ದಿನದ ಸುದ್ದಿ
ಅಟಲ್ ಪೆನ್ಷನ್ ಗರಿಷ್ಠ ಮಿತಿ ಏರಿಕೆಗೆ ಚಿಂತನೆ; 10,000 ರೂ. ಹೆಚ್ಚಿಸಲು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಕೆ
ಸುದ್ದಿದಿನ ಡೆಸ್ಕ್: ಪಿಎಫ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಯು ಸಾರ್ವಜನಿಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಅಟಲ್ ಪೆನ್ಷನ್ ಯೋಜನೆಯ ಚಂದಾದಾರರಿಕೆ ಹಣದ ಗರಿಷ್ಠ ಮಿತಿ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
ಚಂದಾದಾರಿಕೆಯನ್ನು ತಿಂಗಳಿಗೆ 10,000 ರೂ. ವರೆಗೂ ಹೆಚ್ಚಿಸುವ ಕುರಿತ ಪ್ರಸ್ತಾವನೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗಿದೆ. ಪ್ರಸ್ತುತ 5,000ರೂ. ವರೆಗೂ ಮಾತ್ರ ಪಾವತಿಸಲು ಅವಕಾಶವಿದೆ. ಯೋಜನೆಯಡಿ ಪಿಂಚಣಿ ಮೌಲ್ಯ ಹೆಚ್ಚಿಸುವ ಅಗತ್ಯತೆ ಇದೆ ಎಂದು ಹಣಕಾಸು ಸೇವಾ ಇಲಾಖೆಯ (ಡಿಎಫ್ಎಸ್) ಜಂಟಿ ನಿರ್ದೇಶಕ ಮದ್ನೇಶ್ ಕುಮಾರ್ ಮಿಶ್ರಾ ಪ್ರಾಧಿಕಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೆನ್ಷನ್ ಚಂದಾದಾರಿಕೆ ಹೆಚ್ಚಿಸುವ ಕುರಿತ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಜಿ ಕಾಂಟ್ರಾಕ್ಟರ್ ತಿಳಿಸಿದ್ದಾರೆ.
ಪ್ರಸ್ತುತ 1000- 5000 ರೂ.ವರೆಗೂ ಒಂದು ತಿಂಗಳಿಗೆ ಕಟ್ಟುವ ಯೋಜನೆಗಳು ಇವೆ. 60 ವರ್ಷ ವಯಸ್ಸಾದ ನಂತರ 5,000 ರೂ.ಗಿಂತ ಹೆಚ್ಚಿನ ಪೆನ್ಷನ್ ಹಣ ಬೇಕಾಗುತ್ತದೆ ಎಂದು ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದ್ದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಆಟೋ ಎನ್ರೋಲ್ಮೆಂಟ್ ಮತ್ತು ಗರಿಷ್ಠ ವಯೋಮಿತಿ ಹೆಚ್ಚಿಸುವ ಕುರಿತ ಇನ್ನೆರಡು ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. 18-40 ವಯೋಮಿತಿಯವರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಇದನ್ನು 18-50 ವರ್ಷಕ್ಕೆ ಹೆಚ್ಚಿಸುವ ಕುರಿತು ಪ್ರಸ್ತಾವನೆ ಇದೆ. 1.02 ಚಂದಾದಾರರಿದ್ದಾರೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 60-70 ಲಕ್ಷ ಚಂದಾರರು ಏರಿಕೆಯಾಗು ಸಾಧ್ಯತೆ ಇದೆ.