ದಿನದ ಸುದ್ದಿ

ಕೊರೋನಾ ಮುಕ್ತ ಹೊಸಪೇಟೆ | 17 ಪ್ರಕರಣಗಳಲ್ಲಿ 4 ಮಾತ್ರ ಸಕ್ರಿಯ : ಮತ್ತೋರ್ವ ಗುಣಮುಖ

Published

on

ಸುದ್ದಿದಿನ,ಬಳ್ಳಾರಿ : ಕರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆ ಹೊಸಪೇಟೆ ನಗರದ ಮತ್ತೊರ್ವ ವ್ಯಕ್ತಿಯನ್ನು ಗುರುವಾರ ಸಂಜೆ ನಗರದ ಕೋವಿಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ 11 ಪ್ರಕರಣಗಳು ದೃಢಪಟ್ಟು ಜಿಲ್ಲೆಯ ಜನರ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಹೊಸಪೇಟೆ ನಗರ ಸದ್ಯ ಕರೋನಾ ಮುಕ್ತವಾದಂತಾಗಿದೆ.

ಕರೋನಾದಿಂದ ಗುಣಮುಖರಾದ 39 ವರ್ಷದ ಪಿ-331 ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕರೋನಾ ಕಾಣಿಸಿಕೊಂಡಿದ್ದು ಹೊಸಪೇಟೆಯಲ್ಲಿಯೇ. ಈ ನಗರದಲ್ಲಿ 11 ಜನರಿಗೆ ಈ ಸೋಂಕು ಕಾಣಿಸಿಕೊಂಡಿತ್ತು ಅವರೆಲ್ಲಾ ಈಗ ಗುಣಮುಖರಾಗಿದ್ದಾರೆ. ಇವರು ಪ್ರಥಮ ಕೊರೊನಾ ಸೊಂಕು ಕಾಣಿಸಿಕೊಂಡವರ ಪ್ರಥಮ ಸಂಪರ್ಕಿತರಾಗಿದ್ದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದ ಪಿ-331 ಅವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಕಂದಾಯ ಇಲಾಖೆ ವತಿಯಿಂದ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮ ಸ್ಥೈರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು; ಗುಣಮುಖರಾಗಿದ್ದರಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದರು.

ಈ ವ್ಯಕ್ತಿಯು ಮಾನಸಿಕ ಖಿನ್ನತೆಗೊಳಗಾಗಬಾರದು ಎಂಬ ದೃಷ್ಟಿಯಿಂದ ಇಡೀ ವೈದ್ಯರ ತಂಡವೇ ವಿಶೇಷ ಗಮನಹರಿಸಿತ್ತು. ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು; ಎರಡ್ಮೂರು ಬಾರಿ ಪಾಸಿಟಿವ್ ಬಂದ ಕಾರಣ ಬಿಡುಗಡೆಯಾಗುವುದು ತಡವಾಯಿತು. ಕೊನೆಗೂ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು ಎಂದು ತಿಳಿಸಿದ ಅವರು, ಈ ಆರ್‍ಆರ್‍ಟಿ ತಂಡಗಳು ಗುಣಮುಖರಾಗಿರುವ ಇವರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಗುಣಮುಖರಾಗಿ ಹೊರಬಂದ ಪಿ- 331 ಅವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು ಮತ್ತು ಸ್ಥೈರ್ಯ ಜನನ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು. ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಋಣ ನಾನೆಂದು ಮರೆಯುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಈವರೆಗೆ 17ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಅವರ ಪೈಕಿ ಇಲ್ಲಿಯವರೆಗೆ ಗುಣಮುಖರಾಗಿ 13ಜನ ಬಿಡುಗಡೆ ಹೊಂದಿದಂತಾಗಿದೆ. ಇನ್ನೂ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕಿನ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ. ಯೋಗನಂದಾ ರೆಡ್ಡಿ, ಆರ್.ಎಂ.ಓ.ಡಾ.ಮಲ್ಲಿಕಾರ್ಜನ, ಗುಮಾಸ್ತೆ ದೇಸಾಯಿ, ಡಾ.ಉದಯ್ ಶಂಕರ್, ಶುಶ್ರೂಕ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ್, ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ ಸಿಬ್ಬಂದಿ, ಡಿ- ಗ್ರೂ ಪ್ ಸಿಬ್ಬಂದಿ, ಆಸ್ಪತ್ರೆಯ ಇತರ ಸಿಬ್ಬಂದಿ ಸೇರಿದಂತೆ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version