ದಿನದ ಸುದ್ದಿ

ಬಸವನ ಹುಳು ಕಾಟಕ್ಕೆ ಕಲಬುರಗಿ ರೈತರು ಕಂಗಾಲು

Published

on

ಸುದ್ದಿದಿನ,ಕಲಬುರಗಿ: ಬಿಸಿಲೂರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಅನ್ನದಾತರಿಗೆ ಬಸವನ ಹುಳು ಹಾವಳಿ ನಿದ್ದೆಗೆಡಿಸಿವೆ. ರೈತರ ಲಾಭದ ಬೆಳೆ ಉದ್ದು, ಹೆಸರು, ತೊಗರಿ, ಸೋಯಾ ಹೀಗೆ ಮುಂಗಾರು ಬೆಳೆಗಳಿಗೆ ಬಸವನ ಹುಳು ವಕ್ಕರಿಸಿಕೊಂಡಿದೆ.

ಚಿಂಚೋಳಿ ತಾಲ್ಲೂಕಿನ ಬಹುತೇಕ ಎಲ್ಲಾ ರೈತರ ಜಮೀನಿನುಗಳಲ್ಲಿ ಲಗ್ಗೆ ಇಟ್ಟಿರುವ ಬಸವನ ಹುಳುಗಳು ಕ್ಷಣಾರ್ಧದಲ್ಲಿ ಬೆಳೆ ತಿಂದು ತೇಗುತ್ತಿವೆ. ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರು ಬಸವನ ಹುಳು ಕಾಟದಿಂದ ಅಕ್ಷರಶಃ ಕಂಗಾಲಗಿದ್ದು, ಅನ್ನದಾತರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುವಂತಾಗಿದೆ‌.

ಪ್ರತಿ ಬೆಳೆ ಧಂಟಿಗೆ ವಕ್ಕರಿಸಿಕೊಂಡಿರುವ ಬಸವನ ಹುಳುಗಳ ಹಿಂಡು ಬೆಳೆ ಹಾಳು ಮಾಡ್ತಿವೆ. ರೈತರು ಎಷ್ಟೇ ಪ್ರಯತ್ನ ಪಟ್ಟರು ನಿಯಂತ್ರಣಕ್ಕೆ ಬರುತ್ತಿಲ್ಲ, ಬಸವನ ಹುಳುಗಳ ಹಾವಳಿಯಿಂದ ಬೇಸತ್ತು, ಕಳೆ ತೆಗೆದಂತೆ ಹುಳುಗಳನ್ನ ಹುಡುಕಿ ಹುಡುಕಿ ತೆಗೆಯುತ್ತಿದ್ದಾರೆ. ರಾಶಿ ಗಟ್ಟಲೆ ಹುಳುಗಳನ್ನ ತೆಗೆದರು ಮತ್ತೆ ಮತ್ತೆ ಬಸವನ ಹುಳು ಬೆಳೆಗಳಿಗೆ ಲಗ್ಗೆ ಇಟ್ಟು ಸಂಪೂರ್ಣ ಬೆಳೆ ನಾಶ ಮಾಡುತ್ತಿದ್ದು, ಪರಿಹಾರ ನೀಡುವಂತೆ ಅನ್ನದಾತರು ಮನವಿ ಮಾಡ್ತಿದ್ದಾರೆ.

ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಜಾಮೀನುಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಚಿಂಚೋಳಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಬಸವನ ಹುಳ ಕಾಟ ಹೆಚ್ಚಾಗಿ ಜಿಲ್ಲೆಯ ಇತರೆ ತಾಲ್ಲೂಕಿನಲ್ಲೂ ಅಲ್ಲಲ್ಲಿ ರೈತರ ಜಮೀನಲ್ಲಿ ಕಾಣಿಸಿಕೊಳ್ಳುತ್ತಿವೆ. ಒಟ್ನಲ್ಲಿ ಒಂದೆಡೆ ನಿರಂತರ ಜಿಟಿ ಜಿಟಿ ಮಳೆಗೆ ರೈತರ ಬೆಳೆ ಹಾನಿಯಾಗಿದ್ರೆ, ಮತ್ತೊಂದೆಡೆ ಬಸವ ಹುಳು ಲಗ್ಗೆ ಇಟ್ಟ ಅನ್ನದಾತನ ಅನ್ನಕ್ಕೆ ಕನ್ನಹಾಕ್ತಿದ್ದು, ಸೂಕ್ತ ಪರಿಹಾರಕ್ಕಾಗಿ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version