ದಿನದ ಸುದ್ದಿ

ನೆರೆ ಹಾವಳಿ | ಹಸಿದವರಿಗೆ ಅನ್ನ ಹಾಕಲು ಆಗದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳು ನೆರೆ ಹಾವಳಿಯಿಂದ ನಲುಗಿ ಹೋಗಿವೆ. ಜನರು ಆಸ್ತಿ ಪಾಸ್ತಿ ಕಳೆದುಕೊಂಡು ಜೀವ ಉಳಿದರೆ ಸಾಕು ಎನ್ನುವಂತಹ ಸ್ಥಿತಿಗೆ ತಲುಪಿದ್ದಾರೆ. ನೊಂದ ಜನರಿಗೆ ಸಾಂತ್ವನ ಹೇಳಬೇಕಿದ್ದ ಗೋವಿಂದ ಕಾರಜೋಳ ಹಾಗೂ ಇತರ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಇವರಿಗೆ ಜನರ ಪ್ರಾಣಕ್ಕಿಂತ ಚುನಾವಣೆ ಮುಖ್ಯವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ತಿಂಗಳಲ್ಲಿಯೇ ಮುಖ್ಯಮಂತ್ರಿ ಅವರು ಪ್ರವಾಹಪೀಡಿತ ಪ್ರದೇಶಗಳಿಗೆ ಹೋಗಬೇಕಿತ್ತು, ಆದರೆ ವಯಸ್ಸಾಗಿದೆ ಜೊತೆಗೆ ಕೊರೊನಾ ಸೋಂಕು ತೀವ್ರವಾಗಿದೆ ಅಂತ ನೆಪ ಹೇಳಿ ಹೋಗಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸಲಾಗದಷ್ಟು ವಯಸ್ಸಾಗಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಆರಾಮವಾಗಿರಲಿ ಎಂದು ವ್ಯಂಗ್ಯವಾಡಿದರು.

ಶಿರಾದಲ್ಲಿ ಬಿಜೆಪಿಯವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಕೋವಿಡ್ ನಿಯಮಗಳಿಗೆ ವಿರುದ್ಧವಲ್ಲವೇ? ತಾವು ಜಾರಿಗೆ ತಂದಿರುವ ನಿಯಮಗಳನ್ನು ತಾವೇ ಧಿಕ್ಕರಿಸಿದ್ದಾರೆ, ಇನ್ನು ಬೇರೆಯವರಿಗೆ ಉಪದೇಶ ನೀಡಲು ಯಾವ ನೈತಿಕತೆ ಇದೆ? ಆರೋಗ್ಯ ಸಚಿವರು ಆಗಾಗ ತಮ್ಮ‌ ಪಕ್ಷದ ಸಭೆ ಸಮಾರಂಭಗಳನ್ನೂ ಗಮನಿಸಲಿ ಎಂದರು.

ಕುಸುಮಾ ಅವರು ನಾಮಪತ್ರ ಸಲ್ಲಿಸುವ ದಿನ ನಾನು 11.45 ಕ್ಕೆ ನಾಮಪತ್ರ ಸ್ವೀಕರಿಸುವ ಕಚೇರಿಗೆ ಹೋಗಿದ್ದು, ನನ್ನ ವಿರುದ್ಧ 11.15 ಕ್ಕೆ ಕೇಸ್ ದಾಖಲಿಸಲಾಗಿದೆ. ಇದು ಪೊಲೀಸ್ ಇಲಾಖೆಯ ದುರ್ಬಳಕೆಯಲ್ಲದೆ ಇನ್ನೇನು?
ಇದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದ ಆರೋಪ. ಇಂಥಾ ಗೊಡ್ಡು ಬೆದರಿಕೆಗಳಿಗೆಲ್ಲ ನಾವು ಹೆದರಲ್ಲ ಎಂದು ಗುಡುಗಿದರು.

ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಅಂತ ನಾನು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಅನ್ನು ಬಿಜೆಪಿ ಸರ್ಕಾರ ಮುಚ್ಚಲು ಹೊರಟಿದೆ. ದುಡ್ಡಿಲ್ಲ, ಕೊರೊನಾ ಇದೆ ಅಂತ ಜನರ ಎದುರು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗಾದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು? ಎಂದು ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version