ದಿನದ ಸುದ್ದಿ

ಸಂತ್ರಸ್ಥರಿಗೆ ಶಿಕ್ಷಣ, ನೌಕರಿಯಲ್ಲಿ ಶೇ.5 ರಷ್ಟು ಮೀಸಲಾತಿ ಕಾಲಮಿತಿ ವಿಸ್ತರಣೆಗೆ ಪ್ರಸ್ತಾವನೆ

Published

on

ಸುದ್ದಿದಿನ,ಬಾಗಲಕೋಟೆ : ಬಾಗಲಕೋಟೆ ಮುಳುಗಡೆ ಸಂತ್ರಸ್ಥರ ಕುಟುಂಬದ ಸದಸ್ಯರಿಗೆ ನೀಡಲಾಗುತ್ತಿರುವ ಶಿಕ್ಷಣ ಮತ್ತು ನೌಕರಿಯಲ್ಲಿ ಶೇ5 ರಷ್ಟು ಮೀಸಲಾತಿಯನ್ನು ಮುಂದಿನ 10 ವರ್ಷಗಳಿಗೆ ವಿಸ್ತರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ನಗರದ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಭಾಭವನದಲ್ಲಿ ಶುಕ್ರವಾರ ಜರುಗಿದ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಕೃಷ್ಣಾ ಮೇಲ್ದಂಡ ಯೋಜನೆಯ ಹಿನ್ನೀರಿನಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡ ಸಂತ್ರಸ್ಥರ ಕುಟುಂಬದ ಮಕ್ಕಳಿಗೆ ಶೇ.5 ರಷ್ಟು ಮೀಸಲಾಗಿತಿ ನೀಡಿ ಕಾಲಮಿತಿ ಹೇರಲಾಗಿತ್ತು. ಆದರೆ ಆ ಕಾಲಮಿತಿ ಕೊನೆಗೊಳ್ಳುತ್ತಿದ್ದು, ಮುಂದಿನ 10 ವರ್ಷಗಳ ವರೆಗೆ ಮೀಸಲಾತಿಯನ್ನು ಮುಂದುವರೆಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿರ್ಮಾನಿಸಿರುವುದಾಗಿ ತಿಳಿಸಿದರು.

ಸಂತ್ರಸ್ತರಿಗೆ ನೀಡಿದ ಪರಿಹಾರದ ಧನದ ಮೊತ್ತಕ್ಕೆ 4 ವರ್ಷ ಕಾಲಮಿತಿಯಲ್ಲಿ ನೋಂದಣಿ ಶುಲ್ಕ ರಿಯಾಯಿತಿ ನೀಡಲಾಗಿತ್ತು. ಆದರೆ ಆ ಕಾಲಮಿತಿಯನ್ನು ತೆಗೆದುಹಾಕಿ ಶಾಶ್ವತವಾಗಿ ನೋಂದಣಿ ಶುಲ್ಕ ವಿನಾಯಿತಿ ನೀಡಿ ಬೇರೆಡೆ ಆಸ್ತಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಲು ಸಹ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ. ನವನಗರದ ವಿವಿಧ ಸೆಕ್ಟರ್‍ಗಳಲ್ಲಿ ಪ್ರಾಧಿಕಾರದಿಂದ ನಿರ್ಮಿಸಲಾದ 289 ವಾಣಿಜ್ಯ ಮಳಿಗೆಗಳು ಕಾಲಿ ಇದ್ದು, ಹಾಳಾಗುತ್ತಿವೆ. ಬಾಡಿಗೆ ಕೂಡಾ ಬಂದಿರುವದಿಲ್ಲ. ಅವುಗಳನ್ನು ಸವಾಲಿನ ಮೂಲಕ ಮಾರಾಟ ಮಾಡಲು ಸಹ ತಿರ್ಮಾನಿಸಿರುವುದಾಗಿ ತಿಳಿಸಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರ ಜಂಟಿ ಖಾತೆಯಲ್ಲಿದ್ದ 8.92 ಕೋಟಿ ರೂ,ಗಳ ಅಭಿವೃದ್ದಿ ನಿಧಿಯ ಹಣವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರ ಜಂಟಿ ಖಾತೆಗೆ ಹಸ್ತಾಂತರಿಸಲು ತಿರ್ಮಾಣಿಸಲಾಗಿದೆ. ಇದರಿಂದ ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಅಭಿವೃದ್ದಿ ಬಳಕೆಗೆ ಅನುಕೂಲವಾಗಲಿದೆ ಎಂದರು. ಅಲ್ಲದೇ ನಗರಸಭೆಗೆ 15 ಎಕರೆ ಹಾಗೂ ಪಶುಸಂಗೋಪನಾ ಇಲಾಖೆಗೆ 1 ಎಕರೆ ಜಮೀನು ನೀಡಲು ಬಿಟಿಡಿಎ ಬೋರ್ಡ ಸಭೆಯಲ್ಲಿ ತಿರ್ಮಾನಿಸಿರುವುದಾಗಿ ಚರಂತಿಮಠ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಬಿಟಿಡಿಎ ಸದಸ್ಯರಾದ ಶಿವಾನಂದ ಟವಳಿ, ಮೋಹನ ನಾಡಗೌಡರ, ಕುಮಾರ ಎಳ್ಳಿಗುತ್ತಿ. ಬಿಟಿಡಿಎ ಮುಖ್ಯ ಅಭಿಯಂತರ ಅಶೋಕ ವಾಸನದ, ಪುನರ್ ವಸತಿ ಅಧಿಕಾರಿ ಗಣಪತಿ ಪಾಟೀಲ, ಕಾನೂನು ಸಲಹೆಗಾರ ಎ.ಎಸ್.ದೇಶಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

123 ಸಂತ್ರಸ್ಥರಿಗೆ ಹಕ್ಕುಪತ್ರ ವಿತರಣೆ

ಯುನಿಟ್-2ರ ವ್ಯಾಪ್ತಿಯಲ್ಲಿ ಬರುವ 123 ಸಂತ್ರಸ್ಥರ ಕುಟುಂಬಗಳಿಗೆ ಶಾಸಕ ವೀರಣ್ಣ ಚರಂತಿಮಠ ಅವರು ಶುಕ್ರವಾರ ಹಕ್ಕುಪತ್ರಗಳನ್ನು ವಿತರಿಸಿದರು. ಬಾಡಿಗೆದಾರರು 86, ಬಯಲು ಜಾಗೆ ಇದ್ದರು 8, ಮುಖ್ಯ ಸಂತ್ರಸ್ಥರು 8, ಮುಖ್ಯ ಸಂತ್ರಸ್ಥರ ವಯಸ್ಕರ ಮಕ್ಕಳು 13, ಅತೀಕ್ರಮಣದಾರರು 6 ಹಾಗೂ ವಾಣಿಜ್ಯ 2 ಸೇರಿ ಒಟ್ಟು 123 ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಲಾಯಿತು. ಇಲ್ಲಯವರೆಗೆ ಮೊದಲನೇ ಹಂತದಲ್ಲಿ 72, 2ನೇ ಹಂತದಲ್ಲಿ 93, 3ನೇ ಹಂತದಲ್ಲಿ 160 ಹಾಗೂ 4ನೇ ಹಂತದಲ್ಲಿ 123 ಸೇರಿ ಒಟ್ಟು 448 ವಿವಿಧ ಸಂತ್ರಸ್ಥರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version