ದಿನದ ಸುದ್ದಿ

ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ‌ ಮಾಡಲಿದೆ : ಸಿದ್ದರಾಮಯ್ಯ ಆಕ್ರೋಶ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಳಗಾವಿ: ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿ‌ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದ ಸವದತ್ತಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪರ ಮತಪ್ರಚಾರ ನಡೆಸಿದ ಅವರು ಮಾತನಾಡಿದರು.

ಕೇಂದ್ರದ ರೈತ ಶತ್ರು ನರೇಂದ್ರ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ ಗಳಾಗುತ್ತಿದೆ ಎಂದರು.

ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳ ಮೇಲಿನ ಬೆಲೆ ಕ್ವಿಂಟಾಲ್ ಗೆ ರೂ.1250 ಹೆಚ್ಚಿಸಿದ್ದಾರೆ. ರೂ.2350 ಗೆ ಸಿಗುತ್ತಿದ್ದ ಗೊಬ್ಬರ ಈಗ ರೂ.3600ರಷ್ಟಾಗಿದ್ದು ರೈತರು ನಿಸ್ಸಂಶಯವಾಗಿ ದಿವಾಳಿಯಾಗಲಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ, ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎಂಬ ಕೇಂದ್ರ ಸರ್ಕಾರದ ಸಬೂಬು ಶುದ್ಧ ಸುಳ್ಳು. ಕಳೆದ ವರ್ಷ ರೂ.1,33,947 ಕೋಟಿ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು ರೂ.79,530 ಕೋಟಿಗೆ ಇಳಿಸಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ.

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ‌ ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version