ದಿನದ ಸುದ್ದಿ

ದಾವಣಗೆರೆ | ಬಕ್ರೀದ್ ಹಬ್ಬದ ಪ್ರಯುಕ್ತ ನಾಗರಿಕ ಶಾಂತಿ ಸಭೆ, ಹಬ್ಬದ ವೇಳೆ ಶಾಂತಿ– ಸೌಹಾರ್ದ ಕಾಪಾಡಿ: ಎಸ್‍ಪಿ ಮನವಿ

Published

on

ಸುದ್ದಿದಿನ,ದಾವಣಗೆರೆ : ಕೊರೊನಾ ಸಂದರ್ಭ ಇದಾಗಿದ್ದು, ಸರ್ಕಾರದ ಸೂಚನೆಯನ್ನು ಪಾಲನೆ ಮಾಡುವ ಮೂಲಕ ಬಕ್ರೀದ್ ಹಬ್ಬದ ಆಚರಣೆಯ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಮನವಿ ಮಾಡಿದರು.

ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಕ್ರೀದ್ ಹಬ್ಬ ಹಿಂದಿನ ವರ್ಷ ಬಹಳಷ್ಟು ಶಾಂತಿಯುತವಾಗಿ ನಡೆದಿದೆ. ಈ ಬಾರಿಯೂ ಶಾಂತಿಯುತವಾಗಿ ಆಚರಿಸಲು ಎಲ್ಲಾ ಸಮುದಾಯದವರು ಕೈ ಜೋಡಿಸಬೇಕು ಎಂದು ಹೇಳಿದರು.

ಈದ್ಗಾ ಮೈದಾನಗಳಲ್ಲಿ ಈ ಬಾರಿ ಪ್ರಾರ್ಥನೆ ಮಾಡುವಂತಿಲ್ಲ. ತೆರೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ನಿರ್ವಹಿಸಲು ಅವಕಾಶವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ ಎಂದರು.

ಈದ್ಗಾ, ದರ್ಗಾ ಮಸೀದಿಗಳಲ್ಲಿ 50 ಜನ ಮೀರದಂತೆ ಪ್ರಾರ್ಥನೆ ಮಾಡಬೇಕು. ಮಸೀದಿ ಸಣ್ಣದಿದ್ದರೆ 20 ಜನ ಸಾಕು. ಒಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಸರದಿಯಂತೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆ ಮುಗಿದ ಮೇಲೆ ಶುಚಿಗೊಳಿಸಿ ಮತ್ತೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ.

60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ನಮಾಜ್ ಮಾಡುವವರು ತಮ್ಮ ಮಧ್ಯೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‍ನಿಂದ ಶುಚಿಗೊಳಿಸಿಕೊಳ್ಳಬೇಕು ಎಂದು ನಿಯಮಗಳನ್ನು ತಿಳಿಸಿದರು.

ದಾವಣಗೆರೆ ಮುಸ್ಲಿಂ ಮುಖಂಡರಾದ ಸಾದಿಕ್ ಪೈಲ್ವಾನ್ ಮಾತನಾಡಿ, ಸರ್ಕಾರದ ನಿಯಮ ಪಾಲಿಸಿ ಹಬ್ಬ ಆಚರಿಸಲು ನಮ್ಮೆಲ್ಲರ ಸಹಕಾರವಿದೆ. ಕೊರೊನಾ ಸಂದರ್ಭ ಇದಾಗಿದ್ದು, ಬಹಳಷ್ಟು ಕಟ್ಟುನಿಟ್ಟಾಗಿ ನಡೆದುಕೊಳ್ಳತ್ತೇವೆ. ಆ ಮೂಲಕ ಸರಳವಾಗಿ ಹಬ್ಬ ಆಚರಿಸುತ್ತೇವೆ ಎಂದರು.

ಚನ್ನಗಿರಿ ಮುಸ್ಲಿಂ ಮುಖಂಡರಾದ ಸರ್ದಾರ್ ಅಹಮದ್ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲಿದೆ. ನಮ್ಮ ರಕ್ಷಣೆಗಾಗಿ ಪೊಲೀಸರು, ವೈದ್ಯರು ಸೇರಿದಂತೆ ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಮೊದಲು ನಾವು ಅವರಿಗೆ ಧನ್ಯವಾದ ಅರ್ಪಿಸಬೇಕಾಗಿದ್ದು, ಯಾವುದೇ ತೊಂದರೆ ಉಂಟಾಗದಂತೆ ಹಬ್ಬ ಆಚರಿಸಲು ನಾವೆಲ್ಲರೂ ತಯಾರಾಗಿದ್ದೇವೆ ಎಂದರು.

ಕಾರ್ಮಿಕ ಮುಖಂಡರರಾದ ಉಮೇಶ್ ಆವರಗೆರೆ ಮಾತನಾಡಿ, ಕೊರೊನಾ ಕುರಿತು ಜನರಲ್ಲಿ ಬಹಳಷ್ಟು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಯಾರೊಬ್ಬರು ಧೃತಿಗೇಡಬಾರದು ಎಂದ ಅವರು, ಹಬ್ಬದ ಸಂದರ್ಭದಲ್ಲಿ ಯಾರಿಗೂ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಮಸೀದಿ ಸುತ್ತಮುತ್ತ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೋಲಿಸ್ ಹೆಚ್ಚುವರಿ ಅಧೀಕ್ಷಕ ರಾಜೀವ್, ಪೆÇಲೀಸ್ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಹಿಂದೂ ಮುಖಂಡರು, ಮುಸ್ಲಿಂ ಬಾಂಧವರು, ಧರ್ಮ ಗುರುಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version