ದಿನದ ಸುದ್ದಿ

ಶಿವಮೊಗ್ಗ ನಗರದ ಪ್ರತಿಪ್ರಜೆಗೂ ಉಚಿತ ಆಯುರ್ವೇದ ಔಷಧ ವಿತರಣೆಗೆ ಕ್ರಮ : ಕೆ.ಎಸ್.ಈಶ್ವರಪ್ಪ

Published

on

ಸುದ್ದಿದಿನ,ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿ ಕುಟುಂಬದ ಪ್ರತಿ ವ್ಯಕ್ತಿಗೆ ಕೋರೋನ ಸೋಂಕು ನಿರೋಧಕ ಹಾಗೂ ಆರೋಗ್ಯ ಶಕ್ತಿ ವೃದ್ಧಿಸುವ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಶಿಫಾರಸ್ಸು ಮಾಡಿರುವ ಆಯುರ್ವೇದೀಯ ಔಷಧಿಗಳನ್ನು ಸುಮಾರು 4ಲಕ್ಷ ವ್ಯಕ್ತಿಗಳಿಗೆ ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.

ಈ ಕುರಿತು ಅವರು ಸೋಮವಾರ ಪೇಸ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಶಿವಮೊಗ್ಗದ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಆಯೋಜಿಸಲಾಗಿದ್ದು, ದೇಶದಲ್ಲೇ ಅತೀ ಮಹತ್ವದ ಮೊದಲ ಕಾರ್ಯಕ್ರಮ ಇದಾಗಿದೆ ಎಂದ ಅವರು, ಮೊದಲ ಹಂತವಾಗಿ ನಗರದ ಸುಮಾರು85,000 ಕುಟುಂಬಗಳ 4ಲಕ್ಷ ಜನರಿಗೆ 4ಕೋಟಿ ರೂ.ಗಳ ಮೌಲ್ಯದ ಆಯುರ್ವೇದೀಯ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಪ್ರತಿ ಕಿಟ್ ಸುಮಾರು 350/- ರೂ. ಬೆಲೆಯುಳ್ಳದ್ದಾಗಿದೆ. ಈ ಔಷಧದ ಕಿಟ್‍ನಲ್ಲಿ ಸುಮಾರು 3ರೀತಿಯ ಔಷಧಗಳಿದ್ದು, ಅವುಗಳ ಬಳಕೆಯ ಕುರಿತು ವಿವರವಾದ ಮಾಹಿತಿಯನ್ನು ಕಿಟ್‍ನಲ್ಲಿ ನಮೂದಿಸಲಾಗಿದೆ. ಈ ಔಷಧದ ಕಿಟ್‍ನ್ನು ಪಡೆಯಲಿಚ್ಚಿಸುವ ಪ್ರತಿಯೊಬ್ಬರೂ ಆಧಾರ್ ಕಾರ್ಡ್‍ನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ಔಷಧಗಳನ್ನು ಪಡೆಯುವುದು ಹಾಗೂ ಎರೆಡೆರೆಡು ಬಾರಿ ಔಷಧ ಪಡೆಯವುದು ಅಸಾಧ್ಯವಾಗಲಿದೆ ಎಂದವರು ನುಡಿದರು.

ಸುಮಾರು 4ಕೋಟಿ ರೂ.ಗಳ ಮೌಲ್ಯದ ಈ ಔಷಧಗಳನ್ನು ನಗರದ ಎಲ್ಲರಿಗೂ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಸೇವಕರಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ಆರ್ಥಿಕವಾಗಿ ನೆರವು ನೀಡಲು ಬಂದಿದ್ದಾರೆ. ನೆರವು ನೀಡಲಿಚ್ಚಿಸುವವರ ನೆರವನ್ನು ಈ ಪವಿತ್ರ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುವುದು ಎಂದರು.

ವಿಶೇಷವಾಗಿ ಈ ಕಿಟ್‍ನಲ್ಲಿ ಎರಡು ರೀತಿಯ ಗುಳಿಗೆಗಳು ಹಾಗೂ ಕಷಾಯ ಪುಡಿ ಇರಲಿದೆ. ಈ ಆಯುರ್ವೇದ ಔಷಧಗಳ ವಿತರಣಾ ಸಮಾರಂಭವು ಜುಲೈ 29ರಂದು ಬೆಳಿಗ್ಗೆ 11ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ||ಗಿರಿಧರ ಕಜೆ ಅವರು ಉದ್ಘಾಟಿಸಲಿದ್ದಾರೆ. ಔಷಧ ವಿತರಣೆಯ ಮೊದಲ ಕಾರ್ಯಕ್ರಮವು ಅಂದು ಸಂಜೆ 4ರಿಂದ ಡಾ|| ಸಿ.ಎಲ್.ರಾಮಣ್ಣ ರಸ್ತೆಯಿಂದ ಆರಂಭಗೊಳ್ಳಲಿದೆ ಎಂದರು.

ಆರಂಭದ ಹಂತವಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ಅಂದರೆ ಬೂತ್ ಮಟ್ಟದಲ್ಲಿ ಔಷಧ ವಿತರಣೆ ಕಾರ್ಯಕ್ರಮವು 3ಹಂತದಲ್ಲಿ ನಡೆಯಲಿದೆ. ಅದಕ್ಕಾಗಿ ಕಾರ್ಯಕರ್ತರ ಸುಮಾರು 300ತಂಡಗಳನ್ನು ರಚಿಸಲಾಗಿದೆ. ಔಷಧಗಳ ಲಭ್ಯತೆಯ ಆಧಾರದ ಮೇಲೆ ಔಷಧ ವಿತರಣೆ ಆರಂಭಗೊಂಡ ದಿನದಿಂದ ಮುಂದಿನ 8-10ದಿನಗಳಲ್ಲಿ ನಗರ ಪ್ರತಿಯೊಬ್ಬರಿಗೂ ಔಷಧ ದೊರೆಯುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದ ಅವರು, ನಂತರದ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಕಾರ್ಯಕ್ರಮವನ್ನು ವಿತರಿಸುವ ಆಶಯ ಹೊಂದಲಾಗಿದೆ ಎಂದರು.

ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಚನ್ನಬಸಪ್ಪ, ಮೇಯರ್ ಶ್ರೀಮತಿ ಸುವರ್ಣ ಶಂಕರ್, ಶ್ರೀಮತಿ ಸುರೇಖಾ ಮುರಳೀಧರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್, ಗಿರೀಶ್ ಕಾರಂತ್, ಗಿರೀಶ್ ಪಟೇಲ್, ನಾಗರಾಜ್, ಬಳ್ಳೆಕೆರೆ ಸಂತೋಷ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version