ದಿನದ ಸುದ್ದಿ
ಏಪ್ರಿಲ್ ಫೂಲ್ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು?
ಸುದ್ದಿದಿನ ಡೆಸ್ಕ್ : ಏಪ್ರಿಲ್ 1ರಂದು ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಯಾವುದೋ ವಿಚಾರದ ಕುರಿತು ಸುಳ್ಳು ಹೇಳಿ ಅವರನ್ನು ಮೂರ್ಖರನ್ನಾಗಿ ಮಾಡಿ ನಗುವ ಸಂಪ್ರದಾಯ ಜಗತ್ತಿನಾದ್ಯಂತ ನಡೆದುಕೊಂಡು ಬಂದಿದೆ. ಭಾರತದಲ್ಲಿ ಕೂಡ ಮೂರ್ಖರ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಆದರೆ ಏಪ್ರಿಲ್ ಫೂಲ್ ಆಚರಣೆಗೆ ಒಂದು ಸ್ಪಷ್ಟ ಇತಿಹಾಸ ಇಲ್ಲ. ಯಾವ ಕಾಲಘಟ್ಟದಿಂದ ಮೂರ್ಖರ ದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದರ ಕುರಿತು ಸರಿಯಾದ ದಾಖಲೆಗಳು ಇಲ್ಲ. ಆದರೆ ಪ್ರಾನ್ಸ್ ನಲ್ಲಿ ಮೊದಲು ಏಪ್ರಿಲ್ ಫೂಲ್ ಆಚರಣೆ ಆರಂಭವಾಯಿತು ಎಂದು ಹೇಳಲಾಗುತ್ತದೆ.
ಕೆಲ ದಾಖಲೆಗಳಂತೆ 1582ರಿಂದ ಪ್ರಾನ್ಸ್ ನಲ್ಲಿ ಈ ಏಪ್ರಿಲ್ ಫೂಲ್ ಆಚರಣೆ ನಡೆದುಕೊಂಡು ಬಂದಿದೆ ಎಂದು ನಂಬಲಾಗಿದೆ. ಪ್ರಾನ್ಸ್ ದೇಶದ ದೊರೆ ಚಾರ್ಲ್ಸ್ ಗ್ರಿಗೋರಿಯನ್ ಪಂಚಾಂಗ ಅನುಷ್ಠಾನಕ್ಕೆ ತಂದು ಹೊಸ ವರ್ಷದ
ಆಚರಣೆಯನ್ನು ಜನವರಿ ತಿಂಗಳಿನ 1ನೇ ತಾರೀಖಿಗೆ ಬದಲಾಯಿಸಿದ. 1581ರ ಹೊಸವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಏಪ್ರಿಲ್ 1ರಂದು ಕೊನೆ ದಿನವಾಗಿತ್ತು. ಆಗ ಸಂಪರ್ಕ ಮಾಧ್ಯಮಗಳ ಕೊರತೆ ಇದ್ದುದರಿಂದ ಈ ಬದಲಾವಣೆಯ ವಿಷಯ ವಿವಿಧ ದೇಶಗಳಿಗೆ ತಲುಪಲು ಹಲವು ವರ್ಷಗಳೇ ಬೇಕಾಯಿತು.
ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರ್ ಅನ್ನು ಒಪ್ಪಿಕೊಳ್ಳದೆ ಏಪ್ರಿಲ್ 1ರಂದೇ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಆಗ ಅವರನ್ನು ಮೂರ್ಖರೆಂದು ಅಪಹಾಸ್ಯ ಮಾಡಲಾಗುತ್ತಿತ್ತು. ಅದೇ ಸಂಪ್ರದಾಯ ಕಾಲ ನಂತರದಲ್ಲಿ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಮೂರ್ಖರ ದಿನಾಚರಣೆ ಹೆಚ್ಚು ಪ್ರಚಲಿತವಾಗುತ್ತಿದೆ. ಪ್ರತಿಕೆಗಳು, ಟಿವಿ ಮಾಧ್ಯಮಗಳು ಕೂಡ ಏಪ್ರಿಲ್ ಫೂಲ್ ಆಚರಣೆ ಮಾಡುತ್ತಿವೆ. ಯಾವುದೋ ಅಸಾಧ್ಯ ವಿಚಾರದ ಕುರಿತು ಸುದ್ದಿ ಮಾಡಿ, ಇದು ನಿಜವೆಂದು ಹೇಳಿ ಕೊನೆಗೆ ಏಪ್ರಿಲ್ ಫೂಲ್ ಎಂದು ಹೇಳಿ ಓದುಗರಲ್ಲಿ ನಗೆ ಉಕ್ಕಿಸುವ ಪ್ರಯತ್ನ ನಮ್ಮ ಕನ್ನಡ ಮಾಧ್ಯಮಗಳಲ್ಲಿ ಕೂಡ ನಡೆಯುತ್ತಿದೆ.
ತೀರ ಗಂಭೀರ ಅಲ್ಲದ ವಿಷಯಗಳ ಕುರಿತು ಫೋಲ್ ಮಾಡಿದರೆ ತೊಂದರೆ ಇಲ್ಲ. ಆದರೆ ಕೆಲವು ಬಾರಿ ಸೂಕ್ಷ್ಮ ಧಾರ್ಮಿಕ ವಿಚಾರ ಹಾಗೂ ಗಣ್ಯ ವ್ಯಕ್ತಿಗಳ ಸಾವಿನ ಕುರಿತು ಹಾಸ್ಯ ಮಾಡಲಾಗುತ್ತಿದೆ. ಇದು ಕೆಲವರ ಮನಸ್ಸಿಗೆ ಘಾಸಿ ಮಾಡುವ ಸಂದರ್ಭ ಕೂಡ ಇರುತ್ತವೆ. ಈ ಕುರಿತ ಅರಿವು ಅವಶ್ಯ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401