ದಿನದ ಸುದ್ದಿ
ತುಂಗಭದ್ರಾ ನದಿಪಾತ್ರ ಗ್ರಾಮಗಳಲ್ಲಿ ಪ್ರವಾಹ ಭೀತಿ
ಸುದ್ದಿದಿನ ಡೆಸ್ಕ್: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರು ಹರಿದು ಬಂದಿದ್ದು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಗದಗ ಜಿಲ್ಲೆಯ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಹರಿಹರ, ಹರಪನಹಳ್ಳಿ ತಾಲೂಕಿನ ಗ್ರಾಮಗಳಲ್ಲಿ ನೀರು ನುಗ್ಗುತ್ತಿದೆ. ಜಮೀನುಗಳು ಜಲಾವೃತವಾಗಿವೆ. ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಗ್ರಾಮ ತಲುಪಬೇಕಾದರೆ ತೆಪ್ಪಬಳಸಬೇಕಾದ ಅನಿರ್ವಾಯತೆ ಎದುರಾಗಿದೆ.
ಹರಿಹರದ ಹರಿಹರೇಶ್ವರ ದೇವಸ್ಥಾನದ ಹಿಂದೆ ಮೆಟ್ಟಿಲು ಮಟ್ಟದ ವರೆಗೆ ಬಂದಿದ್ದು, ನಡುಗಡ್ಡೆಯಲ್ಲಿದ್ದ ಗೋಪುರ ಮುಳುಗಡೆಯಾಗಿದೆ. ಉಕ್ಕಡಗಾತ್ರಿ ಅಜ್ಜಯ್ಯನ ಕ್ಷೇತ್ರ ಸಂಪೂರ್ಣ ಜಲಾವೃತಗೊಂಡಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಿರೇಕೆರೂರು ತಾಲೂಕು ಭಾಗಗಳಿಂದ ಉಕ್ಕಡಗಾತ್ರಿಗೆ ಬರುವ ಭಕ್ತರಿಗೆ ಸಂಚಾರ ಅಡಚಣೆ ಉಂಟಾಗಿದೆ. ಸಾರಥಿ ಸೇತುವೆ ಮುಳುಗಡೆಯಾಗಿದೆ.
*ಹೊನ್ನಾಳಿಯಲ್ಲಿ ಗಂಜಿ ಕೇಂದ್ರ ಆರಂಭ:
ಹೊನ್ನಾಳಿಯಲ್ಲಿ ನದಿಪಾತ್ರದ ಮನೆಗಳ ಸುತ್ತ ನದಿ ನೀರು ಹರಿದು ಬಂದಿದ್ದು, ನಿವಾಸಿಗಳ ಸ್ಥಳಾಂತರ ಮಾಡಲಾಗಿದೆ. ಕೆಲವೆಡೆ ಗಂಜಿ ಕೇಂದ್ರ ತೆರೆಯಲಾಗಿದೆ. ನೂರಾರು ಎಕರೆಯ ಜಮೀನುಗಳಿಗೆ ನೀರು ನುಗ್ಗಿದೆ. ಇದೇ ಸ್ಥಿತಿ ಹರಪನಹಳ್ಳಿ ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಎದುರಾಗಿದೆ. ಹಲವಾಗಲು- ಕಡತಿ ಸಂಪರ್ಕ ಕಡಿತಗೊಂಡಿದೆ. ಹಲವಾಗಲು ಗ್ರಾಮದ ಒಳಗೆ ನೀರು ನುಗ್ಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401