ದಿನದ ಸುದ್ದಿ
ಚಿತ್ರದುರ್ಗದ ಜೋಗಿಮಟ್ಟಿಯಲ್ಲಿ ಬಾನಾಡಿಗಳ ಹಸಿವು ನೀಗಿಸುವ ಮನು !
ಸುದ್ದಿದಿನ ವಿಶೇಷ: ಈತನದ್ದು ಸುಮಾರು ನಾಲ್ಕು ವರ್ಷ ನಿಸ್ವಾರ್ಥ ಕಾಯಕ. ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯಧಾಮ ಈತನ ಕಾಯಕಕ್ಕೆ ಭೂಮಿಕೆ. ಅರಣ್ಯಧಾಮದ ಬಾನಾಡಿಗಳೇ ಈತನ ಸಂಗಾತಿಗಳು.
ಚಿತ್ರದುರ್ಗದ ಐಯುಡಿಪಿ ಲೇಔಟ್ ಯುವಕ ಮನು ಐನಹಳ್ಳಿ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಜೀವ ಸಂಕುಲಕ್ಕೆ ಕಳೆದ ನಾಲ್ಕು ವರ್ಷಗಳಿಂದ ಕಾಳು, ಹಣ್ಣು ಪೂರೈಕೆ ಮಾಡುತ್ತಿದ್ದು, ಅವುಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾನೆ.
ನಿತ್ಯ ಬೆಳಗ್ಗೆ ಜೋಗಿಮಟ್ಟಿ ಅರಣ್ಯಕ್ಕೆ ತೆರಳಿ ಅಲ್ಲಿನ ಗಿಡ, ಮರಗಳಿಗೆ ತಾನೇ ಕಟ್ಟಿದ ಮಡಿಕೆಗಳಿಗೆ ನೀರು, ಕಾಳು ಹಾಕುವ ಕೆಲಸ ಮಾಡುತ್ತಿದ್ದಾನೆ. ಅಲ್ಲಿನ ನವಿಲು ಸೇರಿದಂತೆ ವಿವಿಧ ಪಕ್ಷಗಳು, ಕರಡಿ ಸೇರಿದಂತೆ ವಿವಿಧ ಪ್ರಾಣಿಗಳ ಹಸಿವು ನೀಗಿಸಿ ಸಂತಸ ಪಡುತ್ತಿದ್ದಾನೆ.
ಚಿತ್ರದುರ್ಗ ಎಪಿಎಂಸಿ, ತರಕಾರಿ, ಹಣ್ಣಿನ ಅಂಗಡಿವರ ಬಳಿ ತೆರಳಿ ಅವರಲ್ಲಿ ಮನವಿ ಮಾಡಿ ಅಳಿದುಳಿದ ಧಾನ್ಯ, ಹಣ್ಣು, ತರಕಾರಿಗಳು ತಂದು ಜೋಗಿಮಟ್ಟಿ ಅರಣ್ಯ ಪ್ರದೇಶ ಜೀವ ಸಂಕುಲಗಳಿಗೆ ಉಣ ಬಡಿಸುವ ಕಾರ್ಯ ಮಾಡುತ್ತಿದ್ದಾನೆ. ಬೇಸಿಗೆ ಸಂದರ್ಭದಲ್ಲಿ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕುಡಿವ ನೀರಿಗೂ ಹಾಹಾಕಾರ ಶುರವಾಗುತ್ತದೆ. ಆಗ ಮನು ಅಲ್ಲಿಲ್ಲಿ ನಿರ್ಮಿಸಿದ ತೊಟ್ಟಿಗಳೇ ಆಧಾರವಾಗುತ್ತಿವೆ.
ಪಬ್ಲಿಕ್ ಹೀರೋ !
ಮನು ಐನಹಳ್ಳಿ ಅವರ ಈ ಕಾರ್ಯವನ್ನು ಮಾಧ್ಯಮಗಳು ಹಾಗೂ ಸಂಘಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿವೆ. ಪಬ್ಲಿಕ್ ಟಿವಿ ನಡೆಸುವ ಪಬ್ಲಿಕ್ ಹೀರೋ ಕಾರ್ಯಕ್ರಮಕ್ಕೆ ಮನು ಐನಹಳ್ಳಿ ಆಯ್ಕೆಯಾಗಿದ್ದ. ಜತೆಗೆ ಚಿತ್ರದುರ್ಗ ಶ್ರೀ ಮುರುಘಾ ಶರಣುರು ಸೇರಿದಂತೆ ಹಲವು ಗಣ್ಯರು ಈತನನ್ನು ಗುರಿತಿಸಿ ಪ್ರೋತ್ಸಾಹಿಸಿದ್ದಾರೆ. ಜತೆಗೆ ನಾಗರಿಕರು ಕೂಡ ಈತನ ಕಾರ್ಯಕ್ಕೆ ನೆರವಾಗುವ ಕಾರ್ಯ ಮಾಡಿದ್ದಾರೆ.
ಚಿತ್ರದುರ್ಗ ಜನರ ಸಹಕಾರದಿಂದ ನಾನು ಈ ಕಾಯಕ ಮುಂದುವರಿಸಿಕೊಂಡು ಬರುತ್ತಿದ್ದೇನೆ. ಮೂಖ ಪ್ರಾಣಿ, ಪಕ್ಷಿಗಳ ಹಸಿವು ನೀಗಿಸಬೇಕು ಎಂಬುದು ನನ್ನ ಧ್ಯೇಯ. ಸಂಕಷ್ಟದಲ್ಲಿರುವ ಜೀವಸಂಕುಲಕ್ಕೆ ನೆರವಾಗುವುದರಲ್ಲಿ ನೆಮ್ಮದಿ ಇದೆ. ಪಕ್ಷಿಗಳಿಗೆ ದಿನನಿತ್ಯ ಆಹಾರ ಪೂರೈಸುವುದು ನನಗೆ ಶ್ರಮ ಕಾರ್ಯವೇನಲ್ಲ, ಅದು ನನ್ನ ನೆಮ್ಮದಿಯ ಕಾಯಕ.
– ಮನು ಐನಹಳ್ಳಿ, ಚಿತ್ರದುರ್ಗ ( ಮೊಬೈಲ್ 98807 36855)