ದಿನದ ಸುದ್ದಿ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮುರವರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ. ಒಡಿಸ್ಸಾದ ಮೊದಲ ಮಹಿಳಾ ಆದಿವಾಸಿ ನಾಯಕಿಯಾಗಿದ್ದ ದ್ರೌಪದಿ ಮುರ್ಮು, 2015 ರಿಂದ 2021ರವರೆಗೆ ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿದ್ದರು.
  2. ರಾಜ್ಯದ 57 ತಾಲ್ಲೂಕುಗಳಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ಹಾವೇರಿ ಜಿಲ್ಲೆಯ 7 ತಾಲ್ಲೂಕಿಗೆ 69 ಕೋಟಿ 45 ಲಕ್ಷ ರೂಪಾಯಿ ಅನುದಾನ ಬಂದಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
  3. ರಾಜ್ಯದಲ್ಲಿ ಪಠ್ಯಪುಸ್ತಕ ಲೋಪದೋಷ ಆರೋಪ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
  4. ಸಮೃದ್ಧ ಭಾರತದೊಂದಿಗೆ ಸ್ವಾಸ್ಥ್ಯ ಭಾರತ ನಿರ್ಮಾಣ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ 1 ಲಕ್ಷ 50ಸಾವಿರ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸೂಖ್ ಮಾಂಡವೀಯ ಹೇಳಿದ್ದಾರೆ.
  5. ಮುಂದಿನ ನಾಲ್ಕು ತಿಂಗಳಲ್ಲಿ ದೇಶಾದ್ಯಂತ152 ಭೂಕಂಪ ಸಮೀಕ್ಷಾ ಕೇಂದ್ರ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
  6. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಸ್ಟ್ರೇಲಿಯಾ ಉಪಪ್ರಧಾನಿ ಮತ್ತು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಅವರೊಂದಿಗೆ ದೆಹಲಿಯಲ್ಲಿಂದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ 2 ರಾಷ್ಟ್ರಗಳ ಬಾಂಧವ್ಯ ಮತ್ತು ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಯಲಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
  7. ಅಗ್ನಿಪಥ್ ಯೋಜನೆ ಕುರಿತು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದ್ದು, ಸಮಾಜದಲ್ಲಿ ಹಿಂಸಾಚಾರ ನಡೆಸುವುದು ಸೂಕ್ತವಲ್ಲ. ಅಗ್ನಿಪಥ್ ಯೋಜನೆ ಕುರಿತ ಎಲ್ಲ ಸಂದೇಹಗಳನ್ನು ಬಗೆಹರಿಸಲಾಗುವುದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಹೇಳಿದ್ದಾರೆ.
  8. ನೂತನವಾಗಿ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಯ ಮೂಲಕ ಸೇನಾಪಡೆಗೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ, ಮುಕ್ತ ಮತ್ತು ವಸ್ತುನಿಷ್ಠವಾಗಿ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಅಗ್ನಿವೀರ್ ನೇಮಕಾತಿಗೆ ಭೂಸೇನಾಪಡೆ ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಭಾರತೀಯ ವಾಯುಪಡೆಯಲ್ಲಿ ನೇಮಕಾತಿ ಇದೇ 24 ರಿಂದ ಆರಂಭಗೊಳ್ಳಲಿದೆ. ಭೂಸೇನಾಪಡೆ ಮತ್ತು ನೌಕಾಪಡೆಗಳಲ್ಲಿ ಜುಲೈ 1 ರಿಂದ ನೋಂದಣಿ ಆರಂಭಗೊಳ್ಳಲಿದೆ.
  9. ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮುರವರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ.
  10. ತುಂಗಭದ್ರಾ ಜಲಾಶಯದಿಂದ ವಿವಿಧ ಕಾರ್ಖಾನೆಗಳಿಗೆ ಪೂರೈಸಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ನಿಖರತೆಯನ್ನು ಕಂಡುಕೊಳ್ಳಲು ಮೀಟರ್ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
  11. ಹಿರಿಯ ನಾಗರಿಕರ ನಿಂದನೆ ತಡೆ ಜಾಗೃತಿ ದಿನವನ್ನು ಇಂದು ಬೆಳಿಗ್ಗೆ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಉದ್ಘಾಟಿಸಲಿದ್ದಾರೆ.
  12. ನಾಳೆ ಮತ್ತು ನಾಡಿದ್ದು (23,24ರಂದು) ಆಯೋಜಿಸಲಾಗಿರುವ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ವರ್ಚುವಲ್ ರೂಪದಲ್ಲಿ ಶೃಂಗಸಭೆ ನಡೆಯಲಿದ್ದು, ಈ ಬಾರಿ ಅತಿಥ್ಯ ರಾಷ್ಟ್ರವಾದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಮಂತ್ರಣದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
  13. ಅಗ್ನಿಪಥ್ ಯೋಜನೆ ಮೂಲಕ ರೆಜಿಮೆಂಟ್‌ಗಳಿಗೆ ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೇನಾ ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ. ನೇಮಕಾತಿ ಕುರಿತು ವಿವರ ನೀಡಿರುವ ಅವರು, ಅಗ್ನಿಪಥ್ ಯೋಜನೆಯಿಂದ ಕಿರಿಯ ವಯಸ್ಸಿನ ಯುವಜನರು, ತಾಂತ್ರಿಕ ಕೌಶಲ್ಯ ಪಡೆದ ಹಾಗೂ ಎಲ್ಲ ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಪ್ರತಿಭೆಗಳು ಸೇನಾಪಡೆಗೆ ಸೇರ್ಪಡೆಯಾಗಲಿದ್ದಾರೆ. ನೇಮಕಾತಿ ಕುರಿತು ಅಭ್ಯರ್ಥಿಗಳಿಗೆ ನೆರವಾಗಲು ಸಹಾಯವಾಣಿ ಸಂಖ್ಯೆ 23013865ಆರಂಭಿಸಲಾಗಿದೆ ಎಂದು ವಿವರಿಸಿದರು.
  14. ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲದ, ಗುರುತಿಸಲಾಗದ, ಆದರೆ ನೋಂದಾಯಿತ 111 ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ಕೈಬಿಡಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಈ ರಾಜಕೀಯ ಪಕ್ಷಗಳಿಗೆ ಅಧಿಕೃತ ಸಂಪರ್ಕ ವಿಳಾಸ ಅಥವಾ ಬದಲಾದ ವಿಳಾಸ ಮಾಹಿತಿ ನೀಡುವಂತೆ ಕಳೆದ ತಿಂಗಳು ಸೂಚಿಸಲಾಗಿತ್ತು. ಆದರೆ ಯಾವುದೇ ಮಾಹಿತಿ ನೀಡದ ಹಾಗೂ ಗುರುತಿಸಲಾಗದ ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
  15. ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಡೆಯುತ್ತಿರುವ 5 ರಾಷ್ಟ್ರಗಳ 23 ವರ್ಷದೊಳಗಿನವರ ಮಹಿಳಾ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಇಂದು ಉಕ್ರೇನ್ ವಿರುದ್ಧ ಸೆಣಸಲಿದೆ. ಭಾರತೀಯ ಕಾಲಮಾನ ಸಂಜೆ 5.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ನಾಳೆ (ಗುರುವಾರ) ನಡೆಯಲಿರುವ ಪಂದ್ಯದಲ್ಲಿ ಭಾರತ-ಅಮೆರಿಕ ಸೆಣಸಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version