ರಾಜಕೀಯ

ಬಿಜೆಪಿ, ಕಾಂಗ್ರೆಸ್ ಮತ್ತು ಹಿಂದುತ್ವ..!

Published

on

ಕಾಂಗ್ರೆಸ್ ಮೃದು ಹಿಂದುತ್ವವಾದಿಯೇ?- ಹೌದು, ಕಾಂಗ್ರೆಸ್ ಜಾತಿವಾದಿಯೇ?- ಹೌದು. ಕಾಂಗ್ರೆಸ್ ಭ್ರಷ್ಟ ಪಕ್ಷವೇ?- ಹೌದು. ಆದರೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದನ್ನು ನಾನು ನಾನು ಒಪ್ಪುವುದಿಲ್ಲ. ಬಿಜೆಪಿ, ಮತ್ತು ಅದರ ಜುಟ್ಟು ಹಿಡಿದಿರುವ ಆರೆಸ್ಸೆಸ್ ಧರಿಸಿರುವುದು ಸಾಂಸ್ಕೃತಿಕ ಮುಖವಾಡ, ಅದರ ಒಳಗಿರುವ ನೈಜಮುಖ ಜನಾಂಗವಾದಿ ಫ್ಯಾಸಿಸಂ.

ಅಂದರೆ, ಈ ದೇಶದ ಸಂಪೂರ್ಣ ಹಿಡಿತ ಕೆಲವೇ ಕೆಲವು ಜನಾಂಗಗಳಿಗೆ/ವರ್ಗಗಳಿಗೆ/ಜಾತಿಗಳಿಗಳ ಕೈಯಲ್ಲಿ ಇರಬೇಕೆಂದು ಬಯಸಿ ಅದನ್ನು ಜಾರಿಗೊಳಿಸಲು ನೂರು ವರ್ಷಗಳ ಹಿಂದೆಯೇ (1921ರಲ್ಲಿ) ಮೂಂಜೆಯನ್ನು ಜರ್ಮನಿಗೆ ಕಳಿಸಿ, ಅದೇ ಪ್ರಕಾರವಾಗಿ ಸಂಘಟನೆ ಕಟ್ಟಿದ ಇತಿಹಾಸ ಅದಕ್ಕಿದೆ. ಈ ಮೇಲಿನ ಉದ್ದೇಶಕ್ಕೆ ಆರೆಸ್ಸೆಸ್ – ಬಿಜೆಪಿಗೆ ತಡೆಯುಂಟು ಮಾಡುತ್ತಿರುವುದೇ 1950ರಲ್ಲಿ ಈ ದೇಶ ಒಪ್ಪಿಕೊಂಡ ಸಂವಿಧಾನ.

ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಗೆ ಮೇಲಿನ ಯಾವ ಹಿಡನ್ ಅಜೆಂಡಾವಾಗಲೀ, ಮುಖವಾಡವಾಗಲೀ ಇಲ್ಲ. ದೇಶದ ಸಂವಿಧಾನವನ್ನು ತಿದ್ದುಪಡಿ ಮೂಲಕ ಬಂಡವಾಳಿಗರ ಲಾಭಕ್ಕೆ ಅನುವು ಮಾಡಿಕೊಡಲು ಕಾಂಗ್ರೆಸ್ ಬಯಸುತ್ತದೆಯೇ ಹೊರತು ಬಿಜೆಪಿಯಂತೆ ಒಂದು ಹೊಸ ಜನಾಂಗೀಯ ನಾಗರಿಕತೆ ಕಟ್ಟಲು ಸಂವಿಧಾನವನ್ನೇ ಬುಡಮೇಲು ಮಾಡುವ ಯಾವ ಉದ್ದೇಶಗಳೂ ಕಾಂಗ್ರೆಸ್ ಗೆ ಇಲ್ಲ.

ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡು ಇತರೆ ಎಷ್ಟೋ ಪಕ್ಷಗಳನ್ನು ಉಳಿಸಬಹುದಿತ್ತು, ಬೆಳೆಸಬಹುದಿತ್ತು. ಆದರೆ ಭಾರತದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಜೊತೆ ಸೇರಿದ ಮಿತ್ರಪಕ್ಷಗಳು ಬಹಳ ಸಲ ವಂಚನೆಗೊಳಗಾಗಿವೆ. ಇದೆಲ್ಲಾ ನಿಜವೇ ಆದರೂ ಇದಾವುದೂ ಸಹ ಬಿಜೆಪಿ, ಆರೆಸ್ಸೆಸ್‍ನ ಹಿಡನ್ ಅಜೆಂಡಾಕ್ಕೆ ಸರಿಸಾಟಿಯಲ್ಲ. ಗುದ್ದಾಡಿಕೊಂಡೇ ಕಾಂಗ್ರೆಸನ್ನು ಮಣಿಸಬಹುದು. ಆದರೆ ಒಮ್ಮೆ ಇಡೀ ದೇಶದ ಸಂಪೂರ್ಣ ಜುಟ್ಟು ಆರೆಸ್ಸೆಸ್ ಕೈಗೆ ಸಿಕ್ಕಿದರೆ ದೇಶದ ಅಳಿದುಳಿತ ಸಂಸ್ಥೆಗಳೂ ಸರ್ವನಾಶವಾಗುತ್ತವೆ. ಅದು ತರಲಿರುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ನೀತಿಗಳು ದೇಶದ ಬಹುಜನರ ಪಾಲಿಗೆ ಮರಣಶಾಸನವಾಗಿರುತ್ತವೆ. ಒಂದು ಅತ್ಯಂತ ಅನಾಗರಿಕವಾದ ಗುಲಾಮಗಿರಿ ವ್ಯವಸ್ಥೆ ಬಂದೊದಗಲಿದೆ.

ರಾಜಕೀಯ ಭಾಷೆಯಲ್ಲಿ ಇದನ್ನು ಫ್ಯಾಸಿಸಂ ಎಂದು ಹೇಳುತ್ತೇವಾದರೂ ಆರೆಸ್ಸೆಸ್ ಭಾರತದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಫ್ಯಾಸಿಸಂ ಸ್ವರೂಪ ಟೋಟಲಿ ಬೇರೆಯದೇ ರೀತಿಯದ್ದು. ಹಿಟ್ಲರ್, ಮುಸಲೋನಿ ಯಾರೂ ಅದರ ಎದುರು ನಿಲ್ಲುವುದಿಲ್ಲ. ಇಸ್ರೇಲ್ ಕೂಡಾ ನಾಚಿಕೊಳ್ಳುತ್ತದೆ.

ನಿಮಗೆ ತಿಳಿದಿರಲಿ ಆರೆಸ್ಸೆಸ್ ಹಿಂದುತ್ವದ ಮೂಲಕ ಹೊಸ ನಾಗರಿಕತೆಯೊಂದನ್ನು ನಿಜಗೊಳಿಸುವ ಮಾತಾಡುತ್ತಿದೆ. ಏನದು ಆರೆಸ್ಸೆಸ್ ತರಲು ಬಯಸಿರುವು ನಾಗರಿಕತೆ? ಕಾಂಗ್ರೆಸ್, ಕಮ್ಯುನಿಷ್ಟ್, ಬಿಎಸ್ ಪಿ ಯಾರೆಂದರೆ ಯಾರೂ ಈ ‘ನಾಗರಿಕತೆ’ ಹೆಸರಿನ ಅನಾಗರಿಕೆತೆ ಏನು ಎಂಬ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಆರೆಸ್ಸೆಸ್ ತರಬಯಸಿರುವು ಆ ನಾಗರಿಕತೆಯಲ್ಲಿ ಇಂದು ಪ್ರತಿಪಕ್ಷಗಳೆಂದು ಭಾವಿಸಿಕೊಂಡಿರುವ ಯಾವ ಪಕ್ಷಗಳೂ ಕನಿಷ್ಠ ಅಸ್ತಿತ್ವವನ್ನೂ ಹೊಂದಿರುವುದಿಲ್ಲ, ಸಂವಿಧಾನದ ಪೀಠಿಕೆಯನ್ನು ಬಲಿಪೀಠಕ್ಕೆ ಅರ್ಪಿಸಲಾಗಿರುತ್ತದೆ, ಡೆಮಕ್ರಸಿಯ ಯಾವ ಉದಾರತೆಯೂ ಉಸಿರಿಟ್ಟುಕೊಂಡಿರುವುದಿಲ್ಲ, ಸಂಸ್ಕೃತಿ ಸಂಪೂರ್ಣ ಏಕರೂಪಿಯಾಗಿರುತ್ತದೆ, ಸಮಾಜ ಪಿರಮಿಡ್ಡಾಗಿರುತ್ತದೆ, ಪ್ರಭುತ್ವ ಬಿಗಿಯಾಗಿರುತ್ತದೆ. ಭಿನ್ನ-ಎನಿಸುವ ಎಲ್ಲವನ್ನೂ ನಿರ್ದಯವಾಗಿ ಹತ್ತಿಕ್ಕಲಾಗುತ್ತದೆ.

ಇಂತಹ ಒಂದು ‘ಹೊಸ ನಾಗರಿಕತೆಯ’ ಕಲ್ಪನೆ ಕಾಂಗ್ರೆಸ್ಸಿಗೆ ಇಲ್ಲವೆಂದೇ ನನ್ನ ಅನಿಸಿಕೆ. ಈ ಮೇಲೆ ಹೇಳಿದ ಆರೆಸ್ಸೆಸ್ಸಿನ ಅಜೆಂಡಾಗಳಿಗೆ ಎಷ್ಟೋ ಸಲ ಕಾಂಗ್ರೆಸ್ ಪೂರಕವಾಗಿಯೇ ವರ್ತಿಸಿದೆ ಎಂಬುದೂ ನಿಜ. ಆದರೆ ಅದರ ಪರಿಣಾಮವಾಗಿಯೇ ಇಂದು ಅದು ಹೀನಾಯ ಸ್ಥಿತಿ ಅನುಭವಿಸುತ್ತಿರುವುದು.
ದುರಂತವೆಂದರೆ ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳು ತಂತಮ್ಮ ಅಸ್ತಿತ್ವವೊಂದನ್ನೇ ಧ್ಯೇಯವಾಗಿಟ್ಟುಕೊಂಡು ಯೋಚಿಸುತ್ತಿವೆಯೇ ವಿನಃ ಈ ದೇಶದ ಭವಿಷ್ಯದ ಬಗ್ಗೆ ಅವುಗಳ ಬದ್ಧತೆಯ ಬಗ್ಗೆ ಅನುಮಾನ ಕಾಡುತ್ತಿದೆ.

ಹೆಚ್ಚಿಲ್ಲ ಒಂದೇ ತಿಂಗಳು ಬಾಕಿ ಇದೆ. ಒಂದೋ ಈ ಪಕ್ಷಗಳ ವಿವೇಕ ಈ ದೇಶವನ್ನು ಉಳಿಸಬೇಕು ಇಲ್ಲವೇ ಈ ದೇಶದ ಹಳ್ಳಿ,ಸ್ಲಂಗಳಲ್ಲಿ ವಾಸಿಸುವ ಜನಕೋಟಿ, ಬದುಕಿನ ವಾಸ್ತವಗಳ ಅರಿವಿರುವ ಯುವಜನತೆ ಯಾವ ಪ್ರಲೋಭನೆಗೂ ಒಳಗಾಗದೇ ತೋರುವ ಎಚ್ಚರ ಈ ದೇಶವನ್ನು ಉಳಿಸಬೇಕು. ಎರಡೂ ಕೈ ಕೊಟ್ಟರೆ ಭಾರತದ ಪ್ರಜಾಪ್ರಭುತ್ವದ ಚರಮಗೀತೆ ಹಾಡೋಣ..ಸಿದ್ಧರಾಗಿ..!

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version