯಾನವಾಪಿ ಮಸೀದಿ ಸಮುಚ್ಛಯದಲ್ಲಿ ಶಿವಲಿಂಗ ದೊರೆತ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಲಯಕ್ಕೆ ಮೊರೆಹೋದ ಕಾರಣ ಈ ಆದೇಶ ಹೊರಬಿದ್ದಿದೆ. ಇದಕ್ಕೂ ಮುನ್ನ ನ್ಯಾಯಾಲಯ ನೇಮಿಸಿದ್ದ ತಂಡ ಮೂರನೇ ದಿನವಾದ ಇಂದು ಗ್ಯಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ಮುಂದುವರಿಸಿ, ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಿತು.
ಸಮೀಕ್ಷಾ ತಂಡ ಸಿವಿಲ್ ನ್ಯಾಯಾಲಯಕ್ಕೆ ನಾಳೆ ತನ್ನ ವರದಿ ಸಲ್ಲಿಸಲಿದೆ. ನ್ಯಾಯಾಲಯ ನೇಮಿಸಿದ್ದ ವಿಶೇಷ ಸಹಾಯಕ ಆಯುಕ್ತ ವಿಶಾಲ್ ಸಿಂಗ್ ಸರ್ವೆ ಕಾರ್ಯ ಸುಸೂತ್ರವಾಗಿ ನಡೆದಿದ್ದು, ಎಲ್ಲ ಸಾಕ್ಷ್ಯಾಧಾರಗಳ ಛಾಯಾಚಿತ್ರ ತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243