ದಿನದ ಸುದ್ದಿ
ಬಾಗಲಕೋಟೆ ಪ್ರವಾಹ ಪರಿಸ್ಥಿತಿ ವೀಕ್ಷಣೆ | 8 ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾನಿ : ಡಿಸಿಎಂ ಕಾರಜೋಳ
ಸುದ್ದಿದಿನ,ಬಾಗಲಕೋಟೆ : ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಬಳಿ ಇರುವ ಸೇತುವೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು.
ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಪ್ರವಾಹ ಸ್ಥಿತಿಗತಿ ಅವಲೋಕಿಸಿದ ನಂತರ ಮಾತನಾಡಿದ ಅವರು ಘಟಪ್ರಭಾ ನದಿಗೆ 70 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಹಿಡಕಲ್ ಡ್ಯಾಮನಿಂದ 40 ಸಾವಿರ, ಮಾರ್ಕಂಡೆಯದಿಂದ 13 ಸಾವಿರ, ಹಿರಣ್ಯಕೇಶಿಯಿಂದ 11 ಸಾವಿರ, ಬಳ್ಳಾರಿ ನಾಲಾದಿಂದ 16 ಸಾವಿರ ನೀರು ಹರಿಬಿಡಲಾಗಿದ್ದು, ಇದರಿಂದ ಹಳ್ಳ ಕೊಳ್ಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುತ್ತದೆ ಎಂದು ತಿಳಿಸಿದರು.
ಪ್ರವಾಹದ ಪ್ರಮಾಣ ನಿಯಂತ್ರಣದಲ್ಲಿದ್ದು, ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಯ ಪಾತ್ರದಲ್ಲಿರುವ 31 ಗ್ರಾಮಗಳಿಗೆ ಅಪಾಯ ಬರುವ ದೃಷ್ಠಿಯಿಂದ ಸ್ಥಳಾಂತರಕ್ಕೆ ಎಲ್ಲ ಶಾಲೆಗಳನ್ನು ಸಜ್ಜುಗೊಳಿಸಲಾಗಿದೆ. ಜಾನುವಾರುಗಳಿಗೆ ಮೇವನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 19 ನಾವುಗಳಿದ್ದು, 2 ಹೊಸ ನಾವುಗಳನ್ನು ಖರೀದಿಸಲಾಗಿದೆ.
ಅಲ್ಲದೇ ಪ್ರವಾಹ ಪರಿಸ್ಥಿತಿ ಎದುರಿಸಲು ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ಸಹ ಖರೀದಿಸಲಾಗಿದೆ ಎಂದು ತಿಳಿಸಿದರು. ಕೃಷ್ಣಾ ನದಿಗೆ 1.81 ಲಕ್ಷ ಕ್ಯೂಸೆಕ್ಸ್, ಮಲಪ್ರಭಾ ನದಿಗೆ ನವೀಲು ತೀರ್ಥ ಜಲಾಶಯದಿಂದ 25 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರವಾಹ ಮತ್ತು ಮಳೆಯಿಂದಾದ ಹಾನಿಯ ವಿವರವನ್ನು ಸರಕಾರಕ್ಕೆ ಸಲ್ಲಿಸಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 8 ಸಾವಿರ ಹೆಕ್ಟೇರ್ ಕೃಷಿ ಬೆಳೆ, 8300 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೀಡಾಗಿವೆ. ಲೋಕೋಪಯೋಗಿ ರಾಜ್ಯ ಹೆದ್ದಾರಿ 94 ಕೊಚ್ಚಿ ಹೋಗಿವೆ. 11 ಸೇತುವೆಗಳು ಹಾನಿಗೊಳಗಾಗಿವೆ. ಜಿಲ್ಲಾ ಮುಖ್ಯ ರಸ್ತೆಗಳು 308 ಕಿ.ಮೀ ಹಾನಿಯಾಗಿರುವುದಾಗಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243