ದಿನದ ಸುದ್ದಿ

ಅಭಿವೃದ್ಧಿಯ ಹಾದಿಯಲ್ಲಿರುವ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇದು ಅತ್ಯಂತ ಪ್ರಶಸ್ತ ಸಮಯ : ಕೇಂದ್ರ ಸಚಿವ ಅನುರಾಗ್ ಠಾಕೂರ್

Published

on

ಸುದ್ದಿದಿನ ಡೆಸ್ಕ್ : ಅಭಿವೃದ್ಧಿಯ ಹಾದಿಯಲ್ಲಿರುವ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇದು ಅತ್ಯಂತ ಪ್ರಶಸ್ತವಾದ ಸಮಯ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಮುಂಬೈನಲ್ಲಿ ಟೈಮ್ಸ್ ಆಫ್ ಇಂಡಿಯಾದ ಎಕನಾಮಿಕ್ ಕಾನ್ಕ್ಲೇವ್-2022 ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೀವ್ರ ಸ್ವರೂಪದ ಆರ್ಥಿಕ ಸುಧಾರಣೆ ಜಾರಿಗೊಳಿಸಲು ಕಟಿಬದ್ಧವಾಗಿದೆ ಎಂದರು.

ಇಡೀ ಜಗತನ್ನು ಕಳೆದೆರಡು ವರ್ಷಗಳಿಂದ ಕಾಡಿದ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿಭಾಯಿಸಿದ ಪರಿಯನ್ನು ಅವರು ಶ್ಲಾಘಿಸಿದರು. ಭಾರತ ನಿತ್ಯ ಒಂದು ಆಸ್ಟ್ರೇಲಿಯಾ ದೇಶಕ್ಕೆ ನೀಡ ಬಹುದಾದ ಪ್ರಮಾಣದಷ್ಟು ಕೋವಿಡ್ ಲಸಿಕೆಗಳನ್ನು ದೇಶದ ಜನರಿಗೆ ನೀಡಲಾಗುತ್ತಿದ್ದು, ಇದು ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಈವರೆಗೆ 187ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದ್ದು, ಅಭಿವೃದ್ಧಿಯ ಫಲಗಳು ಎಲ್ಲ ವರ್ಗಗಳಿಗೂ ತಲುಪಿಸಲಾಗುತ್ತಿದೆ ಎಂದರು.ನಂತರ ಸಚಿವರು ಮುಂಬೈನ ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾ ಕೇಂದ್ರಕ್ಕೂ ಭೇಟಿ ನೀಡಿದರು. ಮುಂಬೈಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಈ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎನ್ಎಂಐಸಿ ದೇಶದ ಪರಂಪರೆಯಾಗಿದ್ದು, ಭಾರತೀಯ ಸಿನಿಮಾಗಳನ್ನು ಇಷ್ಟಪಡುವ ಜನರೆಲ್ಲರೂ ಮುಂಬೈಗೆ ಭೇಟಿ ನೀಡಿದಾಗ ತಪ್ಪದೆ ಈ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಕೋರಿದರು.

ಈ ಮ್ಯೂಸಿಯಂ ಪ್ರೇಕ್ಷಕರನ್ನು 100 ವರ್ಷಗಳ ಹಳೆಯ ಕಾಲಕ್ಕೆ ಕರೆದೊಯ್ಯಲಿದ್ದು, ಸಿನಿಮಾ ನಿರ್ಮಾಣದ ಆರಂಭ ಘಟ್ಟದಿಂದಿಡಿದು, ಎಲ್ಲ ಕಾಲದ ಘಟನೆಗಳನ್ನು ಒಳಗೊಂಡಿದೆ ಎಂದು ವಿವರಿಸಿದರು. ಭಾರತೀಯ ಸಿನಿಮಾಗಳು ಪ್ರಭಾವಯುತವಾಗಿದ್ದು, ಈ ಮನರಂಜನಾ ಮಾಧ್ಯಮ ಭಾರತ ಅಷ್ಟೇ ಅಲ್ಲದೆ, ಇಡೀ ಜಗತ್ತಿನ ಜನರ ಮನಸ್ಸು ಹಾಗೂ ಹೃದಯಗಳನ್ನು ಸೂರೆಗೊಳ್ಳುತ್ತಿದೆ ಎಂದು ಹೇಳಿದರು.

ನಂತರ ಸಚಿವರು, ಮುಂಬರಲಿರುವ ಮುಂಬೈ ಅಂತಾರಾಷ್ಟ್ರೀಯ ಸಿನಿಮೋತ್ಸವ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಚರ್ಚೆ ನಡೆಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version