ದಿನದ ಸುದ್ದಿ
ಕ್ರಿಯಾಶೀಲ ಬೋಧನೆಯಿಂದ ಮಕ್ಕಳ ಕಲಿಕೆ ಪರಿಣಾಮಕಾರಿ : ಎಸ್.ಬಸವರಾಜು
ಸುದ್ದಿದಿನ,ಚಿತ್ರದುರ್ಗ: ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧಿಸಿದಾಗ ಮಾತ್ರ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.
ನಗರದ ವೆಂಕಟೇಶ್ವರ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ದಿಯಲ್ಲಿ ಡಯಟ್‌ನ ಪಾತ್ರ ವಿಷಯ ಕುರಿತು ಮಾಹಿತಿ ಪಡೆಯಲು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ತರಗತಿಯಲ್ಲಿ ಪಠ್ಯವಿಷಯವನ್ನು ಹೊಸ ಚಿಂತನೆ, ಆಲೋಚನೆಯೊಂದಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸಿ ಬೋಧಿಸಬೇಕು. ಮಕ್ಕಳ ಕಲಿಕಾ ಸಾಮರ್ಥ್ಯ ಅರ್ಥೈಸಿಕೊಂಡು ತರಗತಿಯಲ್ಲಿ ಮಕ್ಕಳ ಸ್ನೇಹಿ ಕಲಿಕಾ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು. ಮಕ್ಕಳಲ್ಲಿ ಕುತೂಹಲ, ಆಲೋಚನಾ ಶಕ್ತಿ ಹೆಚ್ಚಿದ್ದು ಅವರಲ್ಲಿ ಉಂಟಾಗುವ ಪ್ರಶ್ನೆಗಳಿಗೆ ಉತ್ತರಿಸಲು ಪೂರ್ವ ಸಿದ್ಧತೆಯಿಂದ ತರಗತಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ನಾಯಕತ್ವ ತರಬೇತಿ, ಪಠ್ಯಾಧಾರಿತ ತರಬೇತಿ, ನಿಷ್ಠಾ ತರಬೇತಿ, ಜೀವನ ಕೌಶಲಗಳು ತರಬೇತಿ, ನೂತನವಾಗಿ ನೇಮಕವಾದ ಶಿಕ್ಷಕರಿಗೆ ಬುನಾದಿ ತರಬೇತಿ ನೀಡುವುದರ ಮೂಲಕ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಪ್ರಶಿಕ್ಷಣಾರ್ಥಿಗಳು ಬೋಧನಾ ಕೌಶಲಗಳಲ್ಲಿ ಸಾಮರ್ಥ್ಯ ಪಡೆಯುವ ಜೊತೆಗೆ ಶಿಕ್ಷಕ ವೃತ್ತಿಯನ್ನು ಪ್ರೀತಿಸಬೇಕು. ತರಗತಿ ಪ್ರಕ್ರಿಯೆ ನಿರ್ವಹಿಸುವಾಗ ಉದಾಹರಣೆ, ನಿದರ್ಶನಗಳು, ಚಟುವಟಿಕೆಗಳು, ಕಲಿಕಾ ಸಾಮಗ್ರಿಗಳನ್ನು ಬಳಸಿ ಪಠ್ಯ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸಬೇಕು ಎಂದರು.
ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕರಿಗೆ ತಾಂತ್ರಿಕ ಜ್ಞಾನದ ಅರಿವು ಅಗತ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ತಂತ್ರಜ್ಞಾನ ಬಳಸಿ ಬೋಧಿಸಬೇಕು. ಮಕ್ಕಳಲ್ಲಿ ಜ್ಞಾನದ ವಿಸ್ತರಣೆಗೆ ತಾಂತ್ರಿಕ ಪರಿಕರಗಳನ್ನು ಬಳಸಿ ಚಿತ್ರಗಳು, ವಿಡಿಯೋಗಳನ್ನು ಬಳಸಿ ಬೋಧಿಸಬೇಕು. ಡಯಟ್‌ನಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಯನ್ನು dietchitradurga.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಉಪನ್ಯಾಸಕ ಕೆ.ಜಿ.ಪ್ರಶಾಂತ್, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243