ದಿನದ ಸುದ್ದಿ

ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ: ಸಚಿವ ಜಗದೀಶ್‌ ಶೆಟ್ಟರ್‌

Published

on

ಸುದ್ದಿದಿನ,ಬೆಂಗಳೂರು ಗ್ರಾಮಾಂತರ : ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬೃಹತ್‌ ಮತ್ತು ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್‌ ಅವರು ಅಧಿಕಾರಿಗಳಿಗೆ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ, ದಾಬಸ್‌‌ಪೇಟೆಯ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಶನಿವಾರ ಭೇಟಿ ನೀಡಿ ಸಚಿವರು ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದರು.

ದಾಬಸ್‌ಪೇಟೆ ಇಂಡಸ್ಟ್ರೀಸ್‌ ಅಸೋಸಿಯೇಷನ್‌ ಸದಸ್ಯರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಕೈಗಾರಿಕೆಗಳಿಗೆ ಭೂಮಿಯನ್ನು ನೀಡುವುದರ ಜೊತೆಯಲ್ಲಿಯೇ ಅಗತ್ಯವಿರುವ ವಿದ್ಯುತ್‌, ನೀರು, ಸುರಕ್ಷತೆ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮಂಡಳಿಯ ಕರ್ತವ್ಯವಾಗಿದ್ದು, ಆಗ ಮಾತ್ರ ಕೈಗಾರಿಕೆಗಳು ಸುಲಭವಾಗಿ ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ರಾಜ್ಯದ ಆರ್ಥಿಕತೆಗೆ ಕೊಡುಗೆಯನ್ನು ನೀಡಲು ಸಾಧ್ಯ ಎಂದ ಸಚಿವರು ಈ ನಿಟ್ಟಿನಲ್ಲಿ ದಾಬಸ್‌ಪೇಟೆಯ ಕೈಗಾರಿಕೋದ್ಯಮಿಗಳು ನೀಡಿರುವ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿಯ ಬೇಡಿಕೆ ಹೆಚ್ಚಿರುವುದರಿಂದ, ಮಂಡಳಿಯ ವತಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿಗೊಳಿಸಿ ಹಂಚಿಕೆಯನ್ನು ಮಾಡುವ ಕಾರ್ಯಕ್ಕೂ ವೇಗಗೊಳಿಸಬೇಕಾಗಿದೆ ಎಂದು ಹೇಳಿದರು.

ತ್ರಿವೇಣಿ ಟ್ರೀಬ್ಯೂನ್‌ ಮತ್ತು ಕೆಬಿಡಿ ಕಲ್ಪತರು ಕಂಪನಿಗಳಿಗೆ ಭೇಟಿ ನೀಡಿ ಕೋವಿಡ್‌-19 ಮಹಾಮಾರಿಯನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸಚಿವರ ಜೊತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಓ ಡಾ.ಶಿವಶಂಕರ್‌ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version