ದಿನದ ಸುದ್ದಿ
ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣ : ಸಚಿವ ನಿತಿನ್ ಗಡ್ಕರಿ
ಸುದ್ದಿದಿನಡೆಸ್ಕ್:ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಚುನಾವಣೆ ಸಂದರ್ಭದಲ್ಲಿ ಅಪ ಪ್ರಚಾರ ಮಾಡಲಾಗಿತ್ತು. ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಿಸಿದ, ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. 1975ರಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳಿಗೆ ದೇಶ ಸಾಕ್ಷಿಯಾಗಿದೆ. ಬೆಂಗಳೂರಿನ ಸೆರೆಮನೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಸಮಾಜವಾದಿ ಮುಖಂಡ ಜಾರ್ಜ್ ಫರ್ನಾಂಡಿಸ್ ಮೊದಲಾದವರನ್ನು ಇರಿಸಲಾಗಿತ್ತು ಎಂದು ವಿವರಿಸಿದರು.
ತುರ್ತು ಪರಿಸ್ಥಿತಿಯ ವಿರುದ್ಧ ಭಾರತೀಯ ಜನಸಂಘ ಹೋರಾಡಿ ಪ್ರಜಾಸತ್ತೆಯನ್ನು ಉಳಿಸುವ ಕೆಲಸ ಮಾಡಿತ್ತು. ಪ್ರಜಾತಂತ್ರವು ೪ ಸ್ಥಂಭಗಳ ಮೇಲೆ ನಿಂತಿದೆ. ಇವೆಲ್ಲವುಗಳ ಬಗ್ಗೆ ಸಂವಿಧಾನದಲ್ಲಿ ಬರೆಯಲಾಗಿದೆ. ಸಂವಿಧಾನವನ್ನು ಕಡೆಗಣಿಸಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿತ್ತು ಎಂದು ಟೀಕಿಸಿದರು.
ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಮಾಡಿದ ಭಾಷಣವನ್ನು ಅವರು ಉಲ್ಲೇಖಿಸಿ. ಮುಂದೆ ಹಿಂದುಸ್ತಾನದ ಜನರ ಶತಮಾನ ಬರಲಿದೆ ಎಂದು ಅವರು ಹೇಳಿದ್ದನ್ನು ನೆನಪಿಸಿದರು. 10 ಕೋಟಿಗೂ ಅಡುಗೆ ಅನಿಲ ಸಂಪರ್ಕ ನೀಡಿರುವುದು ನಮ್ಮ ಸರ್ಕಾರದ ಸಾಧನೆಯಾಗಿದೆ.
ಚೆನ್ನೈ- ಬೆಂಗಳೂರು ಹೆದ್ದಾರಿ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಪ್ರಾರಂಭವಾಗಿ ಶ್ರೀ ಪರಂಬೂರಿಗೆ ತಲುಪುವ 258ಕಿಲೋಮೀಟರ್ ಉದ್ದದ ಹೆದ್ದಾರಿಗೆ 18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳನ್ನು ನಾವು ಬಲಪಡಿಸಬೇಕಿದೆ. ಸ್ವದೇಶಿ, ಸ್ವಾವಲಂಬನೆ ಮೂಲಕ ಅಭಿವೃದ್ಧಿ ಕಡೆ ನಾವು ಗಮನ ಕೊಡುತ್ತಿದ್ದೇವೆ. ಸಮಸ್ಯೆಗಳನ್ನು ಸವಾಲನ್ನಾಗಿ ಪರಿವರ್ತನೆ ಮಾಡಿಕೊಂಡು ಮುನ್ನಡೆಯೋಣ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243