ನೆಲದನಿ

ರಂಗಲೋಕದ ಮೂಲಕ ಸಿನಿಮಾ ಲೋಕ ಪ್ರವೇಶಿಸಿದ ಯುವಪ್ರತಿಭೆ ‘ಬಿಂದು ರಕ್ಷಿದಿ’

Published

on

  • ಡಾ.ಕೆ.ಎ.ಓಬಳೇಶ್

ಗತ್ತಿನ ಸಾಂಸ್ಕøತಿಕ ಪರಂಪರೆಯಲ್ಲಿ ರಂಗಲೋಕವು ವಿಶಿಷ್ಟವಾಗಿ ಗಮನ ಸೆಳೆಯುತ್ತ ಸಾಗಿದೆ. ಇಂತಹ ರಂಗಲೋಕದ ಮೂಲಕ ಹಲವಾರು ದಾರ್ಶನಿಕರು, ಚಿಂತಕರು, ಕಲಾವಿದರು ಮೂಡಿಬಂದಿದ್ದಾರೆ. ಇವರು ರಂಗ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಇದರೊಂದಿಗೆ ತಮ್ಮಲ್ಲಿ ಅಂತರ್ಗತವಾಗಿರುವ ಕ್ರಿಯಾಶೀಲತೆಯೊಂದಿಗೆ ರಂಗಭೂಮಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುವ ನಿದರ್ಶನಗಳು ನಮ್ಮ ಮುಂದಿವೆ. ಇಂತಹ ಸಾಧಕರ ಸಾಲಿನಲ್ಲಿ ಯುವಪ್ರತಿಭೆಯಾದ ಬಿಂದು ರಕ್ಷಿದಿಯವರು ಒಬ್ಬರಾಗಿದ್ದಾರೆ. ಬಿಂದು ರಕ್ಷಿದಿಯವರು ತಮ್ಮಲ್ಲಿ ಅಂತರ್ಗತವಾಗಿದ್ದ ಕ್ರಿಯಾಶೀಲ ಪ್ರತಿಭೆಯನ್ನು ಹೊರಹಾಕುವುದಕ್ಕೆ ರಂಗಭೂಮಿಗೆ ಪ್ರವೇಶ ಪಡೆದು ನಂತರದಲ್ಲಿ ಸಿನಿಮಾ ಲೋಕದಲ್ಲಿಯೂ ತಮ್ಮ ಪ್ರತಿಭಾ ಸಾಮಥ್ರ್ಯವನ್ನು ಪ್ರದರ್ಶಿಸಿದ್ದಾರೆ. ಇಂತಹ ವಿಶಿಷ್ಟ ಯುವಪ್ರತಿಭೆಯನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಬಹುಮುಖ್ಯ ಆಶಯವಾಗಿದೆ.

ಬಿಂದು ಅವರು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ರಕ್ಷಿದಿ ಗ್ರಾಮದಲ್ಲಿ 11 ಮೇ 1990ರಲ್ಲಿ ಜನಿಸಿದರು. ತಂದೆ ಉಗ್ಗಪ್ಪ, ತಾಯಿ ಶೋಭ. ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಇವರು ತಂದೆ ತಾಯಿಗಳು ಹವ್ಯಾಸಿ ರಂಗ ಕಲಾವಿದರಾಗಿದ್ದ ಕಾರಣ ರಂಗಭೂಮಿಯ ಬಗ್ಗೆ ವಿಶಿಷ್ಟವಾದ ನಂಟನ್ನು ಬೆಳೆಸಿಕೊಂಡಿದ್ದರು. ಹೀಗಾಗಿ ಬಿಂದು ಅವರಿಗೆ ಬಾಲ್ಯದ ದಿನಮಾನಗಳಿಂದಲೂ ರಂಗಭೂಮಿಯ ಬಗ್ಗೆ ಭಾವನಾತ್ಮಕವಾದ ಒಡನಾಟವಿತ್ತು.

ಬಿಂದು ಅವರು ಶಾಲಾ-ಕಾಲೇಜುಗಳ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಪ್ರಾಥಮಿಕ ಶಿಕ್ಷಣ ಪಡೆಯುವ ವೇಳೆಗೆ ಸಕಲೇಶಪುರದಲ್ಲಿ ನಡೆಸಿದ ಸಾಂಸ್ಕøತಿಕ ಕಾರ್ಯಕ್ರಮವೊಂದರಲ್ಲಿ ಗಾಯನ ಮಾಡಿ ‘ಕಲಾ ತಪಸ್ವಿ’ ಪ್ರಶಸ್ತಿಗೆ ಭಾಜನರಾಗಿದ್ದ ಕೀರ್ತಿ ಬಿಂದು ಅವರಿಗೆ ಸಲ್ಲುತ್ತದೆ.

ಹೀಗೆ ಶಾಲಾ ಕಾಲೇಜು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಪ್ರತಿಯೊಂದು ಸಾಂಸ್ಕøತಿಕ ಕಾರ್ಯಕ್ರಮದಲ್ಲೂ ತಮ್ಮಲ್ಲಿ ಅಂತರ್ಗತವಾಗಿದ್ದ ನೃತ್ಯ, ಹಾಡುಗಾರಿಕೆಯಂತಹ ವಿಶಿಷ್ಟ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ರಾಶಿ ರಾಶಿ ಪ್ರಶಸ್ತಿ ಹಾಗೂ ಉಡುಗೊರೆಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಬಿಂದು ಅವರ ಪ್ರತಿಭೆ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಚಿಗುರೊಡೆಯಲು ಪ್ರೇರಕ ಶಕ್ತಿಯಾದವರು ಅವರ ಶಿಕ್ಷಕ ವರ್ಗ.

ಅವರು ನೀಡಿದ ಪ್ರೋತ್ಸಾಹದ ಬಲದಿಂದ ತನ್ನಲ್ಲಿ ಅಂತರ್ಗತವಾಗಿದ್ದ ಕಲೆಯನ್ನು ಪ್ರದರ್ಶಿಸಿಕೊಂಡು ಬಂದಿದ್ದಾರೆ. ಹೀಗೆ ಬಾಲ್ಯದ ದಿನಗಳಿಂದಲೂ ಸಾಂಸ್ಕøತಿಕ ಲೋಕದಲ್ಲಿ ತನ್ನನ್ನು ತೊಡಗಿಸಿಕೊಂಡ ಬಿಂದು ತಮ್ಮ ಪದವಿ ಶಿಕ್ಷಣದ ತರುವಾಯ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಇವರಿಗೆ ಆ ಉದ್ಯೋಗದಲ್ಲಿ ಆಸಕ್ತಿ ಮೂಡದ ಕಾರಣ ಅದನ್ನು ತೊರೆದು ಮನೆಗೆ ಹಿಂತಿರುಗುತ್ತಾರೆ. ಆನಂತರ ಅವರು ಮುಖ ಮಾಡಿದ್ದು ರಂಗಭೂಮಿಯತ್ತ.

ಬಿಂದು ರಕ್ಷಿದಿಯವರು ತಾವು ಉದ್ಯೋಗ ತೊರೆದು ಹೊರಬಂದು ತಮ್ಮಲ್ಲಿರುವ ಕಲಾ ತುಡಿತವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಅವರು ಸೂಚಿಸಿದ್ದರು ‘ನೀನಾಸಂ’ ಎಂಬ ರಂಗಸಂಸ್ಥೆಯ ಬಗ್ಗೆ. ಆದರೆ ಇವರು ನಿನಾಸಂ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಬೇಕಾದ ಪ್ರಾಥಮಿಕ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಆದರೆ ಸ್ನೇಹಿತರ ಒತ್ತಾಯದ ಮೇರೆಗೆ ನೀನಾಸಂ ರಂಗಸಂಸ್ಥೆಯು ನಡೆಸುವ ಡಿಪ್ಲೋಮಾ ಪದವಿಗೆ ಅರ್ಜಿ ಸಲ್ಲಿಸಿ ಅಳುಕಿನಿಂದಲೇ ಸಂದರ್ಶನಕ್ಕೆ ಹಾಜರಾಗುತ್ತಾರೆ.

ಸಂದರ್ಶನದಲ್ಲಿ ಇವರಲ್ಲಿ ಅಂತರ್ಗತವಾಗಿದ್ದ ಕಲೆಯನ್ನು ಅರಿತು ಉತ್ತಮ ಸಲಹೆ ಮತ್ತು ಸಹಕಾರ ನೀಡುತ್ತಾರೆ. ಇದೇ ಧೈರ್ಯದಿಂದ ರಂಗಶಿಕ್ಷಣ ಪಡೆಯಲು ಮುಂದಾಗುತ್ತಾರೆ. ನೀನಾಸಂನಲ್ಲಿ ರಂಗಶಿಕ್ಷಣ ಪಡೆಯುವ ಹಂತದಲ್ಲಿಯೇ ಹಲವಾರು ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ನೀನಾಸಂ ಸುತ್ತಾಟದಲ್ಲಿಯೇ ಇವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಮುನ್ನೆಡೆಯನ್ನು ಕಾಣುತ್ತಾರೆ.

ನೀನಾಸಂ ರಂಗ ತಡದಿಂದ ಆರಂಭವಾದ ಇವರ ಕಲಾ ಬದುಕು ನಂತರ ಥಿಯೇಟರ್ ಸಮುರಾಯ್, ಥಿಯೇಟರ್ ಚಾವಡಿಂ ಥಿಯೇಟರ್ ಹಾಗೂ ತತ್ಕಾಲ್ ಥಿಯೇಟರ್‍ಗಳಲ್ಲಿ ಹಲವಾರು ವರ್ಷಗಳ ಕಾಲ ರಂಗಸೇವೆ ಸಲ್ಲಿಸುವ ಸಾಕಷ್ಟು ಅನುಭವ ಪಡೆಯುತ್ತಾರೆ. ಇವರು ಸುಮಾರು ಇಪ್ಪತ್ತೈದ್ದಕ್ಕೂ ಹೆಚ್ಚು ನಾಟಕಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸಾವಿರಕ್ಕೂ ಅಧಿಕ ಪ್ರದರ್ಶನ ನೀಡುವ ಮೂಲಕ ಬಿಂದು ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇವರು ಪ್ರದರ್ಶಿಸಿದ ಪ್ರಮುಖ ನಾಟಕಗಳೆಂದರೆ; ಉತ್ತರ ರಾಮ ಚರಿತೆ, ನಮ್ಮ ಸಂಸಾರ, ಗುಣಮುಖ, ತಾರ್ತುಫ್, ಕಾಲಂದುಗೆಯ ಕತೆ, ಹಸಿದ ಕಲ್ಲುಗಳು ಚಮ್ಮಾರನ ಚಾಲೂಕಿ ಹೆಂಡತಿ ಸಾಫಲ್ಯ, ದೂತ ಘಟತ್ಕಚ, ಹೇಗೆ ಬೇಕೋ ಹಾಗೆ, ಧರ್ಮಪರೀಕ್ಷೆ, ಗುತಿಲ್ಲದೆ ನಡೆದ ಘಳಿಗೆ, ಕೊಳ ಇತ್ಯಾದಿ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಂದು ರಕ್ಷಿದಿಯವರು ರಂಗಭೂಮಿಯಲ್ಲಿ ತೋರಿದ ಪ್ರದರ್ಶನ ಕಲೆಯಿಂದಾಗಿ ಹಲವಾರು ಸಿನಿಮಾ ನಿರ್ದೇಶಕರ ಮೆಚ್ಚುಗೆಗೂ ಪಾತ್ರರಾಗಿದ್ದರು. ಹೀಗಾಗಿ ಇವರ ನಾಟಕಗಳನ್ನು ವೀಕ್ಷಿಸಿದ ಹಲವಾರು ನಿರ್ದೇಶಕರು ಹಾಗೂ ನಿರ್ಮಾಪಕರಿಂದ ಸಿನಿಮಾ ಲೋಕಕ್ಕೂ ಅವಕಾಶ ಲಭಿಸಿತು. ಸಿನಿಮಾ ಲೋಕದ ಪ್ರವೇಶಕ್ಕಾಗಿ ಇವರು ಬೆಂಗಳೂರಿಗೆ ತೆರಳಿದ ತರುವಾಯದಲ್ಲಿ ತಮ್ಮ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ‘ಆಕ್ಟ್ ರಿಆಕ್ಟ್’ ಎಂಬ ರಂಗತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರಿಗೂ ಸಲ್ಲುತ್ತದೆ.

ಬಿಂದು ಅವರಿಗೆ ಸಿಕ್ಕ ಮೊದಲ ಸಿನಿಮಾ ಅವಕಾಶವೆಂದರೆ ‘ಪಡ್ಡಾಯಿ’. ರಾಷ್ಟ್ರ ಪ್ರಶಸ್ತಿ ವಿಜೇತರಾದ ಅಭಯಸಿಂಹ ಅವರು ಬಿಂದು ಅವರ ನಟನೆಯನ್ನು ನೋಡಿ ತಾವು ಸಿನಿಮಾ ತಯಾರಿಯಲ್ಲಿದ್ದ ಪಡ್ಡಾಯಿ ಸಿನಿಮಾದ ಮುಖ್ಯ ಪಾತ್ರಕ್ಕೆ ಇವರೇ ಸೂಕ್ತವೆಂದು ಆಮಂತ್ರಣವನ್ನಿತ್ತರು. ತಮಗೆ ಸಿಕ್ಕ ಮೊದಲ ಅವಕಾಶವನ್ನು ತುಂಬು ಹೃದಯದಿಂದ ಸ್ವೀಕರಿಸಿದ ಇವರು ಆ ಸಿನಿಮಾಗೆ ಹಾಗೂ ತಮ್ಮನ್ನು ನಂಬಿ ಅವಕಾಶ ನೀಡಿದ ಸಿನಿಮಾ ನಿರ್ಮಾಣ ತಂಡಕ್ಕೆ ಅಭಾರಿಯಾಗಿ ನ್ಯಾಯ ಒದಗಿಸಲು ಅವಿರತ ಶ್ರಮಿಸಿದ್ದಾರೆ.

ಮೊದಲ ಸಿನಿಮಾದಲ್ಲಿ ಉತ್ತಮ ನಟನೆಯ ಮೂಲಕ ಪ್ರೇಕ್ಷಕರು ಹಾಗೂ ಸಿನಿಮಾ ಲೋಕದ ದಿಗ್ಗಜರಿಂದಲೂ ಪ್ರಶಂಸೆಗೆ ಒಳಗಾದರು. ನಂತರದಲ್ಲಿ ‘ಪ್ರವೇಶ’, ‘ಉತ್ತಮರು’, ‘ಶುಭಮಂಗಳ’, ‘ಗವಿಸಿದ್ಧ’ ಎಂಬ ಸಿನಿಮಾಗಳಲ್ಲಿ ನಟಿಸುವ ಅವಕಾಶ ಲಭಿಸಿದ್ದು, ಮತ್ತಷ್ಟು ಸಿನಿಮಾಗಳು ಇವರ ನಟನೆಗಾಗಿ ಮೀಸಲಾಗಿವೆ. ಇವರ ನಟನೆಯ ನಾಟಕ ಮತ್ತು ಸಿನಿಮಾಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಹೊರ ರಾಜ್ಯಗಳಲ್ಲಿಯೂ ಪ್ರದರ್ಶನಗೊಂಡಿವೆ.

ಪಡ್ಡಾಯಿ ಸಿನಿಮಾವು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರದರ್ಶನಗೊಂಡಿರುವುದು ವಿಶೇಷವಾಗಿದೆ. ಹೈದರಬಾದಿನ ಅನ್ನಪೂರ್ಣೆಶ್ವರಿ ಇನ್ಸ್ಟಿಟ್ಯೂಟ್ ಹಾಗೂ ಹೆಸರಾಂತ ನಿರ್ದೇಶಕರಾದ ‘ಸತ್ಯಜಿತ್ ರೇ’ ಇನ್ಸ್ಟಿಟ್ಯೂಟ್‍ನ ವಿಶೇಷ ಕಿರುಚಿತ್ರ ಪ್ರಾಜೆಕ್ಟ್ ಮೂವಿಗಳಲ್ಲೂ ಬಿಂದು ಅವರು ತಮ್ಮ ನಟನೆಯನ್ನು ಪ್ರದರ್ಶಿಸಿರುವುದು ವಿಶೇಷವಾಗಿದೆ.

ಸಿನಿಮಾ ಲೋಕವೆಂದರೆ ಅದು ಅತೀ ಸೌಂದರ್ಯವಂತರಿಗೆ ಮಾತ್ರವೆಂಬ ನಂಬಿಕೆಯೊಂದಿದೆ. ಆದರೆ ನಟನೆಯ ಮೂಲಕ ಕಪ್ಪು ವರ್ಣದ ಸುಂದರಿಯೂ ಕೂಡ ಸಿನಿಮಾ ನಾಯಕಿಯಾಗಿ ಯಶಸ್ವಿಯಾಗಬಹುದು. ಹಾಗೆಯೇ ಒಂದು ಸಿನಿಮಾವನ್ನು ಕಪ್ಪು ಸುಂದರಿಯಿಂದ ಯಶಸ್ವಿಗೊಳಿಸಬಹುದು ಎಂಬುದಕ್ಕೆ ಇವರು ಮಾದರಿಯಾಗಿ ನಿಂತಿದ್ದಾರೆ.

ಯಾವುದೇ ಪಾತ್ರವನ್ನಾದರೂ ಯಶಸ್ವಿಯಾಗಿ ನಿಭಾಯಿಸುವೆ ಎನ್ನುವಷ್ಟು ರಂಗಭೂಮಿಯಲ್ಲಿ ಪರಿಣಿತಿ ಪಡೆದ ಬಿಂದು ಅವರು ನಾಟಕ ಹಾಗೂ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಅಭಿವ್ಯಕ್ತಿಸಿದ್ದಾರೆ. ಹೀಗೆ ರಂಗಭೂಮಿಯ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದ ಬಿಂದು ರಕ್ಷಿದಿಯವರು ಸಿನಿಮಾ ಲೋಕದಲ್ಲಿಯೂ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ಧಾರವಾಹಿ ಕ್ಷೇತ್ರದಲ್ಲಿಯೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದು, ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ದೇವಿ ಪಾತ್ರದ ಮೂಲಕ ಪ್ರೇಕ್ಷಕರ ಹೃದಯವೊಕ್ಕಿದ್ದಾರೆ. ಇವರು ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಹಲವಾರು ನಾಟಕಗಳು ಹಾಗೂ ಶಿಬಿರಗಳಿಗೆ ನಿರ್ದೇಶನ ಮಾಡಿದ್ದಾರೆ. ಆ ಮೂಲಕ ಅವಕಾಶ ಸಿಕ್ಕರೆ ಯಾವುದೇ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ ಎಂಬ ಆತ್ಮಸ್ಥೈರ್ಯದೊಂದಿಗೆ ರಂಗಭೂಮಿ ಮತ್ತು ಸಿನಿಮಾ ಲೋಕದತ್ತ ದಾಪುಗಾಲು ಹಾಕುತ್ತಿದ್ದಾರೆ.

ಮನೆಯಲ್ಲಿನ ತಂದೆ ತಾಯಿಗಳ ಸಹಕಾರ, ತನ್ನ ಅಕ್ಕಂದಿರಾದ ಭವ್ಯ, ಭಾಮಿನಿ, ಬನಶ್ರೀ ಅವರ ಪ್ರೇರಣೆ, ಶಿಕ್ಷಕ ವರ್ಗದ ಪ್ರೋತ್ಸಾಹದ ನಡುವೆ ಅರಳಿದ ಬಿಂದು ಎಂಬ ಪ್ರತಿಭೆ ರಕ್ಷಿದಿ ಎಂಬ ಹಳ್ಳಿಯಿಂದ ಹೊರಟು ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಭಾಗಗಳಲ್ಲಿ ತನ್ನ ಕಲಾ ಕಂಪನ್ನು ಸೂಸುತ್ತಿದೆ. ಸಮಾಜದ ವ್ಯಂಗ್ಯ ಮತ್ತು ಕುಹಕ ಮಾತುಗಳಿಗೆ ಅಂಜದೆ ಕಲಾ ಜಗತ್ತಿನಲ್ಲಿ ವಿಹರಿಸುತ್ತಿರುವ ಬಿಂದು ಅವರು ತಮ್ಮ ಸ್ವಗ್ರಾಮದಲ್ಲಿಯೇ ರಂಗ ತಂಡವೊಂದನ್ನು ರೂಪಿಸುವ ಹಂಬಲ ಹೊಂದಿದ್ದಾರೆ. ಇವರ ಈ ಬಣ್ಣದ ಲೋಕದ ಪಯಣವು ಸುಖಕರವಾಗಿರಲೆಂದು ಹಾಗೂ ಅವರ ಎಲ್ಲಾ ಕನಸುಗಳು ಯಶಸ್ವಿಯಾಗಲೆಂದು ಸುದ್ಧಿದಿನ ಆನ್‍ಲೈನ್ ಬಳಗದ ವತಿಯಿಂದ ಹಾರೈಸುತ್ತೇವೆ.

(ಡಾ.ಕೆ.ಎ.ಓಬಳೇಶ್
9591420216)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version