ದಿನದ ಸುದ್ದಿ

ಆಯುಷ್ ಉತ್ಪನ್ನಗಳ ಉತ್ತೇಜನಕ್ಕಾಗಿ ಆಯುಷ್ ವೀಸಾ ಶೀಘ್ರ ಆರಂಭ : ಪ್ರಧಾನಮಂತ್ರಿ ಪ್ರಕಟ

Published

on

ಸುದ್ದಿದಿನ ಡೆಸ್ಕ್ : ಭಾರತದಲ್ಲಿ ರೋಗ ಗುಣಮುಖ ಈ ದಶಕದ ಬಹುದೊಡ್ಡ ಬ್ರ್ಯಾಂಡ್ ಆಗಬೇಕು. ಆಯುರ್ವೇದ, ಯುನಾನಿ, ಸಿದ್ಧ ಔಷಧ ಆಧರಿತ ಯೋಗಕ್ಷೇಮ ಕೇಂದ್ರಗಳು ಜನಪ್ರಿಯವಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಭಾರತದ ವೀಸಾ ವ್ಯವಸ್ಥೆಯಲ್ಲಿ ಆಯುಷ್ ವೀಸಾ ವಿಭಾಗವನ್ನು ಸೃಷ್ಟಿಸಲಾಗುವುದು ಎಂದು ಪ್ರಕಟಿಸಿದ ಪ್ರಧಾನಿ, ಇದರಿಂದ ವಿದೇಶಿಗರು ಭಾರತದಲ್ಲಿರುವ ಆಯಷ್ ವಲಯದ ನಾನಾ ಔಷಧಗಳ ಪ್ರಯೋಜನವನ್ನು ಪಡೆಯುವಂತಾಗಬೇಕು ಎಂದರು.

ಗುಜರಾತ್ನ ಗಾಂಧಿ ನಗರದಲ್ಲಿರುವ ಮಹಾತ್ಮ ಮಂದಿರದಲ್ಲಿ ಆಯೋಜಿಸಿರುವ ಮೂರು ದಿನಗಳ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವಿನ್ಯತಾ ಸಮ್ಮೇಳನ ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್ ಘೆಬ್ರಿಯೆಸಸ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಆಯುಷ್ ರಫ್ತು ಉತ್ತೇಜನಾ ಮಂಡಳಿಗೆ ಡಿಜಿಟಲ್ ರೂಪದಲ್ಲಿ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಆಯುಷ್ ರಫ್ತು ಉತ್ತೇಜನಾ ಮಂಡಳಿಯ ಕಾರ್ಯಾರಂಭದೊಂದಿಗೆ ಆಯುಷ್ ವಲಯವು ಇನ್ನು ಮುಂದೆ ಅತ್ಯಂತ ಗರಿಷ್ಠ ಹೂಡಿಕೆಯನ್ನು ಆಕರ್ಷಿಸಲಿದೆ. ಅದು ಇಂದಿನಿಂದಲೇ ಆರಂಭವಾಗಲಿದೆ ಎಂದರು.

ಆಯುಷ್ ವಲಯವು ಅಮಿತ ಹೂಡಿಕೆ ಮತ್ತು ಆವಿಷ್ಕಾರ ಸಾಧ್ಯತೆಗಳನ್ನು ಹೊಂದಿದೆ. ಆಯುಷ್ ಉತ್ಪನ್ನಗಳ ವಹಿವಾಟು ಇದೀಗ 18 ಶತಕೋಟಿ ಡಾಲರ್ ಗಡಿ ದಾಟಿದೆ ಎಂದರು.

ಆಯಷ್ ಸಚಿವಾಲಯವು ಸಾಂಪ್ರದಾಯಿಕ ಕ್ಷೇತ್ರದಲ್ಲಿ ನವೋದ್ಯಮ ಸಂಸ್ಕೃತಿ ಉತ್ತೇಜಿಸಲು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೆ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆಯಲ್ಲಿ ಪೋಷಣಾ ಕೇಂದ್ರ ಅಭಿವೃದ್ಧಿಪಡಿಲಾಗಿದೆ ಎಂದರು.

ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ಮಾತನಾಡಿ, ಭಾರತವು ಜಾಗತಿಕ ಔಷಧ ತಾಣವಾಗಿದೆ. ಆಯುರ್ವೇದ, ಆಯುಷ್ ಮತ್ತು ಸಾಂಪ್ರದಾಯಿಕ ಔಷಧ ಉತ್ಪನ್ನಗಳಲ್ಲಿ ಭಾರತವು ಜಾಗತಿಕ ಸರದಾರನಾಗಿ ಹೊರಹೊಮ್ಮಲಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್ ಘೆಬ್ರಿಯೆಸಸ್ ಮಾತನಾಡಿ, ಭಾರತವು ಇಡೀ ಜಗತ್ತಿಗೆ ಹೋಗಲಿದೆ ಮತ್ತು ಇಡೀ ಜಗತ್ತೇ ಆಯುಷ್ ಉತ್ಪನ್ನಗಳಿಗಾಗಿ ಭಾರತಕ್ಕೆ ಬರಲಿದೆ ಎಂದರು.

ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಆಯಷ್ ಹೂಡಿಕೆ ಮತ್ತು ನಾವಿನ್ಯತಾ ಸಮಾವೇಶದಲ್ಲಿ 5ಅಧಿವೇಶನಗಳು, 8ದುಂಡುಮೇಜಿನ ಸಭೆಗಳು, 6ಕಾರ್ಯಾಗಾರಗಳು ಮತ್ತು 6 ವಿಚಾರಸಂಕಿರಣಗಳು ಜರುಗಲಿವೆ. ಆಯುಷ್ ಕ್ಷೇತ್ರದ 90ಭಾಷಣಕಾರರು 100 ವಸ್ತುಪ್ರದರ್ಶಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version