ದಿನದ ಸುದ್ದಿ
ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ
ಸುದ್ದಿದಿನ,ದಾವಣಗೆರೆ:ಗುರಿ ಸಾಧಿಸಲು ಕಾರಣಗಳು ನೆಪವಾಗಬಾರದು. ಗುರಿಯನ್ನು ಬೆನ್ನು ಹತ್ತಿ ಗುರಿಮುಟ್ಟುವ ಕಡೆ ಗಮನ ಹರಿಸಿದರೆ ಯಶಸ್ಸು ತಾನಾಗಿ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಜನತೆ ಮೊಬೈಲ್ ಬಳಸುವುದರಿಂದ ಆಗುವ ಅನಾನುಕೂಲಗಳು ಮತ್ತು ಹಿಂದಿನ ಯುವಜನತೆ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಮುಖಾಂತರ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದ ಅವರು, ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಗೆ ಸಭೆಯಲ್ಲಿ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಓಓ ಎಸ್. ಪಂಚಾಕ್ಷರಿ ಮಾತನಾಡಿ, ಬಿ.ಎಸ್.ಎಸ್ ಸಂಸ್ಥೆಯು ತನ್ನ ಸಿಎಸ್ಆರ್ ಇಂಟಿಗ್ರೇಟಡ್ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಹೈನುಗಾರಿಕೆಗಳಲ್ಲಿ ಸಮಾಜಸೇವಾ ಕಾರ್ಯ ಮಾಡುತ್ತಿದ್ದು, ಅಗತ್ಯ ಪೂರಕ ವಸ್ತುಗಳ ವಿತರಣೆ ಮತ್ತು ಸಹಾಯ ಹಸ್ತದ ನೆರವು ನೀಡಲಾಗುತ್ತಿದೆ. ಸಮಜಾಮುಖಿ ಕೆಲಸಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ವಿತರಣೆ ಮುಖೇನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತಿದೆ ಎಂದರು.
ಮಹಿಳೆಯರು ಅವಶ್ಯಕತೆಗೆ ತಕ್ಕಷ್ಟು ಸಾಲವನ್ನು ಪಡೆದು ಮರುಪಾವತಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯವನ್ನು ಮಾತ್ರವಲ್ಲದೆ ಸಂಸ್ಥೆಯು ಎಲ್ಲಾ ಕಡೆಗೂ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಹ ಪರಿಸ್ಥಿತಿಗಳು, ಬರಗಾಲ ಪರಿಸ್ಥಿತಿಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಟೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಎಸ್ಎಸ್ ಸಂಸ್ಥೆಯ ಸಿಇಓ ಕುಮಾರ್, ಸಿಫ್ ಓ ಸುರತ್ ಬಚ್ಚು, ರಘು ಎನ್.ಸಿ., ಕೆ. ಸಿದ್ದು, ತಿಮ್ಮಾರಾಯಸ್ವಾಮಿ, ಎಸ್. ಗಿರೀಶ್, ಪಂಡಿತ್, ದೇವರಾಜ್ ಎಸ್., ಸತೀಶ ಡಿ.ಎಸ್., ಕಿರಣ್, ಪ್ರಶಾಂತ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243