ಸಿನಿ ಸುದ್ದಿ

ಪಂಚಿಂಗ್ ಕಾಮಿಡಿಯ ಅಯೋಗ್ಯ ಮನರಂಜನೆಗೆ ಯೋಗ್ಯ

Published

on

ಸುದ್ದಿದಿನ ಡೆಸ್ಕ್| ಮಂಡ್ಯದ ಪುಟ್ಟ ಗ್ರಾಮವೊಂದರ ಪಂಚಾಯಿತಿ ಸದಸ್ಯ ಸಿದ್ದ ಒಳ್ಳೆಯ ಮಾತುಗಾರ, ಬಾಲ್ಯದಲ್ಲಿ ತನ್ನ ಕುಟುಂಬಕ್ಕೆ ಆಗಿರುವ ಅವಮಾನದಿಂದ ಕುದ್ದುಹೋದ ಆತ, ಪಂಚಾಯ್ತಿ ಸದಸ್ಯನಾಗಬೇಕೆಂಬ ಕನಸು ಕಾಣುತ್ತಾನೆ. ಇದನ್ನು ಬೆನ್ನು ಹತ್ತುವ ಹುಡುಗನ ಸೋಲು, ಗೆಲುವಿನ ಕತೆಯೇ ಅಯೋಗ್ಯ ಸಿನಿಮಾದ ಜೀವಾಳ.

ಬಡ ಕುಟುಂಬದ ಹುಡುಗ ಸಿದ್ದೇಗೌಡ ಪಂಚಾಯ್ತಿ ಅಧ್ಯಕ್ಷ ಬಚ್ಚೇಗೌಡ (ರವಿಶಂಕರ್) ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಾನೆ. ಯಾವುದೇ ಸೌಲಭ್ಯ ಇಲ್ಲದ ಊರಲ್ಲಿ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾಗಿ ಬಡವರಿಗೆ ನೆರವಾಗಬೇಕೆಂಬುದು ಸಿದ್ದನ ಮಹದಾಸೆ.
ರಾಜಕೀಯಕ್ಕಿಳಿಯಬೇಕೆಂಬ ಪ್ರಯತ್ನದ ನಡುವೆಯೇ ಕುಟುಂಬದವರು ಮದುವೆಯಾಗುವಂತೆ ಒತ್ತಾಯ ಮಾಡುತ್ತಾರೆ. ತಾಯಿಯ ಮಾತಿಗೆ ಕಟ್ಟುಬಿದ್ದು ಮದುವೆಗೆ ಒಪ್ಪಿದರೂ ಯಾವುದೇ ದುಡಿಮೆ ಇಲ್ಲದ ಸಿದ್ದನಿಗೆ ಹೆಣ್ಣು ಕೊಡೋರು ಮುಂದೆ ಬರಲ್ಲ.
ಹೀಗಿರುವಾಗ ಸಿದ್ದನ ಕುಟುಂಬ ಬ್ರೋಕರ್‍ವೊಬ್ಬನ ನೆರವಿನಿಂದ ಹೆಣ್ಣು ಹುಡುಕಲು ಪ್ರಯತ್ನ ಪಡುತ್ತಾರೆ. ಆದರೆ, ಸಿದ್ಧ ಬ್ರೋಕರ್‍ನ ಮಗಳು ನಂದಿನಿ (ರಚಿತಾ ರಾಂ) ಮೇಲೆ ಪ್ರೇಮಾಂಕುರವಾಗುತ್ತದೆ. ತನ್ನ ಮಗಳನ್ನೇ ಪ್ರೀತಿ ಮಾಡುತ್ತಿರುವ ವಿಷಯ ತಿಳಿದು ನಾಯಕಿಯ ತಂದೆ ತಿರುಗಿಬೀಳುತ್ತಾನೆ. ಇದರ ಮಧ್ಯೆಯೇ ಸಿದ್ದನ ರಾಜಕೀಯ ಜೀವನ ಆರಂಭವಾಗುತ್ತದೆ. ಬಚ್ಚೇಗೌಡನ ವಿರುದ್ಧ ಸ್ಪರ್ಧಿಸುವ ಸಿದ್ದೇಗೌಡ ಚುನಾವಣೆಯಲ್ಲಿ ಗೆಲ್ಲುತ್ತಾನೋ ಸೋಲುತ್ತಾನೋ ಎಂಬುದೇ ಕ್ಲೈಮ್ಯಾಕ್ಸ್.

ಚಿತ್ರದ ಮೊದಲರ್ಧದಲ್ಲಿ ಕಾಮಿಡಿ ಪಂಚ್‍ಗಳು, ಬಿಗಿಯಾದ ಸ್ಕ್ರಿಪ್ಟ್ ಪ್ರೇಕ್ಷಕನನ್ನು ಹಿಡಿದಿಡುತ್ತದೆ. ನಿರೂಪಣೆ ಇನ್ನಷ್ಟು ಮೋಹಕಗೊಳಿಸಬಹುದಿತ್ತು. ಚಿತ್ರದಲ್ಲಿರುವ ಕಾಮಿಡಿ ದೃಶ್ಯಗಳೇ ಜೀವಾಳ. ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಸಾದರಪಡಿಸುವಲ್ಲಿ ನಿದೇರ್ಶಕ ಮಹೇಶ್ ಕುಮಾರ್ ಅವರು ಯಶಸ್ವಿಯಾಗಿದ್ದಾರೆ. ಮಾಸ್ತಿ ಅವರ ಬರವಣಿಗೆ ಗಮನ ಸೆಳೆಯುತ್ತದೆ. ಒಂದು ಮಾಸ್ ಎಂಟರ್‍ಟೇನ್ಮೆಂಟ್ ಸಿನಿಮಾವಾಗಿ ಅಯೋಗ್ಯ ಒಂದು ಯೋಗ್ಯ ಸ್ಥಾನದಲ್ಲಿದೆ. ಈ ವಿಂಕೆಂಡ್‍ಗೆ ಹೇಳಿಮಾಡಿಸಿದ ಸಿನಿಮಾ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version