ದಿನದ ಸುದ್ದಿ

ಆಡಳಿತದಲ್ಲಿ ಪಾರದರ್ಶಕತೆಗೆ ಚಿತ್ರೀಕರಣ ಮಾಡಿ ಸಭೆ; ಮೆಚ್ಚುಗೆ ವ್ಯಕ್ತ

Published

on

ಸುದ್ದಿದಿನ,ಬಳ್ಳಾರಿ : ರೈತರು ಹಾಗೂ ಪ್ರಾಧಿಕಾರದ ಸಹಯೋಗದೊಂದಿಗೆ 50:50 ಅನುಪಾತದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ 101.98 ಎಕರೆ ನಿವೇಶನ ಯೋಜನೆಗೆ ಕಲಂ19(1) ಅನ್ವಯ ಅಂತಿಮ ಅಧಿಸೂಚನೆ ಹೊರಡಿಸುವಿಕೆ ಹಾಗೂ ನಂತರ ಟೆಂಡರ್ ಕರೆಯುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ನಗರಾಭಿವೃದ್ಧಿ ಸಚಿವ ಭೈರತಿ‌ ಬಸವರಾಜ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಬೆಂಗಳೂರಿನಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರಾಭಿವೃದ್ಧಿ ‌ಸಚಿವ ಭೈರತಿ‌ ಬಸವರಾಜ ಅವರನ್ನು ಸೋಮವಾರ ಭೇಟಿಯಾದ ಸಂದರ್ಭದಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.ಬಳ್ಳಾರಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಡಾ ರೂಪಿಸಿರುವ ವಿವಿಧ ಯೋಜನೆಗಳ‌ ಮಾಹಿತಿಯನ್ನು ಆಲಿಸಿದರು.

ಬುಡಾದಲ್ಲಿ ಖಾಲಿ ಇರುವ 2 ಸಹಾಯಕ ಅಭಿಯಂತರ ಹುದ್ದೆಗಳು, 1 ಕಿರಿಯ ಸಹಾಯಕ ಅಭಿಯಂತರ ಹಾಗೂ ನಗರ ಯೋಜನೆಯ ಜಂಟಿ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಯೋಜನೆಯಲ್ಲಿ ಶೇ 5 ರಷ್ಟು ಪತ್ರಕರ್ತರಿಗೆ ಮೀಸಲಿಡುವ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಇಲಾಖೆಯ ಸಲು ಕಾರ್ಯದರ್ಶಿಗೆ ಸೂಚನೆ ನೀಡಿದರು.

ಬುಡಾ ವ್ಯಾಪ್ತಿಯಲ್ಲಿ ಬರುವ ಟೌನ್ ಸರ್ವೆ ನಂಬರ್, ಕಂದಾಯ ಸರ್ವೇ ನಂಬರ್ ಕುರಿತು ನನ್ನ ಅಧ್ಯಕ್ಷತೆಯಲ್ಲಿ ಸಭೆಯ ದಿನಾಂಕವನ್ನು ನಿಗದಿಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬುಡಾ ಸಾಮಾನ್ಯ ಸಭೆಯನ್ನು ವಿಡಿಯೋ ಮತ್ತು ಆಡಿಯೋ ಚಿತ್ರೀಕರಣ ಮಾಡಿ ಸಭೆ ನಡೆಸಿದ್ದಕ್ಕೆ ಸಚಿವ ಭೈರತಿ ಬಸವರಾಜು ಅವರು ಅಭಿನಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version