ದಿನದ ಸುದ್ದಿ

ಬೆಂಗಳೂರು ಇ-ಕಾಮರ್ಸ್‌ ಡಾರ್ಕ್‌ ಸ್ಟೋರ್‌ಗಳಲ್ಲಿ ಅವಧಿ ಮೀರಿದ ಆಹಾರ, ಔಷಧ ಪತ್ತೆ

Published

on

ಅಮೆಜಾನ್‌, ಇನ್‌ಸ್ಟಾಮಾರ್ಟ್‌ ಸೇರಿದಂತೆ ಹಲವು ಕೇಂದ್ರಗಳಲ್ಲಿ ಪರವಾನಗಿ ಇಲ್ಲದೆ ಸಂಗ್ರಹಣೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತಲಿನ ಇ-ಕಾಮರ್ಸ್‌ ಹಾಗೂ ಡಾರ್ಕ್‌ ಸ್ಟೋರ್‌ಗಳ ಜಾಲದಲ್ಲಿ ಪರವಾನಗಿ ಇಲ್ಲದೆ ಸಂಗ್ರಹಿಸಲಾಗುತ್ತಿದ್ದ ಔಷಧ ಹಾಗೂ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪತ್ತೆಹಚ್ಚಿದೆ. ಕಳೆದ ಒಂದು ತಿಂಗಳಲ್ಲಿ 3 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೋಟ್ಯಂತರ ರೂ. ಮೌಲ್ಯದಷ್ಟು ವಸ್ತುಗಳ ಮೂಲ, ಗುಣಮಟ್ಟ ಹಾಗೂ ವಿತರಣೆ ಕುರಿತು ತನಿಖೆ ಪ್ರಗತಿಯಲ್ಲಿದೆ.

http://Visit : www.suddidina.com

ಹೈಲೈಟ್ಸ್:
  • ಇನ್‌ಸ್ಟಾಮಾರ್ಟ್‌ ಗೋದಾಮು ದಾಳಿಯಲ್ಲಿ 1.43 ಕೋಟಿ ರೂ. ಮೌಲ್ಯದ ವಸ್ತು ವಶ
  • ಅಮೆಜಾನ್‌ ಸೆಂಟರ್‌ ದೆವನಹಳ್ಳಿ, ಆನೇಕಲ್‌ನಲ್ಲಿ ತಪ್ಪು ಲೇಬಲಿಂಗ್‌ ಹಾಗೂ ಅವಧಿ ಮೀರಿದ ಆಹಾರ ಪತ್ತೆ
  • ಲಿಯೋ 7 ಎಂಟರ್‌ಪ್ರೈಸಸ್‌ ಘಟಕ ಬಂದ್‌ – 56 ಲಕ್ಷ ರೂ. ಮೌಲ್ಯದ ಪದಾರ್ಥ ಜಪ್ತಿ
  • ಸಪ್ನಾ ಬಜಾರ್‌ ದಾಳಿಯಲ್ಲಿ ಅವಧಿ ಮೀರಿದ ಉತ್ಪನ್ನ ವಶ
  • ತನಿಖೆ ಮುಂದುವರಿದಿದ್ದು ಕೋಟ್ಯಂತರ ರೂ. ಮೌಲ್ಯದ ವಸ್ತುಗಳ ಮೂಲ, ಗುಣಮಟ್ಟ ಪರಿಶೀಲನೆ

ಆರೋಗ್ಯ ಸಚಿವ ಯು.ಟಿ. ಖಾದರ್‌ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದು, ಹೊಸಕೋಟೆಯ ಇನ್‌ಸ್ಟಾಮಾರ್ಟ್‌ ಗೋದಾಮಿನ ಮೇಲೆ ದಾಳಿ ನಡೆಸಿದಾಗ 1.43 ಕೋಟಿ ರೂ. ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳು ಹಾಗೂ ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ ಔಷಧ ಪತ್ತೆಯಾಗಿದೆ. ಘಟಕವನ್ನು ತಕ್ಷಣವೇ ಬಂದ್‌ ಮಾಡಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಇಲ್ಲಿ 33 ಲಕ್ಷ ರೂ. ಮೌಲ್ಯದ ತಪ್ಪು ಲೇಬಲಿಂಗ್‌ ಉತ್ಪನ್ನಗಳು, 1.5 ಕೋಟಿ ರೂ. ಮೌಲ್ಯದ ಅವಧಿ ಮೀರಿದ ಹಾಗೂ ಮೀರುವ ಹಂತದಲ್ಲಿರುವ ಆಹಾರ ಪದಾರ್ಥಗಳು, ಜೊತೆಗೆ 4.2 ಲಕ್ಷ ರೂ. ಮೌಲ್ಯದ ಔಷಧ ವಶಪಡಿಸಿಕೊಳ್ಳಲಾಗಿದೆ.

ದೆವನಹಳ್ಳಿಯ ಅಮೆಜಾನ್‌ ಸೆಂಟರ್‌ನಲ್ಲಿ ಆಹಾರ ಸುರಕ್ಷತೆ ಕಾಯಿದೆಯಡಿ ನಿಗದಿಪಡಿಸಿರುವ ಲೇಬಲಿಂಗ್‌ ಮಾನದಂಡಗಳಿಗೆ ಅನುಗುಣವಾಗಿರದ 20 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳು ಪತ್ತೆಯಾಗಿದೆ. ಇದರಲ್ಲಿ 14 ಲಕ್ಷ ರೂ. ಮೌಲ್ಯದ ತಪ್ಪು ಲೇಬಲಿಂಗ್‌ ಹಾಗೂ 6 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಪದಾರ್ಥಗಳು ಸೇರಿವೆ. ಜೊತೆಗೆ, ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ 2.45 ಲಕ್ಷ ರೂ. ಮೌಲ್ಯದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆನೇಕಲ್‌ನ ತಟ್ಟಿಹಳ್ಳಿ ಹಾಗೂ ಮಡಿವಾಳ ಬಳಿಯ ಅಮೆಜಾನ್‌ ಸೆಂಟರ್‌ನಿಂದ 32 ಲಕ್ಷ ರೂ. ಮೌಲ್ಯದ ಅಸಮರ್ಪಕ ಲೇಬಲಿಂಗ್‌ ಹಾಗೂ ಅವಧಿ ಮೀರಿದ ಆಹಾರ ಉತ್ಪನ್ನಗಳು ಪತ್ತೆಯಾಗಿದೆ. ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ 1.57 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ಕೂಡ ಜಪ್ತಿ ಮಾಡಲಾಗಿದೆ.

ಲಿಂಗರಾಜಪುರಂನ ಲಿಯೋ 7 ಎಂಟರ್‌ಪ್ರೈಸಸ್‌ ಘಟಕದ ಮೇಲೆ ದಾಳಿ ನಡೆಸಿದಾಗ 56 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಚಾಕೋಲೇಟ್‌, ಸಿಹಿ ತಿನಿಸು, ತುಪ್ಪ ಹಾಗೂ ಒಣಹಣ್ಣುಗಳು ಪತ್ತೆಯಾಗಿದೆ. ಘಟಕವನ್ನು ಮುಚ್ಚಲಾಗಿದೆ. ಎಚ್‌ಬಿಆರ್‌ ಲೇಔಟ್‌ನ ಸಪ್ನಾ ಬಜಾರ್‌ನಲ್ಲಿ 10 ಸಾವಿರ ರೂ. ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಕೋರಮಂಗಲದ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದ್ದ ಪೆಪ್‌ಟೈಡ್‌ ಪಾರ್ಟಿ ಪ್ರಕರಣದ ತನಿಖೆಯ ವೇಳೆ ಆನ್‌ಲೈನ್‌ನಲ್ಲಿ ಔಷಧ ವಿತರಣೆ ಬೆಳಕಿಗೆ ಬಂದಿತ್ತು. ಇದರ ಬೆನ್ನತ್ತಿ ಅಧಿಕಾರಿಗಳು ಅಮೆಜಾನ್‌, ಇನ್‌ಸ್ಟಾಮಾರ್ಟ್‌, ಸಪ್ನಾ ಬಜಾರ್‌ ಹಾಗೂ ಲಿಯೋ 7 ಎಂಟರ್‌ಪ್ರೈಸಸ್‌ ಸೇರಿದಂತೆ ಹಲವು ಕೇಂದ್ರಗಳಲ್ಲಿ ಪರವಾನಗಿ ಇಲ್ಲದೆ ಸಂಗ್ರಹಿಸಲಾಗುತ್ತಿದ್ದ ಆಹಾರ ಹಾಗೂ ಔಷಧಗಳನ್ನು ಪತ್ತೆಹಚ್ಚಿದ್ದಾರೆ.

ಸರ್ಕಾರವು ಗ್ರಾಹಕರ ಆರೋಗ್ಯವನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಸಂಗ್ರಹಣೆ ಹಾಗೂ ಮಾರಾಟದ ವಿರುದ್ಧ ಇನ್ನಷ್ಟು ದಾಳಿಗಳು ನಡೆಯಲಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.

Trending

Exit mobile version