ದಿನದ ಸುದ್ದಿ
ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆ ಇದೀಗ ಅಂತಿಮ ಹಂತ ತಲುಪಿದೆ.
ಹೈಲೈಟ್ಸ್: |
|
ಒಟ್ಟು 288 ಕಿ.ಮೀ. ಉದ್ದದ STRR ಬೆಂಗಳೂರು ಸುತ್ತಲಿನ ಪ್ರಮುಖ ನಗರ ಹಾಗೂ ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸಲಿದೆ. ಇದರಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ 243 ಕಿ.ಮೀ. ಮತ್ತು ತಮಿಳುನಾಡಿನಲ್ಲಿ 45 ಕಿ.ಮೀ. ರಸ್ತೆ ನಿರ್ಮಾಣವಾಗುತ್ತಿದೆ. ಒಟ್ಟು ಆರು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿರುವ ಯೋಜನೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಸುಮಾರು ಶೇ.95ರಷ್ಟು ಕೆಲಸ ಮುಗಿದಿದೆ.
http://Visit : www.suddidina.com
ಪ್ರಮುಖ ವಿಭಾಗಗಳ ಕಾಮಗಾರಿ ಬಹುತೇಕ ಪೂರ್ಣ
ದೊಡ್ಡಬಳ್ಳಾಪುರ-ಹೊಸಕೋಟೆ ನಡುವಿನ 38 ಕಿ.ಮೀ. ವಿಭಾಗದ ಕಾಮಗಾರಿ ಶೇ.99.20ರಷ್ಟು ಪೂರ್ಣಗೊಂಡಿದೆ. ದಾಬಸ್‌ಪೇಟೆ-ದೊಡ್ಡಬಳ್ಳಾಪುರ ಬೈಪಾಸ್ ನಡುವಿನ 42 ಕಿ.ಮೀ. NH648 ವಿಭಾಗದ ನಿರ್ಮಾಣವೂ ಪೂರ್ಣಗೊಂಡಿದೆ. ಕರ್ನಾಟಕ-ತಮಿಳುನಾಡು ಗಡಿಯ 21 ಕಿ.ಮೀ. ಉದ್ದದ ಗ್ರೀನ್‌ಫೀಲ್ಡ್ ಹೆದ್ದಾರಿ ಕಾಮಗಾರಿ ಶೇ.94.89ರಷ್ಟು ಮುಗಿದಿದ್ದು, ನವೆಂಬರ್ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದೆ.
ತಮಿಳುನಾಡು ಭಾಗದಲ್ಲೂ ಶೇ.91.32ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಸೆಪ್ಟೆಂಬರ್‌ನಲ್ಲಿ ಮುಗಿಸುವ ಗುರಿ ಹೊಂದಲಾಗಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ಸುಮಾರು 7 ಕಿ.ಮೀ. ಭಾಗದ ಕಾಮಗಾರಿಯೂ ಪೂರ್ಣಗೊಂಡಿದೆ.
₹14,655 ಕೋಟಿ ವೆಚ್ಚದ ಬೃಹತ್ ಯೋಜನೆ
STRR ನಿರ್ಮಾಣಕ್ಕಾಗಿ ಒಟ್ಟು ₹14,655 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಕರ್ನಾಟಕ ವ್ಯಾಪ್ತಿಯ ಭೂಸ್ವಾಧೀನಕ್ಕೆ ತಗಲುವ ₹6,117 ಕೋಟಿಯಲ್ಲಿ ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಈಗಾಗಲೇ ₹518.32 ಕೋಟಿ ಬಿಡುಗಡೆ ಮಾಡಲಾಗಿದೆ. ತಮಿಳುನಾಡು ಭಾಗದ ಭೂಸ್ವಾಧೀನ ಸೇರಿದಂತೆ ಉಳಿದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ.
ಮುಂದಿನ ಹಂತದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆರು ಪಥಗಳ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು PPPAC ಮೌಲ್ಯಮಾಪನ ಮಾಡಿದೆ. ಇದರಿಂದ ಮುಂದಿನ ಹಂತದ ಕಾಮಗಾರಿಗಳಿಗೂ ವೇಗ ಸಿಗುವ ನಿರೀಕ್ಷೆಯಿದೆ.
ನಗರದೊಳಗಿನ ವಾಹನ ದಟ್ಟಣೆ ಇಳಿಕೆ
STRR ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ಹೊರರಾಜ್ಯಗಳಿಂದ ಬರುವ ಭಾರಿ ವಾಹನಗಳು ಬೆಂಗಳೂರು ನಗರ ಪ್ರವೇಶಿಸದೇ ನೇರವಾಗಿ ರಿಂಗ್ ರಸ್ತೆಯ ಮೂಲಕ ಸಾಗಬಹುದು. ದೊಡ್ಡಬಳ್ಳಾಪುರ, ಹೊಸಕೋಟೆ, ಆನೇಕಲ್, ನೆಲಮಂಗಲ ಸೇರಿದಂತೆ ಪ್ರಮುಖ ಹೊರವಲಯ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆ ನಗರ ಸಂಚಾರದ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ನಗರದೊಳಗಿನ ಸಂಚಾರ ದಟ್ಟಣೆ ಶೇ.40ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ವಾಹನಗಳ ಪ್ರಯಾಣದ ಸಮಯ ಹಾಗೂ ಇಂಧನ ಬಳಕೆ ಇಳಿಯುವುದರ ಜೊತೆಗೆ ವಾಯು ಮತ್ತು ಶಬ್ದ ಮಾಲಿನ್ಯವೂ ಕಡಿಮೆಯಾಗಬಹುದು. ಕೈಗಾರಿಕೆಗಳು, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಗೂ STRR ಹೊಸ ವೇಗ ನೀಡುವ ಸಾಧ್ಯತೆಯಿದೆ.