ದಿನದ ಸುದ್ದಿ

ನಾಡಿನಾದ್ಯಂತ ಬಸವ ಜಯಂತಿ; ರಂಜಾನ್ ಸಂಭ್ರಮದಿಂದ ಆಚರಣೆ

Published

on

ಸುದ್ದಿದಿನ ಡೆಸ್ಕ್ : ಇಂದು ಬಸವ ಜಯಂತಿ. 12ನೇ ಶತಮಾನದ ಸಮಾಜ ಸುಧಾರಕ ಹಾಗೂ ಮಹಾನ್ ಮಾನವತಾವಾದಿ ಬಸವಣ್ಣನವರ ಜನ್ಮದಿನಾಚರಣೆ ಹಾಗೂ ರಾಜ್ಯಾದ್ಯಂತ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು. ಮಂಡ್ಯ ಜಿಲ್ಲಾಡಳಿತ ವತಿಯಿಂದ ಬಸವೇಶ್ವರ ಜಯಂತಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದವರೆಗಿನ ಮೆರವಣಿಗೆ ರಥಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.

ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಸಹಯೋಗದಲ್ಲಿ ಮಹಾನ್ ಮಾನವತಾವಾದಿ ಬಸವೇಶ್ವರರ ಜನ್ಮದಿನ ಆಚರಿಸಲಾಯಿತು.

ಬಸವಣ್ಣನವರ 889ನೇ ಜಯಂತಿಯನ್ನು ದಾವಣಗೆರೆ ಜಿಲ್ಲೆಯಾದ್ಯಾಂತ ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ವಿರಕ್ತ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವಜಾತ ಶಿಶುಗಳಿಗೆ ಶರಣರ ಹೆಸರು ನಾಮಕರಣ ಮಾಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ರಂಜಾನ್ ಆಚರಣೆ

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ರಾಜ್ಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯ್ತು.

ಮಸೀದಿ ಮತ್ತು ಈದ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅಬಕಾರಿ ಸಚಿವ ಕೆ. ಗೋಪಾಲಯ್ಯ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿದರು. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಿ ನಂತರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ದಾವಣಗೆರೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿದರು. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಈದ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಜಿಲ್ಲೆಯ ಎಲ್ಲ ಈದ್ಗಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ, ಪರಸ್ಪರ ಶುಭಾಶಯ ವಿನಿಮಯ ನಡೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version