ದಿನದ ಸುದ್ದಿ
ದಾವಣಗೆರೆ ಹಕ್ಕಿಜ್ವರ : ಕೋಳಿಗಳನ್ನು ವೈಜ್ಞಾನಿಕವಾಗಿ ಕಿಲ್ ಮಾಡಬೇಕು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಸುದ್ದಿದಿನ,ದಾವಣಗೆರೆ : ಹಕ್ಕಿಜ್ವರ ಕಂಡು ಬಂದ ಹರಿಹರ ತಾಲ್ಲೂಕಿನ ಬನ್ನಿಕೋಡು ಸೇರಿದಂತೆ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ವೈಜ್ಞಾನಿಕ ರೀತಿಯಲ್ಲಿ 332 ಕೋಳಿಗಳನ್ನು ನಾಶಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ನಿಯಂತ್ರಣ ಮತ್ತು ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಾರೋಗ್ಯಕ್ಕೆ ಒಳಪಟ್ಟ ಕೋಳಿಗಳನ್ನು ವೈಜ್ಞಾನಿಕವಾಗಿ ಕಿಲ್ಲಿಂಗ್ ಮಾಡಬೇಕು. ಆದ್ದರಿಂದ ಅನಾರೋಗ್ಯಕ್ಕೆ ಒಳಪಟ್ಟ ಕೋಳಿಗಳನ್ನು ಸಾರ್ವಜನಿಕರು ಸ್ವಪ್ರೇರಣೆಯಿಂದ ನಾಶಮಾಡದೇ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಕರೆಮಾಡಿ ಮಾಹಿತಿ ನೀಡಬೇಕು ಎಂದರು.
ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ಸೂಚನೆ
ಆವರಗೆರೆಯ ಆರ್‍ಹೆಚ್ ಫಾರ್ಮ್‍ನ ಕೋಳಿಗಳಲ್ಲಿ ಹಕ್ಕಿಜ್ವರ ಬಂದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಫಾರ್ಮ್‍ಗಳ ಕೋಳಿಗಳ ಸ್ಯಾಂಪಲ್‍ನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕೆಂದು ಸೂಚಿಸಿದರು.
ಹಕ್ಕಿಜ್ವರ ಪೀಡಿತ ಪ್ರದೇಶ ಮತ್ತು ಸರ್ವೇಕ್ಷಣಾ ವಲಯದಲ್ಲಿರುವ ಯಾವದೇ ಪಕ್ಷಿಗಳು ಮತ್ತು ಕೋಳಿಯ ಮಾಂಸ ಹಾಗೂ ಮೊಟ್ಟೆಯಿಂದ ತಯಾರಿಸಿದ ಆಹಾರವನ್ನು ಸಾರ್ವಜನಿಕರು ಸೇವಿಸಬಾರದು ಮತ್ತು ಮಾರಾಟ ಮಾಡಬಾರದು ಎಂದರು.
ಸತ್ತ ಕೋಳಿಗಳನ್ನು ಅವೈಜ್ಞಾನಿಕವಾಗಿ ಸಾರ್ವಜನಿಕ ಅಥವಾ ಖಾಸಗಿ ಪ್ರದೇಶಗಳಲ್ಲಿ ಎಸೆಯಬಾರದು. ಒಂದು ವೇಳೆ ಹೀಗೆ ಎಸೆದರೆ ಸಂಬಂಧಿಸಿದ ವಾಹನಗಳ ಚಾಲಕರು, ಮಾಲೀಕರು ಇವರ ಮೇಲೆ ಸೂಕ್ತ ಜರುಗಿಸಲಾಗುವುದು. ಹಾಗೂ ಸಾರ್ವಜನಿಕರು ಹೀಗೆ ಮಾಡುವುದು ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿ ಅಥವಾ ಇಲಾಖೆಗೆ ತಿಳಿಸಬೇಕೆಂದರು.
ದಾವಣಗೆರೆ ತಾಲ್ಲೂಕಿನ ಗ್ರಾಮಗಳು ಮತ್ತು ಹರಿಹರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಗ್ರಾಮಗಳಿಂದ ಯಾವುದೇ ಕೋಳಿ ಮಾಂಸ ಮತ್ತು ಇನ್ನಿತರೆ ಪಕ್ಷಿಗಳ ಮಾಂಸ ಹಾಗೂ ಮೊಟ್ಟೆಗಳನ್ನು ಸಾರ್ವಜನಿಕರು ಸೇವಿಸಬಾರದು ಮತ್ತು ಸಾಗಾಣಿಕೆ ಮಾಡಬಾರದು ಎಂದು ಆದೇಶಿಸಲಾಗಿದೆ ಎಂದು ಹೇಳಿದರು.
ಹರಿಹರ ತಾಲ್ಲೂಕಿನ ಗ್ರಾಮಗಳು
ಬನ್ನಿಕೋಡು, ಬೇವಿನಹಳ್ಳಿ, ಸಾಲಕಟ್ಟೆ, ಮಿಟ್ಮಕಟ್ಟೆ, ದೇವರಬೆಳಕೆರೆ. ಕಡ್ಲೆಗೊಂದಿ, ಸಲಗನಹಳ್ಳಿ, ಕುಣೆಬೆಳೆಕೆರೆ, ಬೂದುಹಾಳ್, ಗುಳದಹಳ್ಳಿ, ಆದಾಪುರ, ನಿಟ್ಟೂರು, ಕುಂಬಳೂರು, ಜಿಗಳಿ, ಯಲವಟ್ಟಿ, ಲಕ್ಕಿಶೆಟ್ಟೆಹಳ್ಳಿ, ಕಮಾಲಪುರ, ಹೊಸಹಳ್ಳಿ, ಬಿಳಸನೂರು, ತಿಮ್ಲಾಪುರ, ರಾಜನಹಳ್ಳಿ, ಹಲಸಬಾಳು, ಹರಗನಹಳ್ಳಿ, ನಾಗೇನಹಳ್ಳಿ, ರಾಮತೀರ್ಥ, ರಾಯಪುರ, ಭಾನುವಳ್ಳಿ, ಬ್ಯಾಲದಹಳ್ಳಿ, ಯಕ್ಕೆಗೊಂದಿ, ನಂದಿತಾವರೆ, ಬೆಳ್ಳೂಡಿ, ಹನಗವಾಡಿ, ಷಂಶೀಪುರ, ಮಹಜೇನಹಳ್ಳಿ, ಶೇರಾಪುರ, ಹರಿಹರ, ದೊಗ್ಗಳ್ಳಿ, ಅಮರವತಿ, ಮಲ್ಲನಾಯ್ಕನಹಳ್ಳಿ, ಗುಳದಹಳ್ಳಿ, ಸಂಕ್ಲೀಪುರ ಮತ್ತು ಹರಿಹರ ಗ್ರಾಮಗಳು
ದಾವಣಗೆರೆ ತಾಲ್ಲೂಕಿನ ಗ್ರಾಮಗಳು
ದಾವಣಗೆರೆ, ದೊಡ್ಡಬಾತಿ, ಹಳೇಬಾತಿ, ನೀಲಾನಹಳ್ಳಿ, ಅಗಸನಕಟ್ಟೆ, ಆವರಗೊಳ್ಳ, ಕೋಡಿಹಳ್ಳಿ, ನಾಗನೂರು, ಜರೀಕಟ್ಟೆ, ಬಿಸಲೇರಿ, ಮುದಹದಡಿ, ಬಟ್ಲಕಟ್ಟೆ, ಬಲ್ಲೂರು, ಕನಗೊಂನಹಳ್ಳಿ, ಕುಂದುವಾಡ, ಶ್ಯಾಮನೂರು, ನಿಟ್ಟುವಳ್ಳಿ,ಮತ್ತು ಪಾಮೇನಹಳ್ಳಿ ಗ್ರಾಮಗಳಲ್ಲಿ ಕೋಳಿ ಮೊಟ್ಟೆ, ಮಾಂಸದ ಆಹಾರ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಎಸ್‍ಪಿ ರಾಜೀವ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಿಡಿಎಲ್‍ಆರ್ ರಾಮಾಂಜನೇಯ, ಆರ್‍ಟಿಓ ಎನ್.ಜೆ.ಬಣಕಾರ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಹರಿಹರ ನಗರಸಭೆ ಆಯುಕ್ತರಾದ ಲಕ್ಷ್ಮೀ, ದಾವಣಗೆರೆ ತಹಶೀಲ್ದಾರ್ ಸಂತೋಷ್‍ಕುಮಾರ್, ಇತರೆ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243