ದಿನದ ಸುದ್ದಿ

‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್ ಮಾಧ್ಯಮಕ್ಕೆ ಹೊಸ ಆಯಾಮ ಅಗತ್ಯ: ವೀರೇಂದ್ರ ಪಿ.ಎಂ

Published

on

ಸುದ್ದಿದಿನ,ಉಜಿರೆ: ಆಧುನಿಕ ಸುದ್ದಿಮಾಧ್ಯಮ ವಲಯವು ವಾಚಾಳಿತನದ ಶಾಪಕ್ಕೀಡಾಗಿದ್ದು, ಇದರ ನಕಾರಾತ್ಮಕ ಪರಿಣಾಮಗಳನ್ನು ತಡೆದು ಹೊಸ ಆಯಾಮ ನೀಡುವ ವೃತ್ತಿಪರ ಬದ್ಧತೆಯ ಅನಿವಾರ್ಯತೆ ಇದೆ ಎಂದು ಪತ್ರಕರ್ತ, ತುಂಗಭದ್ರಾ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಆಯೋಜಿತವಾದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್‌ನಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.

ಯಾವಾಗ ಒಬ್ಬ ಪತ್ರಕರ್ತ ವಾಚಾಳಿತನಕ್ಕೆ ಬೀಳುತ್ತಾನೋ ಆಗ ಮಾಧ್ಯಮ ನಿರೀಕ್ಷಿಸುವ ವೃತ್ತಿಬದ್ಧತೆಯಿಂದನುಣುಚಿಕೊಳ್ಳಲಾರಂಭಿಸುತ್ತಾನೆ. ಮಾತಿನ ಮಂಟಪ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಸುದ್ದಿಲೋಕಕ್ಕೆ ಬೇಕಾದದ್ದು ವಾಚಾಳಿತನವಲ್ಲ. ಸುದ್ದಿಮಾಧ್ಯಮವು ಸಂಯಮಪೂರ್ಣ ಚಿಂತನೆ ಮತ್ತು ಅದಕ್ಕೆ ಅನುಗುಣವಾದ ಕಾರ್ಯನಿರ್ವಹಣೆಯನ್ನು ವರದಿಗಾರರು, ಸಂಪಾದಕರಿಂದ ನಿರೀಕ್ಷಿಸುತ್ತದೆ ಎಂದು ಹೇಳಿದರು.

ವರದಿಗಾರನಾದವನು ಕಣ್ಣು ಮತ್ತು ಕಿವಿಯನ್ನು ಸದಾ ಕಾಲ ಜಾಗೃತ ಸ್ಥಿತಿಯಲ್ಲಿಡಬೇಕು. ಆಗ ಮಾತ್ರ ವಿವಿಧ ವಿಚಾರಗಳನ್ನು ಭಿನ್ನವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸುದ್ದಿಗೆ ಕಲೆ ಮತ್ತು ವಿಜ್ಞಾನದ ಆಯಾಮವೂ ಇದೆ ಎಂಬುದನ್ನು ಗ್ರಹಿಸಿಕೊಂಡ ವರದಿಗಾರರು ಸುದ್ದಿ ಮಾಧ್ಯಮದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ.

ಈ ಬಗೆಯ ಗ್ರಹಿಕೆಯು ವೃತ್ತಿಪರ ಯಶಸ್ಸನ್ನು ಕಂಡುಕೊಳ್ಳುವುದಕ್ಕೆ ಪೂರಕವಾಗುವುದಲ್ಲದೇ ಬರಹ-ಚಿಂತನೆಯ ಮೂಲಕ ಸಾಮಾಜಿಕ ಕೊಡುಗೆಯನ್ನೂ ನೀಡಬಹುದು. ಈ ಅಂಶವನ್ನು ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿಯು ಆಪ್ತವಾಗಿ ಕಟ್ಟಿಕೊಟ್ಟಿದೆ ಎಂದರು.

ವಿವಿಧ ಬಗೆಯ ಸಮಸ್ಯೆಗಳನ್ನು ಗ್ರಹಿಸುವ ವಿಧಾನ ಸುದ್ದಿ ಬರವಣಿಗೆಯಲ್ಲಿ ಬಹಳ ಮುಖ್ಯವಾದುದು. ಈ ಗ್ರಹಿಕೆಯ ನೆರವಿನೊಂದಿಗೇ ಜನರಿಗೆ ಮಾಹಿತಿ ನೀಡಿ ಅವರೊಳಗೆ ಜಾಗೃತಿ ಮೂಡಿಸಬಹುದಾದ ಸುದ್ದಿಸಂಸ್ಕೃತಿಯನ್ನು ಹುಟ್ಟುಹಾಕಬಹುದು. ಈ ಆಶಾವಾದದೊಂದಿಗೇ ಎಲ್ಲ ಸುದ್ದಿ ಮಾಧ್ಯಮ ವೃತ್ತಿಪರರು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನುಡಿದರು.

ಸುದ್ದಿ ಸಂವಿಧಾನ’ ಕೃತಿಯನ್ನು ಬಿಡುಗಡೆಗೊಳಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಮಾತನಾಡಿದರು. ಬಹುಮಾಧ್ಯಮಗಳು ತರಹೇವಾರಿ ಮಾಹಿತಿಯನ್ನು ನೀಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯಾವುದು ನಿಜವಾದ ಸುದ್ದಿ ಎಂಬುದನ್ನು ಮನಗಾಣಿಸುವಲ್ಲಿ ಎನ್.ಕೆ.ಪದ್ಮನಾಭ ಅವರ ಕೃತಿ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃತಿಯ ಲೇಖಕ ಡಾ.ಎನ್.ಕೆ.ಪದ್ಮನಾಭ ಪರಂಪರೆಯ ಚಲನಶೀಲತೆಯನ್ನು ಮುನ್ನಡೆಸುವ ಪಾತ್ರ ಸುದ್ದಿಯಿಂದ ನಿರ್ವಹಿಸಲ್ಪಡಬೇಕಾದ ಅಗತ್ಯವಿದೆ ಎಂದರು. ಸುದ್ದಿಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದು ಹೇಳಲಾಗುತ್ತದೆ. ಆದರೆ, ಈ ಕಾವಲು ನಾಯಿಯ ಸ್ಥಾನವನ್ನು ಧನದಾಹದ ಸಂಕುಚಿತತೆಯನ್ನೇ ಗುಣಲಕ್ಷಣವನ್ನಾಗಿಸಿಕೊಂಡ ರಾಕ್ಷಸಪ್ರಾಣಿ ಆಕ್ರಮಿಸಿಕೊಂಡಿದೆ. ಇದರ ಹಿಡಿತದಿಂದ ಈ ಸ್ಥಾನವನ್ನು ವಿಮುಕ್ತಗೊಳಿಸಿ ಕಾವಲುನಾಯಿಯ ಪಾತ್ರ ನಿರಂತರವಾಗಬೇಕಿದೆ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೃತಿಯ ಮುಖಪುಟ ರಚಿಸಿದ ಸುಷ್ಮಾ ಉಪ್ಪಿನ್ ಇಸಳೂರು, ಗ್ರಾಫಿಕ್ ಸ್ಪರ್ಶ ನೀಡಿದ ಕೃಷ್ಣಪ್ರಶಾಂತ್, ಸಹಾಯಕ ಪ್ರಾಧ್ಯಾಪಕರಾದ ಸುನೀಲ್ ಹೆಗ್ಡೆ, ಡಾ.ಹಂಪೀಶ್, ಗೀತಾ ವಸಂತ್ ಇಜಿಮಾನ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version