ದಿನದ ಸುದ್ದಿ
ಆರ್ ಎಸ್ ಎಸ್ ಗೇ ತಿರುಗೇಟು ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್ ! : ಕೇರಳ ಮಾದರಿ ಅಂದ ಸುರೇಶ್ ಕುಮಾರ್ ರಾಜೀನಾಮೆಗೆ ಪಕ್ಷ-ಸಂಘಟನೆಯಲ್ಲಿ ಒತ್ತಾಯ ?
- ಅರುಣ್ ಕುಮಾರ್, ಪತ್ರಕರ್ತರು
ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೂ, ಆರ್ ಎಸ್ಎಸ್, ಬಿಜೆಪಿಗೂ ಶೀತಲ ಸಮರ ನಡೆಯುತ್ತಿದ್ದು ಯಾವಾಗ ಬೇಕಾದರೂ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬಹುದು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಸುರೇಶ್ ಕುಮಾರ್ ರವರು ಕೇರಳ ಸರ್ಕಾರವನ್ನು ಮಾದರಿಯಾಗಿ ತೆಗೆದುಕೊಂಡಿರೋದು ! ಇದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ (ಸಂತೋಷ್ ಜೀ)ಯವರನ್ನು ಕೆರಳಿಸಿದೆ. ಆರ್ ಎಸ್ ಎಸ್, ಹಿಂದೂ ಸಂಘಟನೆಗಳು, ಬಿಜೆಪಿ ಇಡೀ ದೇಶದಾದ್ಯಂತ ಕೇರಳ ವಿರೋಧಿ ನಿಲುವನ್ನು ತಳೆದಿರುವಾಗ ಸುರೇಶ್ ಕುಮಾರ್ ಮಾತ್ರ ಕೇರಳ ಶಿಕ್ಷಣ ವ್ಯವಸ್ಥೆಯನ್ನು ಹೊಗಳಿರೋದು ಅವರಿಗೆ ಕಂಟಕವಾಗಿದೆ.
ಕೇರಳದ ಮಾದರಿ ಎಂದು ಜಗತ್ತಿನಲ್ಲಿಯೇ ಕೇರಳವನ್ನು ಹೊಗಳುತ್ತಿರುವಾಗ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮಾತ್ರ ಕೇರಳ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದು ಸಾರುತ್ತಲೇ ಬರುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಂತೂ ಬಹಿರಂಗವಾಗಿ ಕೇರಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಬಿ ಎಲ್ ಸಂತೋಷ್ ಗೆ ಮುಜುಗರ ಆಗೋ ರೀತಿಯಲ್ಲಿ ಸುರೇಶ್ ಕುಮಾರ್ ಕೇರಳದ ಶಿಕ್ಷಣ ವ್ಯವಸ್ಥೆಯನ್ನು ಫೇಸ್ ಬುಕ್ ನಲ್ಲಿ ಹೊಗಳಿದ್ದಾರೆ. ಇದು ಸಂತೋಷ್ ಜೀ ಆಕ್ರೋಶಕ್ಕೆ ಕಾರಣವಾಗಿದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸಂಘಪರಿವಾರಕ್ಕೂ ಕಮ್ಯೂನಿಷ್ಟರಿಗೂ ನೇರ ಯುದ್ದವೇನಾದರೂ ಇದ್ದರೆ ಅದು ಕೇರಳದಲ್ಲಿ. ಮಚ್ಚು ಕತ್ತಿಗಳು ಮಾತ್ರವಲ್ಲದೇ ಬಾಂಬ್ ಗಳ ಮೂಲಕವೂ ಎರಡೂ ಸಂಘಟನೆಗಳು ಪರಸ್ಪರ ದಾಳಿ ಮಾಡುತ್ತದೆ. ನೂರಾರು ಆರ್ ಎಸ್ ಎಸ್ ಕಾರ್ಯಕರ್ತರನ್ನು ಕೇರಳದಲ್ಲಿ ಕಳೆದುಕೊಳ್ಳಲಾಗಿದೆ. ಪಿನರಾಯಿ ವಿಜಯನ್ ಸರ್ಕಾರ ಸಂಘಪರಿವಾರದ ಮುಖಂಡರನ್ನು ಹತ್ಯೆ ಮಾಡುತ್ತಿದೆ ಎಂದು ನಿರಂತರ ಅಭಿಯಾನವನ್ನು ಆರ್ ಎಸ್ ಎಸ್ ಮಾಡುತ್ತಿದೆ.
ಇದೀಗ ಅದೇ ಕೇರಳವನ್ನು ಕರ್ನಾಟಕದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೊಗಳಿದ್ದು ಕೇರಳದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. “ನಾವಿಲ್ಲಿ ಸಂಘಟನೆಗಾಗಿ ಪ್ರಾಣ ಬಿಡುತ್ತಿದ್ದರೆ ಅಧಿಕಾರ ಪಡೆದುಕೊಂಡ ಬಿಜೆಪಿಗ ಸುರೇಶ್ ಕುಮಾರ್ ನಮ್ಮ ಶತ್ರುಗಳ ಜೊತೆ ನಿಂತಿದ್ದಾರೆ” ಎಂದು ಹಿಂದೂ ಸಂಘಟನೆಗಳು ಪ್ರತಿಕ್ರಿಯಿಸಿದ್ದರೆ, ಈಗ ಕರ್ನಾಟಕದ ಸಚಿವರೇ ಕೇರಳ ಮಾದರಿ ಎಂದಿರೋದ್ರಿಂದ ಆರ್ ಎಸ್ ಎಸ್, ಸಂತೋಷ್ ಜೀ ಏನಂತಾರೆ? ಎಂದು ಎಡಪಂಥೀಯರು ಟ್ವೀಟ್ ಅಭಿಯಾನ ಶುರು ಮಾಡಿದ್ದಾರೆ.
ಸುರೇಶ್ ಕುಮಾರ್ ರವರು ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ ಇಡೀ ದೇಶಕ್ಕೆ ಮಾದರಿ ಮಾಡಬೇಕಿತ್ತು. ಅದನ್ನು ಮಾಡಲಾಗದೇ ಇನ್ನೊಂದು ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಹೊಗಳೋ ಅವಶ್ಯಕತೆ ಏನಿದೆ ? ಬೇರೆ ರಾಜ್ಯಗಳಿಗಿಂತ ಉತ್ತಮ ವ್ಯವಸ್ಥೆಯನ್ನು ನೀವು ಮಾಡಬೇಕು. ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಬಿಜೆಪಿಗರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಮುಖ್ಯಮಂತ್ರಿಗಳು, ಹಿಂದೂ ಸಂಘಟನೆಗಳು, ಆರ್ ಎಸ್ ಎಸ್ ಆಕ್ರೋಶಕ್ಕೆ ತುತ್ತಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆಗೆ ಒತ್ತಡಗಳು ಜಾಸ್ತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243