ದಿನದ ಸುದ್ದಿ
ಸ್ಥಳೀಯ ಸಂಸ್ಥೆ ಚುನಾವಣೆ; ದಾವಣಗೆರೆಯಲ್ಲಿ ಎರಡು ಸ್ಥಾನ ಬಿಜೆಪಿ ಮುಡಿಗೆ
ಸುದ್ದಿದಿನ ಡೆಸ್ಕ್: ದಾವಣಗೆರೆ ಜಿಲ್ಲೆಯ ಮೂರು ಸ್ಥಳೀಯ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಹೊನ್ನಾಳಿ ಮತ್ತು ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಚನ್ನಗಿರಿಯಲ್ಲಿ ಅತಂತ್ರ ಸ್ಥಿತಿ ಉಂಟಾಗಿದ್ದು, ಜೆಡಿಎಸ್ ನಿರ್ಣಾಯಕ ಸ್ಥಾನದಲ್ಲಿದೆ.
ಚನ್ನಗಿರಿ ಪುರಸಭೆ, ಜಗಳೂರು ಮತ್ತು ಹೊನ್ನಾಳಿ ಪಟ್ಟಣ ಪಂಚಾಯಿತಿ ಚುನಾವಣೆ ಮತ ಎಣಿಕೆ ಬೆಳಗ್ಗೆಯಿಂದಲೇ ಬಿರುಸಿನಿಂದ ಕೂಡಿತ್ತು. ಎಣಿಕೆ ಕೇಂದ್ರದ ಹೊರಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರು ಜಮಾಯಿಸಿದ್ದರು.
ಹೊನ್ನಾಳಿ, ಜಗಳೂರು ಬಿಜೆಪಿ ಮುಡಿಗೆ:
ಹೊನ್ನಾಳಿ, ಜಗಳೂರು ಪಟ್ಟಣ ಪಂಚಾಯತಿಯಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಹೊನ್ನಾಳಿ ಪಟ್ಟಣ ಪಂಚಾಯತಿಯ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 5, ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜಗಳೂರು ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 4, ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಚನ್ನಗಿರಿ ಅತಂತ್ರ:
ಚನ್ನಗಿರಿ ಪುರಸಭೆಯ 23ರಲ್ಲಿ 21 ವಾರ್ಡಗಳಲ್ಲಿ 8 ಕಾಂಗ್ರೆಸ್, ಬಿಜೆಪಿ 10 ಹಾಗೂ ಜೆಡಿಎಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಚುನಾವಣೆಗೂ ಮೊದಲು ಕಾಂಗ್ರೆಸ್ ಎರಡು ಸ್ಥಾನಗಳು ಅವಿರೋಧ ಆಗಿದ್ದವು. ಈಗ ಜೆಡಿಎಸ್ ನಿರ್ಣಾಯಕ ಸ್ಥಾನದಲ್ಲಿದ್ದು, ಜೆಡಿಎಸ್ ಯಾರಿಗೆ ಮಣಿ ಹಾಕಲಿದೆಯೋ ಆ ಪಕ್ಷ ಅಧಿಕಾರ ಹಿಡಿಯಲಿದೆ.