ದಿನದ ಸುದ್ದಿ
ಬೆಳಗಾವಿ | ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಮದೀನಾ ಮಸೀದಿ | ಧರ್ಮಕ್ಕಿಂತ ಮಾನವೀಯತೆ ಮೇಲು: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಸುದ್ದಿದಿನ,ಬೆಳಗಾವಿ : ಮಾನವೀಯತೆಗೆ ಜಾತಿ-ಧರ್ಮ, ಭಾಷೆ ಸೇರಿದಂತೆ ಯಾವುದೇ ಅಡ್ಡಿಯಾಗಲ್ಲ ಎಂಬುದಕ್ಕೆ ಪ್ರವಾಹ ಸಂತ್ರಸ್ತರಿಗೆ ಜನರು ನೀಡಿದ ಉದಾರ ನೆರವು ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ನಗರದ ಕ್ಯಾಂಪ್ ಪ್ರದೇಶದ ಮದೀನಾ ಮಸೀದಿಗೆ ಬುಧವಾರ(ಆ.14) ಭೇಟಿ ನೀಡಿದ ಅವರು ಮದೀನಾ ಮಸೀದಿ ವತಿಯಿಂದ ಪ್ರವಾಹ ಸಂತ್ರಸ್ತರಿಗಾಗಿ ಸಂಗ್ರಹಿಸಲಾಗಿರುವ ಪರಿಹಾರ ಸಾಮಗ್ರಿಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.
ಮಸೀದಿಯ ಮೌಲಾನಾಗಳು ಸೇರಿದಂತೆ ಸಮಾಜದ ಮುಖಂಡರ ನೇತೃತ್ವದಲ್ಲಿ ಸಂತ್ರಸ್ತರ ನೆರವಿಗಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಾನವೀಯತೆ ಧರ್ಮವನ್ನು ಮೀರಿದ್ದು, ಅದನ್ನು ಪ್ರವಾಹ ಸಂದರ್ಭದಲ್ಲಿ ತಾವು ಸಾಬೀತುಪಡಿಸಿದ್ದೀರಿ ಎಂದರು.
ಸರ್ಕಾರ ಎಷ್ಟೇ ಸಹಾಯ-ಸೌಲಭ್ಯಗಳನ್ನು ನೀಡಿದ್ದರೂ ಅದು ಕೆಲವೊಮ್ಮೆ ಸಾಕಾಗಲ್ಲ. ಈ ಸಂದರ್ಭದಲ್ಲಿ ಸರ್ಕಾರದ ಜತೆ ಕೈಜೋಡಿಸಿದ ತಮಗೆಲ್ಲರಿಗೂ ಧನ್ಯವಾದಗಳು.
ಬಹಳಷ್ಟು ಜನರು ಶ್ರೀಮಂತರಿದ್ದಾರೆ. ಆದರೆ ಒಳ್ಳೆಯ ಕೆಲಸ ಮಾಡುವ ಅವಕಾಶಗಳು ಕಡಿಮೆ ಇರುತ್ತವೆ. ಅಂತಹ ಸಮಯ ಈಗ ಬಂದಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಸಹಾಯ ಸಹಕಾರ ಇರಲಿ. ದಾನಿಗಳು ನಿಮ್ಮನ್ನು ನಂಬಿ ಇಷ್ಟೊಂದು ಸಾಮಗ್ರಿಗಳನ್ನು ನೀಡಿದ್ದಾರೆ. ಅದನ್ನು ನಾವೆಲ್ಲರೂ ಸೇರಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡೋಣ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ, ಜಾತಿ-ಧರ್ಮದ ಗೋಡೆ ದಾಟಿ ತಾವೆಲ್ಲರೂ ಮಾನವೀಯತೆಯ ಸಹಾಯ ಹಸ್ತ ಚಾಚಿರುವುದು ದೇವರು ಮೆಚ್ಚುತ್ತಾನೆ ಎಂದರು.ಪರಿಹಾರ ಕೇಂದ್ರಗಳಲ್ಲಿ ಬಡವರು, ಶ್ರೀಮಂತರು ಇದ್ದಾರೆ ಎಲ್ಲರಿಗೂ ನೆರವಿನ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಸಂತ್ರಸ್ತರ ಪುನರ್ಸತಿಗೆ ಸೂಕ್ತ ಯೋಜನೆ ರೂಪಿಸಿ ತಮ್ಮ ನೆರವು ಪಡೆಯಲಾಗುವುದು ಎಂದರು.
ಪೊಲೀಸ್ ಆಯುಕ್ತರಾದ ಲೋಕೇಶ್ ಕುಮಾರ್ ಮಾತನಾಡಿ, ಮಸೀದಿ ವತಿಯಿಂದ ಒಳ್ಳೆಯ ಕೆಲಸ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇಂತಹ ಕೆಲಸಗಳು ಪೂರಕವಾಗಿವೆ ಎಂದರು.ದಲಿತ ಸಂಘಟನೆಯ ಮುಖಂಡರಾದ ಮಲ್ಲೇಶ ಚೌಗುಲೆ ಮಾತನಾಡಿ, ಸಂಕಷ್ಟದಲ್ಲಿರುವ ಜನರಿಗೆ ತಾವು ಸ್ಪಂದಿಸಿದ ರೀತಿ ಅತ್ಯುತ್ತಮವಾಗಿದೆ. ಇದನ್ನು ಮೆಚ್ಚಿ ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಬಂದಿದ್ದಾರೆ ಎಂದು ಹೇಳಿದರು.
ಮದೀನಾ ಮಸೀದಿ ವತಿಯಿಂದ ಮಾಡಲಾಗುತ್ತಿರುವ ಕೆಲಸದ ಬಗ್ಗೆ ಮಾಹಿತಿ ನೀಡಿದ ಉದ್ಯಮಿ ಜಹೀರ್ ಸಾಜನ್ ಹಾಗೂ ಶಬ್ಬೀರ್ ಶೇಟ್ ಅವರು ಜಿಲ್ಲಾಧಿಕಾರಿ ಭೆಟಿ ನೀಡಿ ನಮ್ಮ ಸಣ್ಣ ಸಹಾಯವನ್ನು ಗುರುತಿಸಿ, ಬೆನ್ನುತಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಆರಂಭದಲ್ಲಿ ಊಟ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆ. ನಂತರದ ದಿನಗಳಲ್ಲಿ ಇತರೆ ಸಾಮಗ್ರಿಗಳನ್ನು ವಿತರಿಸಲಾಯಿತು ಎಂದು ಜಹೀರ್ ಸಾಜನ್ ತಿಳಿಸಿದರು.
ಎಲ್ಲಿಲ್ಲಿ ಯಾವ್ಯಾವ ಬೇಡಿಕೆಯಿದೆ ಎಂಬುದನ್ನು ಆಧರಿಸಿ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳ ಭೇಟಿಯಿಂದ ಇಂತಹ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಹೇಳಿದರು.
ಬೆಳಗಾವಿ ನಗರ ಸೇರಿದಂತೆ 28 ಗ್ರಾಮಗಳಿಗೆ ಬಟ್ಟೆ, ಹಾಸಿಗೆ, ಹೊದಿಕೆ ಸೇರಿದಂತೆ ವಿವಿಧ ಬಗೆಯ ಪರಿಹಾರ ಸಾಮಗ್ರಿಗಳನ್ನು ಕಳಿಸಲಾಗುತ್ತಿದೆ.
ದಾನಿಗಳು ಅಕ್ಕಿ, ಉಪ್ಪು, ಎಣ್ಣೆ ಪ್ಯಾಕೆಟ್, ರವಾ, ತರಕಾರಿ, ಉಪ್ಪು, ಸಕ್ಕರೆ, ಚಹಾಪುಡಿ, ಪೇಸ್ಟ್, ಬ್ರಷ್, ಜಾನ್ಸನ್ ಬೇಬಿ ಸೋಪ್, ಡೆಟಾಲ್, ಮಾತ್ರೆ, ಸೊಳ್ಳೆಬತ್ತಿ, ಮೇಣದ ಬತ್ತಿ,, ಸ್ನಾನದ ಸೋಪ್, ಬಟ್ಟೆಗಳು, ಚಪ್ಪಲಿಗಳು, ವಿಕ್ಸ್, ಚಾಪೆಗಳು ಹೀಗೆ ತಮ್ಮ ಕೈಯಿಂದಾದ ನೆರವು ನೀಡಿದ್ದಾರೆ.
ಪ್ರತಿಯೊಂದು ಸಾಮಗ್ರಿಗಳ ರಿಜಿಸ್ಟರ್ ಪ್ರತ್ಯೇಕವಾಗಿ ಇಟ್ಟು, ಪರಿಹಾರ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಮೌಲಾನಾ ಸಾಜಿದ್, ಸಲೀಂ, ಶಬ್ಬೀರ್ ಶೇಟ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243