ದಿನದ ಸುದ್ದಿ

ನಾಡಿನೆಲ್ಲೆಡೆ ಆಯುಧಪೂಜೆ ಸಡಗರ; ಮೈಸೂರು ಅರಮನೆಯಲ್ಲಿ ಪಟ್ಟದ ಹಸು, ಆನೆ, ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ

Published

on

ಸುದ್ದಿದಿನಡೆಸ್ಕ್:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನವಾದ ಇಂದು ಸಾಂಪ್ರದಾಯಿಕವಾಗಿ ಆಯುಧಪೂಜೆ ನೆರವೇರಿತು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಪೂಜೆ ನೆರವೇರಿಸಿದರು.

ಅರಮನೆ ಮುಂಭಾಗದಲ್ಲಿ ಪಟ್ಟದ ಹಸು, ಆನೆ, ಕುದುರೆ, ಒಂಟೆಗಳಿಗೆ, ಪಲ್ಲಕ್ಕಿ ಹಾಗೂ ರಾಜರ ಕಾರುಗಳಿಗೆ ಪೂಜೆ ಸಲ್ಲಿಸಿದರು. ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೂ ಪೂಜೆ ನೆರವೇರಿಸಲಾಯಿತು. ದಸರಾ ವೈಭವ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದಾರೆ.

ರಾಜ್ಯಾದ್ಯಂತ ನವರಾತ್ರಿಯ 9ನೇ ದಿನವಾದ ಇಂದು ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಆಯುಧಪೂಜೆ ಮತ್ತು ದಸರಾ ಮಹೋತ್ಸವದ ಸಂಭ್ರಮ ಇಮ್ಮಡಿಗೊಂಡಿದೆ. ಆಯುಧ ಪೂಜೆಯ ಭಾಗವಾಗಿ ಬೆಳಿಗ್ಗೆಯಿಂದ ಜನರು ವಾಹನಗಳನ್ನು ತೊಳೆದು ಹೂವು, ಬಾಳೆಕಂದುಗಳನ್ನು ಕಟ್ಟಿ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಆಯುಧಪೂಜೆಯನ್ನು ಶ್ರಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ತಮ್ಮ ವಾಹನಗಳಿಗೆ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಕೋಲಾರ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಯುಧ ಪೂಜೆ ಹಿನ್ನಲೆ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಆಯುಧಪೂಜೆ ಸಂಭ್ರಮ ಇಮ್ಮಡಿಗೊಂಡಿದ್ದು, ಕಾಫಿ ತೋಟಗಳಲ್ಲಿ ಮಾಲೀಕರು ತೋಟದ ಯಂತ್ರೋಪಕರಣಗಳನ್ನು ಶೃಂಗರಿಸಿ ಪೂಜೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಾವೇರಿ ಜಿಲ್ಲೆಯಾದ್ಯಂತ ಆಯುಧ ಪೂಜೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version