ದಿನದ ಸುದ್ದಿ
ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ : ಸಚಿವ ಬಿ.ಸಿ. ನಾಗೇಶ
ಸುದ್ದಿದಿನ,ವಿಜಯಪುರ : ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಬಯೋಮೆಟ್ರಿಕ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಶಿಕ್ಷಕರ ಹಾಜರಾತಿ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ.
ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ದೊರೆಯಲಿದ್ದು, ಶೈಕ್ಷಣಿಕ ಪ್ರಗತಿಯೂ ಸಾಧ್ಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿನಾಗೇಶ ಹೇಳಿದ್ದಾರೆ.
ವಿಜಯಪುರ ಆಲಮಟ್ಟಿ ಕೃಷ್ಣಭಾಗ್ಯ ಜಲನಿಗಮ ಕಚೇರಿಯಲ್ಲಿ ನಿನ್ನೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಶಾಲೆಗಳಿಗೆ ಕಾಲ-ಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಶಿಕ್ಷಕರ ಹಾಜರಾತಿ, ಶಾಲೆಯ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಬಳಿಗೊಂದರಂತೆ ಮಾದರಿ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಅಗತ್ಯವಿರುವ ಕಡೆ 2 ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಬಜೆಟ್ ಘೋಷಣೆ ಪ್ರಕಾರ ಮಾದರಿ ಶಾಲೆಗಳ ಸ್ಥಾಪನೆಗೆ 15 ದಿನಗಳಲ್ಲಿ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243