ಬಹಿರಂಗ
ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿ ಬುದ್ಧ
- ಕುಮಾರಸ್ವಾಮಿ ವಿ ಕೆ, ಶಿಕ್ಷಕರು, ಬೆಂಗಳೂರು
“ನೀನು ಸಾವಿರ ಯುದ್ಧಗಳನ್ನು ಗೆಲ್ಲುವ ಮೊದಲು ನಿನ್ನನ್ನು ನೀನು ಗೆಲ್ಲು, ಆಗ ನಿನಗೆ ನಿಜವಾದ ಜಯ ಸಿಗುತ್ತದೆ” ಹೀಗೆಂದು ಹೇಳಿದ ಈ ಜಗತ್ತು ಕಂಡ ಮಹಾ ಪುರುಷ ಗೌತಮ ಬುದ್ಧನ ಸಂದೇಶಗಳು ಇಂದಿಗೂ, ಎಂದೆಂದಿಗೂ ಅಜರಾಮರ. ಹೌದು, ಬುದ್ಧನೆಂದರೆ ಪ್ರೀತಿ, ಪ್ರಾರ್ಥನೆ, ಜ್ಞಾನ, ಬೆಳಕು, ತಿಳುವಳಿಕೆ, ಸ್ವ ಚಿಂತನೆ, ಬುದ್ಧನೆಂದರೆ ಸಮಗ್ರತೆ.
ಆತ ಮಾನವೀಯತೆಯನ್ನು ಬಿತ್ತಿದ ಸಾಕಾರ ಮೂರ್ತಿ, ಜಗದ ಶಾಂತಿಗಾಗಿ ನಿತ್ಯ ಪ್ರಾರ್ಥಿಸಿದ ಕರುಣಾಮಯಿ, ಕ್ಷಣಿಕವೂ ತನ್ನ ಬಗ್ಗೆ ಯೋಚಿಸದ ನಿಸ್ವಾರ್ಥಿ, ಶುದ್ಧ ಮನಸ್ಸಿನಿಂದ ಬುದ್ಧ ಹೇಳಿದ್ದು ಹೀಗೆ “ಪ್ರತಿ ಮನುಷ್ಯನ ಒಳಗೊಂದು ಸುಪ್ತ ಮನಸ್ಸಿರುತ್ತದೆ, ಆ ಸುಪ್ತ ಮನಸ್ಸನ್ನು ಯಾರು ಅರಿಯುವಲ್ಲಿ ಸಫಲರಾಗುತ್ತಾರೋ ಅವರು ನಿಜವಾದ ಮನುಷ್ಯರಾಗುತ್ತಾರೆ” ಹೀಗೆ ಪ್ರಾರಂಭವಾಗುತ್ತದೆ ಬುದ್ಧನ ತತ್ವಗಳು. ಹೀಗೆ ನಮ್ಮ ನೆಲದಲ್ಲಿ ಹುಟ್ಟಿದ ಈ ಬುದ್ಧನ ಬೋಧನೆಗಳು ತತ್ವ-ಸಿದ್ಧಾಂತಗಳು, ಧರ್ಮ, ಜಾತಿ, ದೇಶದೇಶಗಳಾಚೆಯ ಎಲ್ಲೆಯನ್ನು ಮೀರಿದ್ದು.
ಬದುಕೆಂದರೆ ಪ್ರೀತಿ, ಬದುಕೆಂದರೆ ಮಾನವೀಯತೆ ಎನ್ನುತ್ತಲೇ ಬದುಕಿದರೆ ಹೀಗೆಯೇ ಬದುಕಬೇಕು ಎಂದು ಅರಿತು ನಡೆದು, ಅಂತೆಯೇ ಪರರಿಗೂ ಅದೇ ಹಾದಿಯನ್ನ ತೋರಿದ ನಮ್ಮ ಈ ಬುದ್ಧ ಕಾಲ, ಸ್ಥಳ, ಗಡಿ, ಧರ್ಮಗಳನ್ನು ಮೀರಿದ ದಿವ್ಯ ಸ್ವರೂಪಿ. ಆರೋಗ್ಯ, ಸಿರಿ-ಸಂಪತ್ತು, ರಾಗ-ದ್ವೇಷ, ದೇಹದಾರ್ಢ್ಯತೆ, ಶಿಕ್ಷಣ, ತಾಳ್ಮೆ, ಸಿಟ್ಟು, ಪರಿಪೂರ್ಣತೆ ,ಅಂತಃಸತ್ವ, ಕಾಲ, ಅಹಂಕಾರ, ಅಂಧಕಾರ…. ಹೀಗೆ ಬುದ್ಧನ ವಿಚಾರಧಾರೆಗಳಿಗೆ ಕೊನೆಯೇ ಇಲ್ಲ, ಆತ ನುಡಿಯದ ಮಾತುಗಳೇ ಇಲ್ಲ. ಮನುಷ್ಯ ತನ್ನ ಜೀವನದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಅಗತ್ಯವಾದ ಬಹುತೇಕ ಉಪದೇಶಗಳನ್ನು ಬುದ್ಧ ನಮಗೆ ಅಂದೇ ಹೇಳಿದ್ದು ಸುಳ್ಳಲ್ಲ.
ಬುದ್ಧ ಪೂರ್ಣಿಮೆಯ ಇತಿಹಾಸ
ಬುದ್ಧ ಜನಿಸಿದ ದಿನವಾದ ವೈಶಾಖ ಮಾಸದ ಹುಣ್ಣಿಮೆಯಂದು ಶ್ರದ್ಧಾ ಭಕ್ತಿಗಳಿಂದ ಈ ಮಹಾನ್ ವಿರಾಗಿಯನ್ನು ಪೂಜಿಸಲಾಗುವುದು. ಭಗವಾನ್ ಬುದ್ಧನ 2584ನೇ ಜನ್ಮ ದಿನಾಚರಣೆ ಮಹೋತ್ಸವವನ್ನು ಭಕ್ತಿ ಶ್ರದ್ಧೆ, ಧ್ಯಾನದಿಂದ ಇಂದು ದೇಶದ ವಿವಿಧೆಡೆ ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮೆಯು ಬೌದ್ಧ ಮತೀಯರಿಗೆ ತುಂಬಾ ಪವಿತ್ರವಾದ ದಿನ. ವೈಶಾಖ ಶುದ್ಧ ಪೌರ್ಣಿಮೆ ಬುದ್ಧನ ಜನ್ಮ ದಿನ ಮತ್ತು ಬುದ್ಧನಿಗೆ ಜ್ಞಾನೋದಯವಾದ ದಿನ. ಶ್ರೀ ವಿಷ್ಣುವಿನ ದಶಾವತಾರದಲ್ಲಿ 9 ನೇ ಅವತಾರ ಎಂದೇ ಪೂಜಿಸಲ್ಪಡುವ “ಬುದ್ಧ” ಎಂದರೆ ‘ಜ್ಞಾನ ಪಡೆದವನು’ ಎಂದರ್ಥ. ತನ್ನ ಬೋಧನೆಗಳ ಮೂಲಕ ಕಿರಿ ವಯಸ್ಸಿನಲ್ಲೇ ಈ ಜಗತ್ತನ್ನು ಗೆದ್ದ ಬುದ್ದ, ಬದುಕಿನ ಬಗ್ಗೆ ಶಾಶ್ವತ ನೆಲೆ ರೂಪಿಸಿದ ತೇಜಸ್ವಿ.
ಸುಖದ ಸುಪ್ಪತ್ತಿಗೆಲ್ಲಿ ತೇಲುತ್ತಿದ್ದ ಬುದ್ಧನಿಗೆ ನೋವೆಂಬುದೇ ತಿಳಿದಿರಲಿಲ್ಲ. ಲೌಕಿಕ ಜಗತ್ತಿನ ಪರಿಚಯವೇ ಇರಲಿಲ್ಲ. ಹೀಗಿದ್ದಾಗ ವೃದ್ದ, ರೋಗಿ, ಶವದ ಚಿತ್ರಣವನ್ನು ಒಮ್ಮೆ ನೋಡಿದ ಬುದ್ದ, ಪ್ರತಿಯೊಬ್ಬರ ಜೀವನದಲ್ಲೂ ವೃದ್ಧಾಪ್ಯ, ಸಾವು, ರೋಗ ರುಜಿನಗಳು ಸಹಜವೆಂದು ಅರಿತು, ತನ್ನ 26 ನೇ ವಯಸ್ಸಿನಲ್ಲೇ ಮನೆ – ಮಠ, ಹೆಂಡತಿ – ಮಗುವನ್ನು ತೊರೆದ ಸಿದ್ಧಾರ್ಥ ಗಯಾಗೆ ತೆರಳಿ, ಅರಳಿ ಮರದ ಕೆಳಗೆ ಕುಳಿತು ಧ್ಯಾನಾಸಕ್ತನಾದ. ನಿರಂತರ 47 ದಿವಸಗಳ ಕಠಿಣ ತಪಸ್ಸು ಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ಬುದ್ಧನಾದ.
ಹೀಗೆ ಈಡೇರಿಸೋಣ ಬುದ್ದನ ಆಶಯಗಳನ್ನು
ತನ್ನ ಬದುಕಿನುದ್ದಕ್ಕೂ ನಿಸ್ವಾರ್ಥತೆಯ ತಿಳಿ ಹೇಳಿದ ಬುದ್ದ, ಸರಳ ಮತ್ತು ಶುದ್ಧ ಜೀವನದ ಸಂಕೇತ. ಆತನ ತತ್ವಗಳೇ ಹಾಗೆ, ಸದಾ ಆಕರ್ಷಣೀಯ ಹಾಗೂ ಅನುಕರಣೀಯ. ಆಸೆಯೇ ದುಃಖಕ್ಕೆ ಮೂಲವೆಂದು ಬೋಧಿಸಿದ ಬುದ್ಧ, ಮುಂದೆ ಹೇಳಿದ್ದು ನಿಸ್ವಾರ್ಥತೆ, ಕಾಲ ಪ್ರಜ್ಞೆ, ಅಜಾತ ಶತೃವಿನಂತಹ ಬದುಕಿನ ಮುನ್ನಡೆ, ಸಹಾನುಭೂತಿ, ಒಳ ಮನಸ್ಸಿನ ಶಿಸ್ತು. ಆತ ಮನೋವ್ಯಾಕುಲತೆಗೆ ಮದ್ದು ಅರೆದ ಅಂದಿನ ಮಹಾ ವೈದ್ಯನೇ ಹೌದು. ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿಯೂ ಹೌದು. ಎಲ್ಲವನ್ನೂ ಸಾಧಿಸಲು ಬುದ್ಧ ಕೊನೆಗೆ ಹೇಳಿದ್ದು, ಸನ್ಮಾರ್ಗದ ಪಾಲನೆ. ನಮ್ಮೊಳಗಿನ ಶುದ್ಧ ನೋಟ, ಶುದ್ಧ ಆಚರಣೆಗಳು, ಚಿಂತನೆ, ಒಳ್ಳೆಯ ಮಾತು, ಸತ್ಯದ ಆಚರಣೆ, ಸ್ವಾರ್ಥರಹಿತ ಪ್ರಯತ್ನ ಇತ್ಯಾದಿ ಮೌಲ್ಯಗಳನ್ನು ಅನುಸರಿಸುವ ಮೂಲಕ ನಾವೂ ಸಹ ಬುದ್ಧನನ್ನು ಆಲಂಗಿಸಿಕೊಳ್ಳಲು ಸಾಧ್ಯ, ತತ್ವಗಳ ಅನುಪಾಲನೆ ಸಾಧ್ಯ.
(ಕುಮಾರಸ್ವಾಮಿ ವಿ ಕೆ,
ಪ್ರೌಢಶಾಲಾ ಮುಖ್ಯ ಶಿಕ್ಷಕ,
ಸಿದ್ದಾರ್ಥ ಆಂಗ್ಲ ಶಾಲೆ,
ಬೆಂಗಳೂರು ಉತ್ತರ
ಮೊಬೈಲ್ : 9113906120)
ಸುದ್ದಿದಿನ.ಕಾಂ|ವಾಟ್ಸಾಪ್|9980346243