ರಾಜಕೀಯ
ಸಿಎಂ ದಂಗೆ ಹೇಳಿಕೆಗೆ ಬಿಜೆಪಿ ಖಂಡನೆ; ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು
ಸುದ್ದಿದಿನ ಡೆಸ್ಕ್: ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ರೆ ರಾಜ್ಯದ ಜನತೆಗೆ ದಂಗೆ ಎಳೆಲು ಕರೆ ನೀಡ್ತೇನೆ ಎಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ದಂಗೆ ಎದ್ದಿದ್ದಾರೆ. ರಾಜ್ಯದ ಘನತೆವೆತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಜನರಿಗೆ ದಂಗೆ ಎಳಲು ಕರೆ ನೀಡುವುದು ಸಂವಿಧಾನ ವಿರೋಧಿ ನಡವಳಿಕೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ರಾಜ್ಯ ಪೊಲೀಸ್ ಇಲಾಖೆಯ ಡಿಜಿಪಿಗೆ ದೂರು ಸಲ್ಲಿಸಲು ಬಿಜೆಪಿ ನಿಯೋಗ ಮುಂದಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ಡಿಜಿಪಿ ನೀಲಮಣಿ ರಾಜು ಭೇಟಿ ಮಾಡಿ ದೂರು ಸಲ್ಲಿಸಿದೆ. ಶೋಭಾ ಕರಂದ್ಲಾಜೆ, ರಾಜ್ಯದ ಮುಖ್ಯಮಂತ್ರಿ ದಂಗೆ ಎಳುವ ಹೇಳಿಕೆ ನೀಡುವುದು ಸಂವಿಧಾನ ವಿರೋಧಿ ನಡೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸುಂತೆ ಆಗ್ರಹಿಸಿದ್ದಾರೆ.
ಸಂಸದ ಮುಖಂಡ ಪ್ರಹ್ಲಾದ ಜೋಶಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಖಂಡಿಸಿದ್ದು, ಅವರ ಹೇಳಿಕೆ ಸಮಾಜದಲ್ಲಿ ಗಲಭೆ ಉಂಟು ಮಾಡುವಂಥದ್ದು. ಈ ರೀತಿ ಹೇಳಿಕೆ ನೀಡುವುದು ಅವರ ಮಾನಸಿಕ ಸ್ಥಿತಿಯನ್ನು ಪ್ರದರ್ಶಿಸುತ್ತದೆ. ಕುಮಾರಸ್ವಾಮಿ ರಾಜ್ಯದ ಜನತೆ ಎದುರು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ಪಕ್ಷ ನಾಯಕರ ಮನೆಯ ಮುಂದೆ ಗೂಂಡಾಗಿರಿ ಮಾಡಿ ದಂಗೆ ಎಳಿಸುತ್ತಿರುವ ಮುಖ್ಯಮಂತ್ರಿಗಳೇ ಅಹಿತಕರ ಘಟನೆಗಳು ನಡೆದರೆ ನೀವೇ ನೇರಹೊಣೆ ಎಂದು ಶಾಸಕ ಸಿಟಿ ರವಿ ದೂರಿದ್ದು, 36 ಸ್ಥಾನ ಗೆಲ್ಲಿಸಿದ್ದಕ್ಕೆ ಕರುನಾಡನ್ನೇ ಬಲಿಕೊಡಲು ಹೊರಟರಾ ಸಾಂಧರ್ಭಿಕ ಶಿಶುಗಳೇ?. ಭಗವಂತ ನಿಮ್ಮನ್ನು ಕ್ಷಮಿಸುವನೇ? ಎಂದು ಪ್ರಶ್ನಿಸಿದ್ದಾರೆ.