ದಿನದ ಸುದ್ದಿ

ಕೋಮುವಾದ, ವಂಶಾಡಳಿತದ ರಾಜಕಾರಣ ಹಿಮ್ಮೆಟ್ಟಿಸಲು ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಕರೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ರಾಜಕೀಯ ದಕ್ಷತೆ ಮತ್ತು ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡಬೇಕು ಹಾಗೂ ತುಷ್ಟೀಕರಣ ಕೋಮುವಾದ ಮತ್ತು ವಂಶಾಡಳಿತ ರಾಜಕಾರಣವನ್ನು ಸೋಲಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಸ್ಪಷ್ಟ ಕರೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಾಕಾರಣಿ ಸಭೆಯಲ್ಲಿ ಇಂದು ಕೈಗೊಂಡ ರಾಜಕೀಯ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆ ನಂತರ ರಾಜಕೀಯ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ರಾಜಕೀಯ ನಿರ್ಣಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದರೆ, ಕರ್ನಾಟಕ ಹಾಗೂ ಅಸ್ಸಾಂನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಹಿಮಂತ್ ಬಿಸ್ವಾ ಶರ್ಮಾ ಅನುಮೋದಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸ್ವಾ ಶರ್ಮಾ, ನಿರ್ಣಯ ಕುರಿತು ವಿಸ್ತೃತ ಚರ್ಚೆ ನಡೆದ ನಂತರ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದರು.

ರಾಜಕೀಯ ನಿರ್ಣಯ ಕುರಿತು ವಿವರಿಸಿದ ಅವರು, ಗುಜರಾತ್ ಗಲಭೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿದ್ದ ರಾಜಕೀಯ ದುರುದ್ದೇಶದ ಆರೋಪಗಳನ್ನು ತಳ್ಳಿ ಹಾಕಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಕಾರ್ಯಾಕಾರಿಣಿ ಸಭೆಯಲ್ಲಿ ಸ್ವಾಗತಿಸಲಾಯಿತು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೀಲಕಂಠನ ತರ ಎಲ್ಲವನ್ನು ನುಂಗಿಕೊಂಡು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಿದ್ದನ್ನು ಸಭೆಯಲ್ಲಿ ಶ್ಲಾಘಿಸಲಾಯಿತು. ಸಮಾಧಾನ ಚಿತ್ತದಿಂದ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡ ಪ್ರಧಾನಮಂತ್ರಿ ಅವರ ನಡೆಗೆ ಕಾರ್ಯಾಕಾರಿಣಿ ಮೆಚ್ಚಿಗೆ ವ್ಯಕ್ತಪಡಿಸಿತು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆ ಕಾರ್ಯಕ್ರಮ ಮತ್ತು ಕೈಗೊಂಡ ನಿರ್ಣಯಗಳನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದನ್ನು ಖಂಡಿಸಿ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ವಂಶಾಡಳಿತವೇ ರಾಜಕಾರಣ ಎಂದು ಭಾವಿಸಿದೆ. ಆದರೆ, ಬಿಜೆಪಿ ರಾಜಕಾರಣವನ್ನು ಒಂದು ಸೇವೆ ಎಂದು ಪರಿಗಣಿಸಿದೆ ಎಂದು ಹೇಳಲಾಗಿದೆ.

2014ಕ್ಕೆ ಮುನ್ನ ದೇಶ ರಾಜಕೀಯ ಅಸ್ಥಿರತೆ, ಪ್ರಾದೇಶಿಕತೆ ಮತ್ತು ಆರ್ಥಿಕ ದಿವಾಳಿತನದಿಂದ ಬಳಲುತಿತ್ತು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿರುವ ಪ್ರಧಾನಿ ಅವರ ನಿರ್ಧಾರವನ್ನು ಸ್ವಾಗತಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಸಂವಿಧಾನದ 370ನೇ ವಿಧಿ ರದ್ದು ಬಡವರ ಉದ್ದಾರಕ್ಕಾಗಿ ಹಲವಾರು ಯೋಜನೆಗಳ ಜಾರಿ, ಅಗ್ನಿಪಥ್ ಮತ್ತು ಒಂದು ಶ್ರೇಣಿ ಒಂದು ಪಿಂಚಣಿಯಂತಹ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ದಿಟ್ಟತನ ತೋರಿದ ಪ್ರಧಾನಿ ಅವರ ದೋರಣೆಯನ್ನು ನಿರ್ಣಯದಲ್ಲಿ ಶ್ಲಾಘಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version