ಲೈಫ್ ಸ್ಟೈಲ್
ಸುಂದರವಾಗಿ ಕಾಣೋಕೆ, ಸೊಪ್ಪಿಗೂ ಸಲಾಮು ಹೊಡೆಯಬೇಕು!
ಸೊಪ್ಪು ತಿನ್ನೋದಕ್ಕೆ ಮಾತ್ರವಲ್ಲ, ಮುಖ, ಮೈಗೆ ಹಚ್ಚೋದಕ್ಕೂ ಒಳ್ಳೆಯದು. ಸುಂದರವಾಗಿ ಕಾಣಿಸಬೇಕೆಂದರೆ ಸೊಪ್ಪಿಗೂ ಸಲಾಮು ಹೊಡೆಯಬೇಕು! ಆರೋಗ್ಯದ ದೃಷ್ಟಿಯಿಂದ ತರಕಾರಿ, ಹಣ್ಣು, ಹಾಲು, ಸೊಪ್ಪುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಹಸಿರು ಸೊಪ್ಪುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಸೊಪ್ಪುಗಳ ಸೇವನೆ ಆರೋಗ್ಯ ವೃದ್ಧಿಗೆ ಮಾತ್ರವಲ್ಲ. ಸೌಂದರ್ಯಕ್ಕೂ ಪ್ರೇರಕ. ನಮ್ಮ ಆಹಾರ ಸೇವನಾ ಕ್ರಮದಿಂದಲೂ ಚರ್ಮದ ಕಾಂತಿಯನ್ನು ಪಡೆಯಬಹುದು.
ಸೊಪ್ಪುಗಳಿಂದ ಯಾವ ರೀತಿ ಅನುಕೂಲಗಳಿವೆ? ಸೌಂದರ್ಯ ವೃದ್ಧಿ ಹೇಗೆ? ಯಾವ ಸೊಪ್ಪುಗಳನ್ನು ಹೇಗೆ ಬಳಸಬೇಕು? ಎಂಬುದನ್ನು ತಿಳೀಯೋಣ..
ಮೆಂತ್ಯಸೊಪ್ಪಿನ ಫೇಸ್ ಪ್ಯಾಕ್
- ಮೆಂತ್ಯ ಸೊಪ್ಪು ಸ್ವಲ್ಪ ಕಹಿ. ಆದರೆ ಆರೋಗ್ಯಕ್ಕೆ ಸಿಹಿ. ಮ್ಯೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಎಲೆಗಳನ್ನು ಸೋಸಿ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಅದಕ್ಕೆ ನಾಲ್ಕು ಚಮಚ ಮೊಸರು ಸೇರಿಸಿ ಮುಖಕ್ಕೆ ಪ್ಯಾಕ್ ಹಾಕಿ. ಇಪ್ಪತ್ತು ನಿಮಿಷ ಬಿಟ್ಟು ತೊಳೆಯಿರಿ. ಮೊಡವೆ ಕಲೆ ನಿವಾರಣೆ ಆಗುವುದು.
- ಮೆಂತ್ಯ ಸೊಪ್ಪನ್ನು ಸೋಸಿ ಎಲೆಗಳನ್ನು ಅರೆದು ಅದಕ್ಕೆ ನಿಂಬೆರಸ ಸೇರಿಸಿ ಜಿಡ್ಡಿನಿಂದ ಕೂಡಿದ ಮುಖಕ್ಕೆ ಮಸಾಜ್ ಮಾಡುತ್ತಾ ಬಂದರೆ ಜಿಡ್ಡು ಹೋಗುತ್ತದೆ. ಬ್ಲಾಕ್ ಹೆಡ್ಸ್, ವೈಟ್‍ಹೆಡ್ಸ್ ಕಾಟ ಇರುವುದಿಲ್ಲ.
- ಮೆಂತ್ಯ ಸೊಪ್ಪಿನೊಂದಿಗೆ ಪುದೀನಾ ಎಲೆ ಸೀರಿಸಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಾಕಿ ಹೊಳೆಯುವುದರಿಂದ ಸುಕ್ಕುಗಳನ್ನು ತಡೆಯಬಹುದು.
ಸಬ್ಬಸ್ಸಿಗೆ ಸೊಪ್ಪು
- ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ. ಅಲರ್ಜಿ ನಿವಾರಣೆ ಆಗುವುದು. ಸಬ್ಬಸ್ಸಿಗೆ ಸೊಪ್ಪನು ಆಗಾಗ ಮೂಸುತ್ತ ಇದ್ದಲ್ಲಿ ಗಾಢ ನಿದ್ದೆ ಬಂದು ಆರೋಗ್ಯ ಸುಧಾರಿಸುವುದು.
ಮೂಲಂಗಿ ಸೊಪ್ಪು
- ಮೊಣಕೈ ಗಂಟು ಹಾಗೂ ಮೊಣಕಾಲು ಕಪ್ಪಾಗಿದ್ದಲ್ಲಿ ಮೂಲಂಗಿ ಸೊಪ್ಪನ್ನು ರುಬ್ಬಿ ಹಗುರ ಮಸಾಜ್ ಮಾಡಿ. ಕಪ್ಪು ನಿವಾರಣೆ ಆಗುವುದು.
ಚಕ್ಕೋತ ಸೊಪ್ಪು
- ಎಣ್ಣೆಯುಕ್ತ ಚರ್ಮಕ್ಕೆ ಚಕ್ಕೋತ ಸೊಪ್ಪು ರಾಮಬಾಣ. ಎರಡು ದಿನಕ್ಕೊಮ್ಮೆ ಚಕ್ಕೋತಾ ಸೊಪ್ಪನ್ನು ರುಬ್ಬಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಎಣ್ಣೆ ಅಂಶ ಕಡಿಮೆ ಆಗುವುದು.
ದಂಟಿನ ಸೊಪ್ಪು
- ಕೈಕಾಲುಗಳು ಬಿಸಲಿನಿಂದಾಗಿ ಕಪ್ಪಗಾಗಿದ್ದಲ್ಲಿ ದಂಟಿನ ಸೊಪ್ಪನ್ನು ನುಣ್ಣಗೆ ರುಬ್ಬಿ, ನಿಂಬೆರಸ ಸೇರಿಸಿ ಪ್ಯಾಕ್ ಮಾಡಿಕೊಂಡು ಮಸಾಜ್ ಮಾಡಿ. ಹಾಗೆ ಒಂದು ಗಂಟೆ ಇದ್ದು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ರೀತಿ ಮಾಡಿಕೊಳ್ಳ ಬಹುದು
ನುಗ್ಗೆಸೊಪ್ಪು
- ನುಗ್ಗೆ ಎಲೆಗಳನ್ನು ನುಣ್ಣಗೆ ಅರೆದು ವಾರಕ್ಕೊಮ್ಮೆ ಮುಖಕ್ಕೆ ಫೇಸ್‍ಪ್ಯಾಕ್ ಹಾಕಿಕೊಳ್ಳಿ. ಕಲೆಗಳಿಲ್ಲದ ಚಂದ್ರಕಾಂತಿ ನಿಮ್ಮ ಮುಖದಲ್ಲಿ ಅರಳುವುದು.