ದಿನದ ಸುದ್ದಿ

ವಿಡಿಯೋ | ತನ್ನದೇ ಕಾರಿಗೆ ಬೆಂಕಿಯಿಟ್ಟು ದೂರು ನೀಡಿದ್ದ ಬಿಜೆಪಿ ಕಾರ್ಯದರ್ಶಿ ಅರೆಸ್ಟ್

Published

on

ಸುದ್ದಿದಿನ, ತಮಿಳುನಾಡು : ತಿರುವಳ್ಳೂರು ಪಶ್ಚಿಮದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ಅವರು ಚೆನ್ನೈನ ಮಧುರವಾಯಲ್ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಗುರುವಾರ ತಡರಾತ್ರಿ ಏಪ್ರಿಲ್ 14 ರಂದು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿ ನಿಜವಾಗಿಯೂ ಅಲ್ಲಿ ಏನಾಗಿತ್ತು ಎಂಬುದನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಆದರೆ ಆಗ ಸಿಸಿಟಿವಿ ದೃಶ್ಯಗಳಲ್ಲಿ ಬಿಳಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಕಾರನ್ನು ಸಮೀಪಿಸುತ್ತಿರುವುದನ್ನ ಮತ್ತು ನಂತರ, ಇನ್ನೊಬ್ಬ ವ್ಯಕ್ತಿ ಕಾರಿನ ಮೇಲೆ ಪೆಟ್ರೋಲ್ ಸುರಿದು ನಂತರ ಬೆಂಕಿ ಹಚ್ಚುವುದು ಕಂಡುಬರುತ್ತದೆ. ಸಿಸಿಟಿವಿಯಲ್ಲಿ ಕಾರು ಬೆಂಕಿಗೆ ಆಹುತಿಯಾಗಿದ್ದು, ನಂತರ ವ್ಯಕ್ತಿ ಸ್ಥಳದಿಂದ ಓಡಿಹೋಗಿರುವುದು ಸಹ ರೆಕಾರ್ಡ್ ಆಗಿದೆ.

ಕಾರು ಹೊತ್ತಿ ಉರಿಯುತ್ತಿರುವುದನ್ನು ಕಂಡ ಜನರು ಬಿಜೆಪಿ ಸದಸ್ಯನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಪೊಲೀಸರಿಗೆ ಕರೆ ಮಾಡಿದ್ದಾರೆ. ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂಬ ವದಂತಿ ಹರಡಿದ್ದರಿಂದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಪೊಲೀಸರಿಗೆ ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿ ಸತೀಶ್ ಕುಮಾರ್ ಅವರನ್ನೇ ಹೋಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸತೀಶ್ ತನ್ನ ಸ್ವಂತ ಕಾರಿಗೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ.

ಚಿನ್ನಾಭರಣ ಖರೀದಿಸುವಂತೆ ಪತ್ನಿ ಒತ್ತಾಯಿಸುತ್ತಿದ್ದಳು ಅದನ್ನು ಭರಿಸಲು ಸಾಧ್ಯವಾಗದೆ ಈ ರೀತಿ ಮಾಡಿದೆ ಎಂದು ಸತೀಶ್ ಹೇಳಿದ್ದಾರೆ. ತಮ್ಮ ಕಾರನ್ನು ಮಾರಿ ಆಭರಣಗಳನ್ನು ಖರೀದಿಸುವಂತೆ ಪತ್ನಿ ಒತ್ತಾಯಿಸಿದ್ದಳು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಸತೀಶ್ ತನ್ನ ಕಾರಿಗೆ ಬೆಂಕಿ ಹಚ್ಚಲು ನಿರ್ಧರಿಸಿ ತನ್ನ ಹೆಂಡತಿಗೆ ವಿಮೆ ಹಣವನ್ನು ನೀಡಲು ಯತ್ನಿಸಿದ್ದ ಎಂದು ಹೇಳಲಾಗಿದೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳು ಆತನ ಯೋಜನೆಯನ್ನು ವಿಫಲಗೊಳಿಸಿದ್ದು ಬಿಜೆಪಿ ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟ್ವೀಟ್ ವಿಡಿಯೋ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version