ದಿನದ ಸುದ್ದಿ
ಸಾಮಾಜಿಕ ಸುಧಾರಣೆಗೆ ಡಾ. ಬಾಬು ಜಗಜೀವನ್‍ರಾಂ ಕೊಡುಗೆ ಅಪಾರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಡಾ.ಬಾಬು ಜಗಜೀವನರಾಂ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಬಣ್ಣಿಸಿದರು.
ಶನಿವಾರ (ಏ.5) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಹಾನಗರಪಾಲಿಕೆಯ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ 118ನೇ ಜಯಂತಿ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ ರಾಂ ಅವರು 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ ಜಗಜೀವನ ರಾಂ. ಕೇಂದ್ರ ಸರ್ಕಾರದಲ್ಲಿ ಹಲವಾರು ಮಹತ್ತರ ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಎಂದು ಹೇಳಿದರು.
ಪುಟ್ಟ ಬಾಲಕನಾಗಿರುವಾಗಲೇ ದೊಡ್ಡ ದೊಡ್ಡ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಂತ ಹಂತವಾಗಿ ಬೆಳೆದು. ಅಂದಿನ ಕಾಲದಲ್ಲಿಯೇ ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಇವರ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ, ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು.
ಸ್ವಾತಂತ್ರ್ಯ ನಂತರ ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದರು.
ಹಸಿರುಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಳ, ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅಂತಹ ಮಹಾನ್ ನಾಯಕರ ಜಯಂತಿಯ ಮೂಲಕ ಅವರ ಆದರ್ಶವನ್ನು ನಾವೆಲ್ಲಾ ಪಾಲಿಸಬೇಕು. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.
ಇದಕ್ಕೂ ಮುನ್ನ ಮಹಾನಗರಪಾಲಿಕೆ ಆವರಣದ ಉದ್ಯಾನದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಿ.ಬಿ.ರಸ್ತೆಯಲ್ಲಿರುವ ಗಾಂಧಿ ಸರ್ಕಲ್‍ನಿಂದ ಮೆರವಣೆಗೆ ಸಾಗಿ ಮಹಾನಗರಪಾಲಿಕೆ ಬಂದು ಸೇರಿತು.
ಈ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು ಸಂವಿಧಾನ ಪೀಠಿಕೆಯನ್ನು ಓದಿದರು. ಪ್ರತಿಭಾ ಪುರಸ್ಕಾರ: 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವರುಣ್, ಶೃತಿ, ಸೃಷ್ಠಿ, ಅರ್ಪಿತ, ಲಕ್ಷ್ಮೀ, ಹರ್ಷಧಾರೆ ಇವರಿಗೆ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ರಾಮಚಂದ್ರಪ್ಪ ಎ.ವಿ ಮಾತನಾಡಿ ದೇಶದಲ್ಲಿ ಕೃಷಿಯೇ ಅಭಿವೃದ್ಧಿಯ ಮೂಲಾಧಾರವಾಗಿದೆ. ಈ ದೃಷ್ಟಿಯಿಂದ ದೇಶದ ಭೀಕರ ಬರಗಾಲ, ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು ದೇಶದ ಅಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಾಯಕಾರಿಯಾಯಿತು ಎಂದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಸುರೇಶ್.ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ದೂಡಾ ಆಯುಕ್ತರಾದ ಹುಲ್ಲುಮನಿ ತಿಮ್ಮಣ್ಣ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿನಾರಾಯಣ ಮತ್ತು ರುದ್ರಮುನಿ, ದಲಿತ ಸಮಾಜದ ಮುಖಂಡರಾದ ಮಲ್ಲೇಶ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243