ಬಹಿರಂಗ

ಬುದ್ಧರ ಪ್ರಕಾರ ದಾನ ರೂಪದಲ್ಲಿ ಬಂದರೆ ಭಿಕ್ಕುಗಳೂ ಕೂಡ ಮಾಂಸ ತಿನ್ನಬಹುದು

Published

on

ಬೌದ್ಧರು ಮಾಂಸ ತಿನ್ನಬಹುದೆ? ನೀವು ಬೌದ್ಧರಾಗಿ ನಿಮ್ಮ ಮನೆಯ ಕಾರ್ಯಕ್ರಮ (ದಿ:8-7-18 ರಂದು ನಡೆದ ನಮ್ಮ ತಂದೆ ತಾಯಿಯವರ 50ನೇ ವಿವಾಹ ವಾರ್ಷಿಕೋತ್ಸವ)ದಲ್ಲಿ ಮೇಕೆ ಕುಯ್ದಿರಿ. ಹೀಗೊಂದು ಪ್ರಶ್ನೆ ನನ್ನನ್ನು ಸ್ನೇಹಿತರು ಕೇಳಿದರು. ಉತ್ತರ ತಮ್ಮ “ಬುದ್ಧ ಅಂಡ್ ಹಿಸ್ ಧಮ್ಮ” ಕೃತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರು ನೀಡುತ್ತಾರೆ.

ಅಂಬೇಡ್ಕರರ ಪ್ರಕಾರ ಬುದ್ಧ ಎಂದು ಕೂಡ ಎಲ್ಲಿಯೂ ಕೂಡ ಅಹಿಂಸೆಗೆ ವ್ಯಾಖ್ಯೆ ನೀಡಿಲ್ಲ. ಅಪರೂಪಕ್ಕೆ ಅದೂ ಸಾಂದರ್ಭಿಕವಾಗಿ ಅದರ ಬಗ್ಗೆ ಬುದ್ಧ ಹೇಳುತ್ತಾರೆ ಅಷ್ಟೇ. ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ತಿಳಿಯಬರುವುದೇನೆಂದರೆ “ದಾನದ ಭಾಗವಾಗಿ ಮಾಂಸಾಹಾರ ನೀಡಿದರೆ ಬುದ್ಧ ಅದನ್ನು ಎಂದೂ ಕೂಡ ತಿರಸ್ಕರಿಸಲಿಲ್ಲ” ಎಂಬುದು. ಈ ಹಿನ್ನೆಲೆಯಲ್ಲಿ ಭಿಕ್ಕುಗಳೂ ಕೂಡ ಮಾಂಸಾಹಾರ ಸೇವಿಸಬಹುದು. ಆದರೆ ಒಂದು ಸಣ್ಣ ಕಂಡೀಷನ್ ಎಂದರೆ‌ ಅವರು ಆ ಪ್ರಾಣಿಯ ಹತ್ಯೆಯಲ್ಲಿ ಪಾಲುದಾರ ರಾಗಿರಬಾರದು ಅಷ್ಟೇ. (ನಿಜ ಹೇಳಬೇಕೆಂದರೆ, ನಮ್ಮ ಕಾರ್ಯಕ್ರಮಕ್ಕೆ ಅಂದು ಆಗಮಿಸಿದ್ದ ಇಬ್ಬರು ಬೌದ್ಧ ಭಿಕ್ಕುಗಳು
ಮಾಂಸಹಾರವನ್ನೆ ಸೇವಿಸಿದುದು). ಮತ್ತೂ ಒಂದು ವಾಸ್ತವವೆಂದರೆ ಭಿಕ್ಕುಗಳು ದಾನದ ರೂಪದಲ್ಲಿ ಬಂದ ಮಾಂಸಾಹಾರವನ್ನೂ ಸೇವಿಸಬಾರದು ಎಂದು ದೇವದತ್ತ ವಿರೋಧ ವ್ಯಕ್ತಪಡಿಸಿದಾಗ ಬುದ್ಧರು ದೇವದತ್ತನ ಆ ನಿಲುವನ್ನೇ ವಿರೋಧಿಸುತ್ತಾರೆ. ಆ ಮೂಲಕ ದಾನದ ರೂಪದಲ್ಲಿ ಮಾಂಸಾಹಾರ ಬಂದರೆ ಭಿಕ್ಕುಗಳು ಅದನ್ನು ಸೇವಿಸಬಹುದು ಎಂಬ ಅಂಶಕ್ಕೆ ಬುದ್ಧರು ಒಪ್ಪುಗೆಯ ಮುದ್ರೆ ಒತ್ತುತ್ತಾರೆ. ಅಂದಹಾಗೆ ಇದನ್ನು ಹೇಳುತ್ತಾ ಅಂಬೇಡ್ಕರರು “ಅಹಿಂಸೋ ಪರಮ ಧರ್ಮ” ಎಂಬುದು ಅತಿರೇಕದ ಸಿದ್ಧಾಂತವಾಗಿದೆ ಮತ್ತು ಅದು ಜೈನ ಧರ್ಮಕ್ಕೆ ಸೇರಿದ್ದೇ ಹೊರತು ಬೌದ್ಧ ಧರ್ಮಕ್ಕಲ್ಲ. ಬೌದ್ಧ ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪದಗಳಲ್ಲಿ ಹೇಳುತ್ತಾರೆ.

ಹಾಗಿದ್ದರೆ ಅಹಿಂಸೆ? ಅರ್ಥಾತ್ ಕೊಲ್ಲುವುದು ಅಥವಾ ಕೊಲ್ಲದಿರುವುದು? ಯಾಕೆಂದರೆ ಕೆಲವು ಕಾರಣಗಳಿಗಾಗಿಯೂ ಮನುಷ್ಯ ಮತ್ತೊಬ್ಬರನ್ನು ಕೊಲ್ಲುವ ಸಂದರ್ಭ ಬರುತ್ತದೆ. ಇದಕ್ಕೆ ಬುದ್ಧರು ನೇರ ಮಾತುಗಳಲ್ಲಿ ಹೇಳುವುದು “ಎಲ್ಲರನ್ನೂ ಪ್ರೀತಿಸು ಹೇಗೆಂದರೆ ಅವರನ್ನು ಕೊಲ್ಲುವ ಆಸೆಯೇ ನಿನಗೆ ಬರಬಾರದು” ಎಂದು! ಇದನ್ನು ಉಲ್ಲೇಖಿಸುತ್ತ ಬಾಬಾಸಾಹೇಬರು “ಇದು ಅಹಿಂಸೆಯ ಧನಾತ್ಮಕ ವ್ಯಾಖ್ಯೆಯಾಗಿದೆ” ಎನ್ನುತ್ತಾರೆ.

ಮುಂದುವರೆದು ಅಂಬೇಡ್ಕರರು ಹೇಳುವುದು, ಬುದ್ಧರು “ಕೊಲ್ಲುವುದಕ್ಕಾಗಿ ಕೊಲ್ಲು, ಅಗತ್ಯ ಇರುವುದರಿಂದ ಕೊಲ್ಲು” ಇವೆರಡರ ನಡುವಿನ ವ್ಯತ್ಯಾಸ ತಿಳಿಸಬಯಸಿದ್ದರು ಎಂದು. ಇದರರ್ಥ ಬುದ್ಧರು ಎಂದು ಕೂಡ “ಅಗತ್ಯ ಇರುವುದರಿಂದ ಕೊಲ್ಲುವುದನ್ನು ನಿಷೇಧಿಸಲಿಲ್ಲ”. ಹಾಗಿದ್ದರೆ ನಿಷೇಧಿಸಿದ್ದು? “ಕೊಲ್ಲುವುದಕ್ಕಾಗಿ ಕೊಲ್ಲು” ಎಂಬುದನ್ನು. ಇದನ್ನು ಬ್ರಾಹ್ಮಣಧರ್ಮ ಮತ್ತು ಜೈನ ಧರ್ಮಗಳಿಗೆ ಹೋಲಿಸುತ್ತ ಅಂಬೇಡ್ಕರರು ಹೇಳುವುದು “ಬ್ರಾಹ್ಮಣ ಧರ್ಮ ತನ್ನಲ್ಲಿ ‘ಕೊಲ್ಲುವುದಕ್ಕಾಗಿ ಕೊಲ್ಲು’ ಎಂಬ ಸಿದ್ಧಾಂತ ಹೊಂದಿದ್ದರೆ, ಜೈನಧರ್ಮ ‘ಕೊಲ್ಲಲೇಬಾರದು’ ಎಂಬ ಸಿದ್ಧಾಂತ ಹೊಂದಿದೆ. ಆದರೆ ಬೌದ್ಧ ಧರ್ಮ ಇವೆರಡರ ನಡುವಿನ ಮಧ್ಯಮ ಮಾರ್ಗ ಹೊಂದಿದೆ” ಎಂದು. ಈ ದಿಸೆಯಲ್ಲಿ ಬೌದ್ಧ ಧರ್ಮ ಪ್ರತಿಪಾದಿಸುವುದು “ಅಗತ್ಯ ಇರುವುದರಿಂದ ಕೊಲ್ಲು” ಸಿದ್ಧಾಂತವನ್ನು.

ಹಾಗಿದ್ದರೆ ಕೊಲ್ಲುವ ಅಗತ್ಯ ಎಲ್ಲಿದೆ? ಎಲ್ಲಾ ಕಡೆಯೂ ಇರುತ್ತದಲ್ಲವೆ? ಎಂದು ಯಾರಾದರೂ ಪ್ರಶ್ನಿಸಬಹುದು. ಅದಕ್ಕೆ ಬುದ್ಧ ಹೇಳುವುದು “ಅಂತಹ ಕೊಲ್ಲುವ ಅಗತ್ಯತೆಯನ್ನು ಸಂಬಂಧಿಸಿದ ವ್ಯಕ್ತಿ ನಿರ್ಧರಿಸಬೇಕು. ಏಕೆಂದರೆ ಮನುಷ್ಯನಿಗೆ ಪ್ರಜ್ಞೆ ಎಂಬುದೊಂದಿದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ, ಅಂದರೆ ಕೊಲ್ಲುವ ಅಗತ್ಯತೆಯ ಸಂದರ್ಭದಲ್ಲಿ ಆತ ಅದನ್ನು ನಿರ್ಧರಿಸಲು ತನ್ನ ಪ್ರಜ್ಞೆಯನ್ನು ಬಳಸಬೇಕು” ಎಂದು.

ಒಟ್ಟಾರೆ ಬುದ್ಧರ ಈ ಬೋಧನೆಗಳನ್ನೆಲ್ಲ ಉಲ್ಲೇಖಿಸುತ್ತ ಬಾಬಾಸಾಹೇಬರು ಹೇಳುವುದು, “ಬುದ್ಧ ಅಹಿಂಸೆಯನ್ನು ಮದ್ಯಮ ಮಾರ್ಗದಲ್ಲಿ ಇಟ್ಟರು.ಇದರರ್ಥ ಬುದ್ಧ ಅಹಿಂಸೆಯನ್ನು ಒಂದು ಕಾನೂನಾಗಿ ಇಡಲಿಲ್ಲ, ಬದಲಿಗೆ ಒಂದು ತತ್ವವಾಗಿ ಇಟ್ಟರು. ಅಂದಹಾಗೆ ತತ್ವವನ್ನು ವ್ಯಕ್ತಿಯೊಬ್ಬ ಸ್ವತಂತ್ರವಾಗಿ ಅಚರಿಸಬಹುದು. ಅದರಲ್ಲಿ ಕಟ್ಟುಪಾಡಿಲ್ಲ. ಆದರೆ ಕಾನೂನು ಹಾಗಲ್ಲ ಅದನ್ನು ಉಲ್ಲಂಘಿಸಲೇಬಾರದು. ಈ ನಿಟ್ಟಿನಲ್ಲಿ ಬುದ್ಧ ಅಹಿಂಸೆಯನ್ನು ಕಾನೂನಾಗಿ ಇಡದೆ ತತ್ವವಾಗಿ ಇಟ್ಟಿರುವುದರಿಂದ ಅನುಯಾಯಿಗಳು ಅದನ್ನು ಆಚರಿಸಲು ಸರ್ವ ಸ್ವತಂತ್ರರು ಮತ್ತು ಅದರಲ್ಲಿ ಅಂತಹ ನಿರ್ಬಂಧವೇನಿಲ್ಲ”.

ಒಂದಂತು ಸ್ಪಷ್ಟ, ಬುದ್ಧನೇ ಅಂತಹ ನಿರ್ಬಂಧಗಳನ್ನು ಹೇರಿಲ್ಲದಿರುವುದರಿಂದ ನಾವ್ಯಾಕೆ ಹೇರಿಕೊಳ್ಳಬೇಕು ಮಾಂಸ ತಿನ್ನಬಾರದು ಅದು ಮಾಡಬಾರದು ಇದು ಮಾಡಬಾರದು ಎಂದು? In fact ದಾನದ ರೂಪದಲ್ಲಿ ಬಂದರೆ ಭಿಕ್ಕುಗಳು ಮಾಂಸ ತಿನ್ನುವುದಕ್ಕೂ ಬುದ್ಧ ನಿಷೇಧ ಹೇರಿಲ್ಲ. ಹೀಗಿರುವಾಗ ಸಾಮಾನ್ಯ ಅನುಯಾಯಿಗಳಿಗೆ? ಆದ್ದರಿಂದ ಬೌದ್ಧ ಧರ್ಮ ಪ್ರಚಾರ ಮಾಡುವಾಗ ಮಾಂಸ ತಿನ್ನಬಾರದು, ಮದ್ಯಪಾನ ಮಾಡಬಾರದು ಎಂದು ಅನವಶ್ಯಕವಾಗಿ ಹೇಳುವುದು ಬೇಡ. ಬದಲಿಗೆ ಅದನ್ನು ಅನುಯಾಯಿಗಳಿಗೆ ಬಿಟ್ಟು ಬಿಡಬೇಕು. ಒಂದು ಕಾನೂನಾಗಿ ಅದನ್ನು ಅನುಯಾಯಿಗಳ ಮೇಲೆ ಹೇರಲು ಹೋಗಬಾರದು. ಈ ನಿಟ್ಟಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರರ “ಬುದ್ಧ ಅಂಡ್ ಹಿಸ್ ಧಮ್ಮ” ಕೃತಿ ಓದದೆ, ಬುದ್ಧರ ಈ ಮಧ್ಯಮ ಮಾರ್ಗವನ್ನು ಅರ್ಥಮಾಡಿಕೊಳ್ಳದೆ ಇನ್ನೊಬ್ಬರ ಮೇಲೆ “ಮಾಂಸ ತಿನ್ನಬೇಡ, ಮದ್ಯಪಾನ ಮಾಡಬೇಡ” ಎಂದು ಕಾನೂನಿನ ರೀತಿ ಬಲವಂತ ಪಡಿಸಿದರೆ ಖಂಡಿತ ಅದು ಬೌದ್ಧ ಧರ್ಮದ ಬೆಳವಣಿಗೆಗೆ ಮಾರಕವಾಗಲಿದೆ.

ರಘೋತ್ತಮ ಹೊ.ಬ

(ಈ ಲೇಖನಕ್ಕೆ ಆಧಾರ: Buddha and his Dhamma by Babasaheb Ambedkar, Pp.346& 347)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version