ನೆಲದನಿ
ಮಾನವ ಜೀವ ವಿಕಾಸದ ಮಹಾ ಪ್ರಾಗ್ಕಥನ
ಭಾರತದ ಪ್ರಸಿದ್ಧ ಭೌತವಾದಿ ಚಿಂತಕ – ‘ಮಹಾಪಂಡಿತ’ ರಾಹುಲ ಸಾಂಕೃತ್ಯಾಯನ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ‘ವೋಲ್ಗಾ ಗಂಗಾ’ (1942) ಕೃತಿಯನ್ನು ಪರಿಚಯಿಸುತ್ತಿದ್ದೇನೆ.
ಕ್ರಿ.ಪೂ 6000 ದಿಂದ ಕ್ರಿ.ಶ.1942 ರ ತನಕ ಮಾನವ ಸಮಾಜದ ಐತಿಹಾಸಿಕ, ಆರ್ಥಿಕ, ರಾಜನೈತಿಕ ಪ್ರವಾಹಗಳ 20 ಕಥಾರೂಪದ ಚಿತ್ರಣವಾಗಿರುವ ಈ ಕೃತಿ, ಮಾನವ ಸಮಾಜವು ಜೀವವಿಕಾಸಗೊಂಡ ಸಂಘರ್ಷಗಳನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿರುವ ಅತ್ಯಂತ ಮಹತ್ವದ ಕೃತಿಯಾಗಿರುತ್ತದೆ. ಹಿಂದಿಯಿಂದ ಈ ಕೃತಿಯನ್ನು ಕನ್ನಡಕ್ಕೆ ಬಿ.ಎಂ.ಶರ್ಮಾ ಅನುವಾದಿಸಿಕೊಟ್ಟು ಕನ್ನಡ ಓದುಗರಿಗೆ ಬಲು ಅನುಕೂಲ ಮಾಡಿದ್ದಾರೆ.
ಮಾನವನ ಜೀವ ವಿಕಾಸದ ಕುರಿತಾಗಿ ಚಾರ್ಲ್ಸ್ ಡಾರ್ವಿನ್ The origin of species and the evolution of man (1859) ಕೃತಿಯ ಪ್ರಕಟಣೆಯೊಂದಿಗೆ ದೈವನಿಯಾಮಕವೆನ್ನಲಾದ ಮಾನವ ಸೃಷ್ಟಿಯ ಕುರಿತ ಪುರಾಣ ಕಥಾನಕಗಳು ವಿಜ್ಞಾನದ ಹೊಸ ಶೋಧದ ಬೆಳಕಿನಲ್ಲಿ ಪ್ರಶ್ನಿಸಲ್ಪಟ್ಟವು. ಇದೇ ಪ್ರಶ್ನಾತರ್ಕ ಭೂಮಿಕೆಯೇ ‘ವೋಲ್ಗಾ ಗಂಗಾ’ ಕೃತಿಯ ಹುಟ್ಟುವಳಿಗೆ ಕಾರಣವಾಗಿದೆ.
ಮಾನವ ಸಮಾಜದ ವಿಕಾಸವನ್ನು ವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಿಳಿಸುವ ಉದ್ದೇಶ ತಾಳಿದ ರಾಹುಲ ಸಾಂಕೃತ್ಯಾಯನ ಹಿಂದೀ – ಐರೋಪ್ಯ ಜನಾಂಗಗಳನ್ನೇ ವಸ್ತುವಾಗಿರಿಸಿಕೊಂಡು ಕಥನ ರೂಪದಲ್ಲಿ ಪ್ರಾಗೈತಿಹಾಸಿಕ, ಸಮಾಜೋಆರ್ಥಿಕ, ಧರ್ಮ ಮತ್ತು ರಾಜನೀತಿ ಮುಂತಾದ ಸಂಗತಿಗಳನ್ನು ವಿವೇಚಿಸಿದ್ದಾರೆ. ಹಾಗಾಗಿ ‘ವೋಲ್ಗಾ ಗಂಗಾ’ ಕೃತಿಯು “A narration of the historical, economic and political stream of human society from 6000 BC to 1942 AD in the form of stories”.ರಾಹುಲ ಸಾಂಕೃತ್ಯಾಯನರೇ ಹೇಳುವಂತೆ ಭಾರತೀಯರಿಗಿಂತಲೂ ಮಿಶ್ರೀ, ಸುರಿಯಾನೀ ಮುಂತಾದ ಕೆಲವು ಜನಾಂಗಗಳು ಸಹಸ್ರಾರು ಶತಮಾನಗಳ ಮೊದಲೇ ಮಾನವ ಜೀವವಿಕಾಸದ ದಾರಿಯಲ್ಲಿ ಮೊದಲಿಗರಾಗಿದ್ದಾರೆ.
ಬ್ರಾಹ್ಮಣರು ಬ್ರಹ್ಮನ ತಲೆಯಿಂದಲೂ ಕ್ಷತ್ರಿಯರು ಭುಜಗಳಿಂದಲೂ ವೈಶ್ಯರು ತೊಡೆಗಳಿಂದಲೂ ಶೂದ್ರರು ಪಾದಗಳಿಂದಲೂ ಹುಟ್ಟಿದರೆಂಬ ಅವೈಜ್ಞಾನಿಕ ಸೃಷ್ಟಿ ಪುರಾಣ ಸೃಷ್ಟಿಸಿರುವ ಗೊಡ್ಡು ಸನಾತವಾದಿಗಳ ಎಲ್ಲಾ ವಾದ ವಿತಂಡವಾದ – ತರ್ಕ ಕುತರ್ಕಗಳನ್ನು ಒಂದರ್ಥದಲ್ಲಿ ಈ ಕೃತಿ ಸುಟ್ಟು ಬೂದಿಮಾಡಿತು. ಆದರೂ ಭಾರತವನ್ನು ಸದಾ ಮೌಢ್ಯದಲ್ಲಿರಿಸಿ ಪರೋಪಜೀವನ ಸಾಗಿಸುವ ಠಕ್ಕ ಪುರೋಹಿತ ವರ್ಗದವರು ತಮ್ಮ ಗೊಡ್ಡು ಪುರಾಣಗಳನ್ನು ಬಿತ್ತರಿಸುತ್ತಲೇ ಬಂದಿದ್ದಾರೆ. ರಾಹುಲ ಸಾಂಕೃತ್ಯಾಯನ ಹೇಳುವಂತೆ ಸನಾತನವಾದಿಗಳ ನಿಂದನಾ ರೂಪದ ವಿತಂಡವಾದವನ್ನು ಎದುರಿಸಲು ಲೇಖಕನ ಲೇಖನಿ ಹಿಂಜರಿಯುವುದಿಲ್ಲ.”ಪ್ರಪಂಚದ ಅದೆಷ್ಟೋ ಭಾಷೆಗಳಲ್ಲಿ ಕಲ್ಲು ,ಮಣ್ಣು, ಹಿತ್ತಾಳೆ, ತಾಮ್ರ, ಕಬ್ಬಿಣ, ಉಕ್ಕು ಇತ್ಯಾದಿ ಪ್ರಾಕೃತಿಕ ವಸ್ತುಗಳಲ್ಲಿ ಸಾಂಕೇತಿಕ ಅಥವಾ ಲಿಖಿತ ಸಾಹಿತ್ಯ, ಅಲಿಖಿತ ಗ್ರಾಮೀಣ ಗೀತೆಗಳು, ಕತೆಗಳು, ರೀತಿ ನೀತಿಗಳು ಯುಗಯುಗಕ್ಕೂ ಸಂಬಂಧಿಸಿ ರಾಶಿಗಟ್ಟಲೆಯಾಗಿ ದೊರಕುತ್ತಿದ್ದು ಈ ಕೃತಿಯೊಂದು ಕಥೆಗೂ ಆಧಾರಭೂತವಾಗಿವೆ” ಹಾಗಾಗಿಯೇ ಈ ಕೃತಿ ಎಲ್ಲಾ ಭಾರತೀಯ ಭಾಷೆಗಳಲ್ಲಿಯೇ ಅದ್ವಿತೀಯವಾದುದು.
‘ವೋಲ್ಗಾ ಗಂಗಾ’ ಕೃತಿಯನ್ನು ನಾನು 1988 ರಿಂದ ಇಲ್ಲಿಯವರೆಗೆ ಹಲವಾರು ಸಲ ಓದಿದ್ದೇನೆ. ಕ್ರಿ.ಪೂ 6000 ದಿಂದ ಹಿಡಿದು ಕ್ರಿ.ಶ 1942 ರ ತನಕದ ಕಾಲಾವಧಿಯಲ್ಲಿ ರಷ್ಯಾದ ವೋಲ್ಗಾದಿಂದ ಭಾರತದ ಗಂಗಾನದಿಯ ಭೂವಿಸ್ತಾರದಲ್ಲಿ ನೆಲೆಸಿರುವ ಮಾನವನ ವಿಕಾಸದ ಸಂಘರ್ಷಗಳ ಕಥನದ ಎಂಟು ಸಾವಿರ ವರ್ಷಗಳ ಕಾಲವ್ಯಾಪ್ತಿಯುಳ್ಳ ಈ ಕೃತಿ ಇಂದಿಗೂ ಪ್ರಸ್ತುತವಾದುದಾಗಿದ್ದು ನಮ್ಮ ಅನೇಕ ಪ್ರಶ್ನೆಗಳಿಗೆ ಇದು ಉತ್ತರ ಒದಗಿಸಲು ನೆರವಾಗಬಲ್ಲದು.
-ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸುದ್ದಿದಿನ.ಕಾಂ|ವಾಟ್ಸಾಪ್|9980346243