ಲೈಫ್ ಸ್ಟೈಲ್

ಸ್ತನ್ಯಪಾನದ ಬಗ್ಗೆ ನಿಮಗಿಷ್ಟು ತಿಳಿದಿರಲಿ : ಮಿಸ್ ಮಾಡ್ದೆ ಓದಿ..!

Published

on

  • ಸುಮಧುರ. ಎಂ ಪಿ,ತಿಪಟೂರು

ಹೆಣ್ಣಿಗೆ ತಾಯ್ತನ ಎನ್ನುವುದು ವರ. ತಾನು ತಾಯಿ ಆಗುವ ಪ್ರಕ್ರಿಯೆಯಲ್ಲಿ ಅನೇಕ ಹಂತಗಳನ್ನು ದಾಟಿ ಬಂದಿರುತ್ತಾಳೆ. ಗರ್ಭಿಣಿಯಾಗಿ ಒಂಭತ್ತು ತಿಂಗಳು ಅನುಭವಿಸುವ ಸಂತಸ, ನೋವು , ಭಾರ ದೇಹದಲ್ಲಾಗುವ ಬದಲಾವಣೆಗಳು , ತನ್ನ ಮತ್ತು ಮಗುವಿನ ಆರೋಗ್ಯದ ಕಾಳಜಿ ಮಾಡುತ್ತಿರುತ್ತಾಳೆ. ಮಗು ಜನಿಸಿದ ನಂತರ ಅದಕ್ಕೆ ಮುಖ್ಯ ಆಹಾರವಾಗಿ ಎದೆಹಾಲು ಕುಡಿಸುವುದು ಕಷ್ಟವೆನಿಸಿದರೂ ತಾಯಿ ಅಥವಾ ದಾದಿಯರ ಸಹಾಯದಿಂದ ಸರಿಯಾದ ಕ್ರಮ ಮತ್ತು ಭಂಗಿಯಲ್ಲಿ ಕುಳಿತು ಸ್ತನ್ಯಪಾನ  ಮಾಡಿಸಲು ಕಲಿಯುತ್ತಾಳೆ.

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಶಿಶುಗಳಿಗೆ ಸ್ತನ್ಯಪಾನ ಮಾಡಿಸುವುದು ಮಗುವಿನ ಆರೋಗ್ಯಕ್ಕೆ ಸಿಗಬೇಕಾದ ಅಗತ್ಯ ಪೌಷ್ಟಿಕಾಂಶ ಮತ್ತು ಮಗುವಿನ ಬೆಳವಣಿಗೆಗೆ ತಾಯಿ ಹಾಲು ಮೂಲ ಆಹಾರ ಎಂದು ಶಿಫಾರಸ್ಸು ಮಾಡುತ್ತದೆ . ಮಗುವಿಗೆ ಆರು ತಿಂಗಳು ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸುವುದು ಒಳ್ಳೆಯದು ಎಂದು ಎಲ್ಲಾ ವೈದ್ಯರು ಸೂಚಿಸುತ್ತಾರೆ.

ನಂತರ 24 ತಿಂಗಳವರೆಗೆ ನೀಡಬಹುದು. ಕೆಲವು ತಾಯಂದಿರು 5 ತಿಂಗಳ ನಂತರ ಘನ ಆಹಾರ ಅಥವಾ ಫಾರ್ಮುಲ ಹಾಲು ನೀಡಲು ಮುಂದಾಗುತ್ತಾರೆ. ಸ್ತನ್ಯಪಾನ ಮಾಡಿಸಲು ಹಲವು ತೊಂದರೆಗಳನ್ನು ಅನುಭವಿಸುವರು ಸ್ತನ್ಯಪಾನ ನಿಲ್ಲಿಸಲು ನಿರ್ಧರಿಸುತ್ತಾರೆ. ಇದಕ್ಕೆ ವೈದ್ಯರ ಸಲಹೆ ತುಂಬಾ ಮುಖ್ಯವಾಗಿರುತ್ತದೆ.

ಕಾರಣಾಂತರದಿಂದ ಸ್ತನ್ಯಪಾನ ನಿಲ್ಲಿಸುವುದರಿಂದ ತಾಯಿ ಮತ್ತು ಮಗುವಿಗೆ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಜೊತೆಗೆ ತಾಯಂದಿರು ಕೆಲವು ಅಸ್ವಸ್ಥತೆಗಳನ್ನು ಅನುಭವಿಸುತ್ತಾರೆ. ಪ್ರೊಲ್ಯಾಕ್ಟೆನ್ ಮತ್ತು ಆಕ್ಸಿಟೋಸಿನ್ ಮಟ್ಟವು ಕಡಿಮೆಯಾದಾಗ ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ. ಇದು ದಣಿವಿಗೆ ಕಾರಣವಾಗಬಹುದು ಎಂದು ಡಾ|| ರೀಮಾ ಸೋನ್ವಾಲ್ ಹೇಳುತ್ತಾರೆ . ಸ್ತನ್ಯಪಾನ ತ್ಯಜಿಸುವುದರಿಂದ ಉಂಟಾಗುವ ಕೆಲವು ಪರಿಣಾಮಗಳನ್ನು ಈ ಕೆಳಗೆ ನೋಡಬಹುದು.

ಸ್ತನ್ಯಪಾನ ನಿಲ್ಲಿಸುವುದರಿಂದ ಹಾಲಿನ ನಾಳಗಳು ಕಟ್ಟಿಕೊಂಡು ಸ್ತನಗಳಲ್ಲಿ ತೀವ್ರ ಮೃದುತ್ವವನ್ನು ಉಂಟುಮಾಡುತ್ತದೆ. ಯಾವುದೇ ಚಿಕಿತ್ಸೆಯನ್ನು ಪಡೆಯದಿದ್ದರೆ ಸ್ತನ ಸೋಂಕಿಗೆ ಕಾರಣವಾಗಬಹುದು ಇದು ಅತಿಯಾದ ನೋವು, ಜ್ವರ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತದೆ.ಸ್ತನಗಳನ್ನು ಮುಟ್ಟಿದಾಗ ಬೆಚ್ಚಗೆ ಮತ್ತು ಮೃದುವಾಗಿರುತ್ತದೆ. ಕಟ್ಟಿದ ಸ್ತನಗಳನ್ನು ಮ್ಯಾಸ್ಟೈಟಿಸ್ ಎಂದು ಕರೆಯುತ್ತಾರೆ . ಇದಕ್ಕೆ ವಾರ್ಮಿಂಗ್ ಪ್ಯಾಡ್ ಬಳಸಿ, ಹಾಲನ್ನು ತೆಗೆಯಬೇಕು ಮತ್ತು ನೋವಿಗೆ ಆ್ಯಂಟಿ ಬಯೋಟಿಕ್  ಮಾತ್ರೆಗಳನ್ನು ಸೇವಿಸಬಹುದು .

2. ಸ್ತನಗಳ ಪೂರ್ಣತೆ :  ಸ್ತನ್ಯಪಾನ ನಿಲ್ಲಿಸುವುದರಿಂದ ಸ್ತನಗಳಲ್ಲಿ ಹಾಲು ಸಂಗ್ರಹವಾಗಿ ನೋವು ಮತ್ತು ಭಾರವಾಗುತ್ತದೆ. ಹಾಲನ್ನು ವ್ಯಕ್ತಪಡಿಸುವುದರಿಂದ ಪೂರ್ಣತೆಯ ಭಾವನೆಯನ್ನು ಕಡಿಮೆ ಮಾಡಬಹುದು.

3. ಸ್ತನಗಳ ಆಕಾರ : ಹಾಲುಣಿಸುವಿಕೆಯಿಂದ ಸ್ತನಗಳ ಆಕಾರ ಬದಲಾಗುತ್ತದೆ. ತುಂಬಿದ ಸ್ತನಗಳು ಕ್ರಮೇಣ ಖಾಲಿಯಾದಂತೆ ಆಗುತ್ತದೆ. ಜೋತು ಬೀಳುತ್ತದೆ. ಇದರಿಂದ ಭಯಪಡುವ ಅಗತ್ಯವಿಲ್ಲ . ಕೆಲವು ತಿಂಗಳೊಳಗೆ ಮೊದಲಿನ ಸ್ಥಿತಿಗೆ ಬರುತ್ತದೆ , ಆದರೆ ಸ್ವಲ್ಪ ಅಕಾರದಲ್ಲಿ ವ್ಯತ್ಯಾಸವಾಗಬಹುದು.

4. ದೈಹಿಕ ಖಾಯಿಲೆ : ಹಾಲುಣಿಸುವಿಕೆಯಿಂದ ಬರುವ ಕೆಲವು ಸಮಸ್ಯೆಗಳೆಂದರೆ ತಲೆ ನೋವು, ವಾಕರಿಕೆ , ಮತ್ತು ಚಿತ್ತಸ್ಥಿತಿಯ ಬದಲಾವಣೆಗಳಾಗಿವೆ. ಇದೆಲ್ಲಾ ಹಾರ್ಮೋನುಗಳ ವ್ಯತ್ಯಾಸದಿಂದ ಆಗುವ ಪರಿಣಾಮಗಳಾಗಿವೆ. ಕೆಲವೊಮ್ಮೆ ಈ ಸಮಸ್ಯೆಗಳು ಗರ್ಭಧಾರಣೆಯ ಆರಂಭಿಕ ಲಕ್ಷಣಗಳಾಗಿ ಅನುಕರಿಸುತ್ತವೆ.

5. ಫಲವತ್ತತೆಯ ಹೆಚ್ಚಳ :ಸ್ತನ್ಯಪಾನ ಸಮಯದಲ್ಲಿ ತಾಯಿಯ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಅಂಡೋತ್ಪತ್ತಿಯ ಸಾಧ್ಯತೆಯನ್ನು ಕಡಿಮೆ ಮಾಡಿರುತ್ತದೆ. ತಾಯಿ ಸ್ತನ್ಯಪಾನ ನಿಲ್ಲಿಸಿದಾಗ ಈ ಹಾರ್ಮೋನುಗಳು ಬದಲಾಗುತ್ತದೆ. ಸ್ತನ್ಯಪಾನ ನಿಲ್ಲಿಸಿದ ಆರು ವಾರಗಳಲ್ಲಿ ತಾಯಿಯು ತನ್ನ ಋತು ಚಕ್ರವನ್ನು ಹೊಂದುತ್ತಾಳೆ. ನಂತರ ಅಂಡೋತ್ಪತ್ತಿ ಮತ್ತೊಮ್ಮೆ ಪ್ರಾರಂಭವಾಗುತ್ತದೆ.

6. ಭಿನ್ನತೆ : ಕೆಲವು ತಾಯಂದಿರು ಹಾಲುಣಿಸುವುದನ್ನು ನಿಲ್ಲಿಸುವುದರಿಂದ ತೀವ್ರ ಖಿನ್ನತೆಗೊಳಗಾಗುತ್ತಾರೆ . ಶಿಶು ಹಾಲು ಹೀರುವುದನ್ನು ನಿಲ್ಲಿಸಿದಾಗ ಅಥವಾ ಹಾಲನ್ನು ವ್ಯಕ್ತಪಡಿಸದೆ ಇದ್ದಾಗ ತಾಯಿಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಖಿನ್ನತೆಗೆ ಕಾರಣಳಾಗುತ್ತಾಳೆ. ಸ್ತನ್ಯಪಾನ ಮಾಡಿಸುವಾಗ ಪ್ರೊಲ್ಯಕ್ಟಿನ್ ಹಾರ್ಮೋನ್ ತಾಯಿಗೆ ಶಾಂತತೆ ಮತ್ತು ಸಂತೋಷವನ್ನು. ಉಂಟುಮಾಡುತ್ತದೆ.

ಹಾಲು ಕೊಡುವುದನ್ನು ನಿಲ್ಲಿಸುವುದರಿಂದ ಪ್ರೊಲ್ಯಾಕ್ಟಿನ್ ಹಾರ್ಮೋನ್ ಇಳಿಮುಖವಾಗುವುದಕ್ಕೆ ಆಕೆ ದುಃಖವನ್ನು ಅನುಭವಿಸುತ್ತಾಳೆ. ಅವಳ ಮತ್ತು ಮಗುವಿನ ಬಂಧದಲ್ಲಿ ಗೊಂದಲ ಉಂಟಾಗುತ್ತದೆ. ಪ್ರತಿ ತಾಯಿಯು ಖಿನ್ನತೆಯನ್ನು ಅನುಭವಿಸುವುದಿಲ್ಲ , ಆದಾಗ್ಯೂ ಖಿನ್ನತೆಗೆ ಒಳಗಾಗಿದ್ದರೆ ವೈದ್ಯರ ಸಹಾಯ ಮತ್ತು ಸಲಹೆ ಪಡೆಯುವುದು ಉತ್ತಮ .

7. ತೀವ್ರ ಆಯಾಸ ಮತ್ತು ದಣಿವು : ತಾಯಿಯ ದೇಹದಲ್ಲಿನ ಪ್ರೊಜೆಸ್ಟರನ್ ಮತ್ತು ಮಟ್ಟವು ಹಾಲುಣಿಸುವಿಕೆಯ ನಂತರ ಮರು ಸಮತೋಲನಗೊಳ್ಳಲು  ಪ್ರಯತ್ನಿಸುವ ಕಾರಣದಿಂದ ದಣಿವು ಮತ್ತು ಆಯಾಸ ಎನಿಸುತ್ತದೆ. ಸ್ತನ್ಯಪಾನ ನಿಲ್ಲಿಸುವುದರಿಂದ ಸಾಮಾನ್ಯ ನಿದ್ರೆಯ ಮಾದರಿಗಳು ಹಿಮ್ಮುಖಗೊಳ್ಳದಿರಬಹುದು. ಇದರಿಂದ ತಾಯಂದಿರು ಮತ್ತಷ್ಟು ಆಯಾಸಕ್ಕೊಳಗಾಗಬಹುದು.

8. ಆಹಾರ ಸೇವಿಸುವುದರಲ್ಲಿ ಹಿಂಜರಿಕೆ : ಮಗುವಿನ ಶುಶ್ರೂಷೆ , ಸ್ತನ್ಯಪಾನ ಮಾಡಿಸಲು ತಾಯಂದಿರಿಗೆ ಸಾಕಷ್ಟು ಕ್ಯಾಲೋರಿಗಳು ಸೇವಿಸಲು ವೈದ್ಯರು ಸೂಚಿಸುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಎದೆ ಹಾಲು ಕೊಡುವಾಗ ಹೆಚ್ಚು ಆಹಾರ ಸೇವಿಸುತ್ತಾರೆ. ಆದರೆ ತೂಕ ಹೆಚ್ಚುವುದಿಲ್ಲ. ಸ್ತನ್ಯಪಾನ ನಿಲ್ಲಿಸುವುದರಿಂದ ಆಹಾರ ಸೇವನೆಯ ಅಭ್ಯಾಸವನ್ನು ಕಡಿತಗೊಳಿಸುವುದು ಸವಾಲಿನ ಸಂಗತಿಯಾಗುತ್ತದೆ. ಕೆಲವರಿಗೆ ಹೆಚ್ಚಿಗೆ ಆಹಾರ ಸೇವಿಸುವುದು ನಾಚಿಕೆ ಎನಿಸಬಹುದು.  ಹಾರ್ಮೋನುಗಳ ಬದಲಾವಣೆಯಿಂದ ಖಿನ್ನತೆಯು ಹೆಚ್ಚಾಗಬಹುದು .

9. ಶಿಶುವಿನೊಂದಿಗೆ ಬಾಂಧವ್ಯದ ಸಮಸ್ಯೆಗಳು : ಕೆಲವು ತಾಯಂದಿರಲ್ಲಿ ಆಕ್ಸಿಟೋಸಿನ್ ಮಟ್ಟವು ಕಡಿಮೆ    ಯಾಗುವುದರಿಂದ ಮಗುವಿನ ಜೊತೆಗಿನ ಬಾಂಧವ್ಯ ಸ್ವಲ್ಪ ಕಡಿಮೆಯಾಗುತ್ತದೆ. ಸ್ತನ್ಯಪಾನ ಮಾಡದೆ ಮಗುವನ್ನು ಹಿತಗೊಳಿಸುವಲ್ಲಿ ತಾಯಿ ಸೋಲಬಹುದು. ಆದರಿಂದ ಮಗುವಿನ ಜೊತೆ ಆಟವಾಡುವುದು , ನಿದ್ರೆಯ ಸಮಯದಲ್ಲಿ ಮುದ್ದಾಡುವುದು, ಮಗುವಿಗೆ ಹತ್ತಿರವಾಗಲು ಇತರೆ ಮಾರ್ಗಗಳನ್ನು ಕಂಡುಕೊಳ್ಳುವುದು ತಾಯಿ ಮತ್ತು ಮಗುವಿನ ಬಂಧವನ್ನು ಉತ್ತಮಗೊಳಿಸುವಲ್ಲಿ ಸಹಕರಿಸುತ್ತದೆ .

10. ಆಂತಕ ಮತ್ತು ಎದೆ ಬಡಿತ ಹೆಚ್ಚಾಗುವುದು : ಆಂತಕವು ಸಾಕಷ್ಟು ರೀತಿಯಲ್ಲಿ ಹೊರಹೊಮ್ಮುವುದು ಉದಾಹರಣೆಗೆ ; ತಾಯಿ ತುಂಬಾ ಸಿಡುಕುವುದು , ಚಿಂತಿಸುವುದು , ಭೀತಿಗೊಳಗಾಗುವುದು. ಈ ತರಹದ ಆತಂಕವು ಎದೆ ಬಡಿತವನ್ನು ಹೆಚ್ಚುಮಾಡುತ್ತದೆ .

11. ನಿದ್ರಾಹೀನತೆ : ಕೆಲವು ತಾಯಂದಿರಿಗೆ ಸ್ತನ್ಯಪಾನ ಮಾಡಿಸುವ ಅಗತ್ಯವಿಲ್ಲದಿದ್ದರೂ ನಿದ್ರೆ ಮಾಡಲು ಕಷ್ಟವಾಗುತ್ತದೆ.

12. ಚರ್ಮದ ಬದಲಾವಣೆಗಳು : ಸ್ತನ್ಯಪಾನ ಮಾಡಿಸುವಾಗ ಹಾರ್ಮೋನುಗಳ ಉಲ್ಬಣದಿಂದ ತಾಯಿಯ ಚರ್ಮದಲ್ಲಿ ಬದಲಾವಣೆ ತರಬಹುದು . ಸ್ತನ್ಯಪಾನ ನಿಲ್ಲಿಸಿದಾಗ ಚರ್ಮದಲ್ಲಿ ಶುಷ್ಕತೆ, ಮೊಡವೆ, ಕಲೆಗಳು ಮತ್ತು ಬೇರೆ ಚರ್ಮಕ್ಕೆ ಸಂಬಂಧ ಪಟ್ಟ ಬಾಧೆಗಳು ಕಾಡಬಹುದು .

13. ತಾಯಿಯಲ್ಲಿ ಒತ್ತಡ : ಮಗುವನ್ನು ಸಂತೈಸಲು ಆಗದೆ ಇರುವಾಗ ,ಸ್ತನಗಳ ನೋವು ಮತ್ತು ತಲೆನೋವು ಕೆಲವು ತಾಯಂದಿರಲ್ಲಿ ಒತ್ತಡ ಮಟ್ಟವನ್ನು ಹೆಚ್ಚಿಸಬಹುದು.

ಮಗುವಿನ ಮೇಲೆ ಆಗುವಂತಹ ಪರಿಣಾಮಗಳು

ಸ್ತನ್ಯಪಾನ ನಿಲ್ಲಿಸಿದಾಗ ಶಿಶುಗಳು ಸಹ ಹಲವು ಸಮಸ್ಯೆಗಳನ್ನು ಎದುರಿಸಬಹುದು.

ಎದೆಹಾಲಿನಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಪ್ರತಿಕಾಯಗಳು ಇರುವುದರಿಂದ ಹಾಲು ಕೊಡುವುದು ನಿಲ್ಲಿಸಿದಾಗ  ಸೋಂಕಿನ ಅಪಾಯ ಹೆಚ್ಚಾಗಬಹುದು. ಮತ್ತು ಪ್ರತಿಕಾಯಗಳು ಮಗುವಿನಲ್ಲಿ ಸೇರುವುದಿಲ್ಲ .

ಎದೆ ಹಾಲಿನ ಪೌಷ್ಟಿಕಾಂಶ ಪ್ರಯೋಜನವಿಲ್ಲದಂತಾಗುತ್ತದೆ.  ಮತ್ತು ಬಾಹ್ಯ ಪೋಷಣೆಯ ಮೇಲೆ ಅವಲಂಬಿಸಬೇಕಾಗುತ್ತದೆ. ಮಗು ಫಾರ್ಮುಲ ಹಾಲು ಅಥವಾ ಹಸುವಿನ ಹಾಲು , ಘನ ಆಹಾರ  ಸುಲಭವಾಗಿ ತೆಗೆದುಕೊಳ್ಳದಿದ್ದರೆ ಸಮಸ್ಯೆಯಾಗಬಹುದು.
ಸ್ತನ್ಯಪಾನ ನಿಲ್ಲಿಸುವ ಸಲಹೆಗಳು

ತಾಯಂದಿರು ಸ್ತನ್ಯಪಾನವನ್ನು ನಿಲ್ಲಿಸುವ ಮೊದಲು ಕೆಲವು ವಾರಗಳಲ್ಲಿ ಮಗುವಿಗೆ ಎದೆಹಾಲು ಕೊಡುವ ಪ್ರಮಾಣ ಮತ್ತು ಸಮಯವನ್ನು ಕಡಿಮೆ ಮಾಡಿಕೊಂಡು ಬರಬೇಕಾಗುತ್ತದೆ. ಉದಾಹರಣೆಗೆ

  1. ಪ್ರತಿಸಲ ಮಗುವಿಗೆ ಹದಿನೈದು ನಿಮಿಷ ಹಾಲು ಕುಡಿಸುತ್ತಿದ್ದರೆ ಹತ್ತು ನಿಮಿಷಕ್ಕೆ   ಇಳಿಸಲು ಪ್ರಯತ್ನಿಸುವುದು
  2. ಪ್ರತಿದಿನ 8 ಬಾರಿ ಸ್ತನ್ಯಪಾನ ಮಾಡಿಸುತ್ತಿದ್ದರೆ ಒಂದೊಂದೆ ಕಾಲಕ್ರಮೇಣ ಕಡಿಮೆ ಮಾಡಿಕೊಳ್ಳುವುದು.
  3. ತಾಯಿಯರು ಎದೆಹಾಲಿನ ಜೊತೆಗೆ ಫಾರ್ಮುಲಾ ಹಾಲನ್ನು ಒಂದು ಹೊತ್ತಿಗೆ ಯಾವುದಾದರು ಒಂದು ಸಮಯದಲ್ಲಿ ಕೊಡುವ ಅಭ್ಯಾಸ ಮಾಡುವುದು.

ಶಿಶುವಿಗೆ  ಸ್ತನ್ಯಪಾನ ಬಿಡಿಸುವ ಮೊದಲು ವೈದ್ಯರ ಬಳಿ ಮಾತನಾಡಿ ಪರಿಣಾಮಗಳ ವಿರುಧ್ಧ ಹೋರಾಡಲು ಸಲಹೆಗಳನ್ನು ಪಡೆಯಬೇಕು ಐಸ್ ಪ್ಯಾಕ್, ವಾರ್ಮಿಂಗ್ ಪ್ಯಾಡ್ಗಳು ಮತ್ತು ಉತ್ತಮ ಸ್ತನಬಂಧವು ಎಂಗಾರ್ಜ್‌ಮೆಂಟ್ ಆಗುವುದನ್ನು ತಡೆಗಟ್ಟಲು ಬಳಸುವ ಮನೆ ಮದ್ದಾಗಿದೆ. ಸ್ತನ್ಯಪಾನ ನಿಲ್ಲಿಸುವುದಕ್ಕೆ ಕಾರಣ ಏನೇ ಇದ್ದರು ವೈದ್ಯರ ಬಳಿ ಮಾತನಾಡಿ. ನಿಮ್ಮ ದೇಹದ ಬಗ್ಗೆ ನಿಮಗಿಂತ ಹೆಚ್ಚು ಯಾರಿಗೂ ತಿಳಿಯುವುದಿಲ್ಲ. ಆದರಿಂದ ಯಾವುದೇ ಒತ್ತಡಕ್ಕೆ ಒಳಗಾಗದೆ ನಿಮಗಾಗಿ ಮತ್ತು ನಿಮ್ಮ ಮಗುವಿನ ಅರೋಗ್ಯಕ್ಕಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಂತವರಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version