ನೆಲದನಿ
ಬುದ್ಧತ್ವ, ಬುದ್ಧ ತತ್ವ..!
ಜಗತ್ತಿನ ಮಹಾ ಮಹಾ ಗುರುಗಳಲ್ಲಿ, ಅನುಭಾವಿಗಳಲ್ಲಿ ಬುದ್ಧ ಎತ್ತರವಾಗಿ ನಿಲ್ಲುತ್ತಾನೆ. ಅನೇಕರು, ನಾನು ಹೇಳಿದ್ದನ್ನು ಕೇಳು, ನಾನು ಮಾಡಿದಂತೆ ಮಾಡು, ನನ್ನ ಮಾರ್ಗದಲ್ಲಿ ನಡೆ ಎಂದು ಮುಂತಾಗಿ ಹೇಳಿದರು. ತಮ್ಮ ಹಿಂಬಾಲಕರನ್ನು ಹುಟ್ಟುಹಾಕಿದರು. ಇದು ಧಾರ್ಮಿಕ ಸಂಕೋಲೆ. ಇಲ್ಲಿ ಯೋಚನೆಗೆ ಆಸ್ಪದವಿಲ್ಲ. ಆದರೆ ಬುದ್ಧ ಮಾತ್ರ ‘ನೀನು ನೀನಾಗಿರು’ ಎಂದು ಹೇಳಿದ. ಇಲ್ಲಿ ಯಾವ ಸಂಕೋಲೆಯೂ ಇಲ್ಲ, ಪಂಜರವೂ ಇಲ್ಲ. ಬುದ್ಧ ಎಲ್ಲರನ್ನೂ ತನ್ನ ಸಹ ಪ್ರಯಾಣಿಕರು, ತನ್ನ ಮಿತ್ರರು (ಮೈತ್ರೇಯ)ಎಂದು ಕರೆದ.
ಒಂದು ಹೂವು ತಾನು ಇನ್ನೊಂದು ಹೂವಿನಂತಾಗಲು ಬಯಸುವುದಿಲ್ಲ, ಹಾಗಯೇ ಮತ್ತೊಂದು ಹೂವು ತನ್ನಂತಾಗಲಿ ಎಂದೂ ಕೂಡ ಬಯಸುವುದಿಲ್ಲ. ತಾನು ತಾನೇ. ಅದು ಅದೇ. ಎರಡೂ ಸುಂದರ.
ತನಗೆ ಏನು ಸಿಕ್ಕಿದೆಯೋ ಅಷ್ಟರಲ್ಲಿ, ತನ್ನ ಇತಿ-ಮಿತಿಯೊಳಗೆ, ಸುಂದರವಾಗಿ ಅರಳಿ ಇದ್ದಷ್ಟು ದಿನ ಸೌಂದರ್ಯವನ್ನು ಪಸರಿಸಿ, ತನ್ನನ್ನು ನೋಡುವವರಲ್ಲಿ ಪ್ರೀತಿಯನ್ನು ಹುಟ್ಟಿಸಿ, ಕೊನೆಗೊಮ್ಮೆ ಶಾಂತವಾಗಿ ಉದುರಿಹೋಗುತ್ತದೆ. ಇದ್ದಷ್ಟು ದಿನ ಆ ಹೂವು, ಅದು ಬೇಕು ಅನ್ನಲಿಲ್ಲ, ಇದು ಬೇಡ ಅನ್ನಲಿಲ್ಲ. ಹೀಗಾಗಿ ಅದು ಎಂದೂ ದುಃಖ ಪಡಲಿಲ್ಲ. ಅದರ ಜೀವನ ಸಾರ್ಥಕ. ಇದು ಬುದ್ಧತ್ವ. ಬುದ್ಧ ತತ್ವ.
ಮನುಷ್ಯನಿಗೆ ಮನಸ್ಸು, ಬುದ್ಧಿ ಇರುವುದರಿಂದ ಜಗತ್ತು ಇನ್ನಷ್ಟು ಸುಂದರವಾಗಬೇಕಿತ್ತು. ಆದರೆ ಆಗಿರುವುದು ಅದಕ್ಕೆ ತದ್ವಿರುದ್ಧ. ಅವನ ಮಾತೊಂದು, ಕೃತಿ ಇನ್ನೊಂದು, ಮನಸ್ಸು ಮತ್ತೊಂದು. ಒಳಗೊಂದು, ಹೊರಗೊಂದು. ಹೀಗಾಗಿ ಅವನು ತನ್ನ ಜೀವನವನ್ನು ತಾನೇ ನರಕ ಮಾಡಿಕೊಂಡು, ಅದರಿಂದ ಹೊರಬರಲಾರದೆ ಒದ್ದಾಡುತ್ತಿದ್ದಾನೆ. ಅವನು ತಾನಾರೆಂದು ತಿಳಿದು, ತನ್ನಂತೆ ತಾನಾದರೆ ಮಾತ್ರ ಇದರಿಂದ ಬಿಡುಗಡೆ.
ಬುದ್ಧ ಹೇಳುತ್ತಾನೆ, ನಿನ್ನ ದುಃಖಕ್ಕೆ ನೀನೇ ಕಾರಣ. ನಿನ್ನ ಉದ್ಧಾರಕ್ಕೂ ನೀನೇ ಕಾರಣ. ಯಾರೂ ಬಂದು ನಿನ್ನ ಹಣತೆಯನ್ನು ಹಚ್ಚುವುದಿಲ್ಲ. ನೀನೂ ಹಚ್ಚಬೇಡ. ಏಕೆಂದರೆ ನೀನು ಸ್ವಯಂ ಜ್ಯೋತಿ ಸ್ವರೂಪನು.
ಅಪ್ಪೋ ದೀಪೋ ಭವ.
ಸುದ್ದಿದಿನ.ಕಾಂ|ವಾಟ್ಸಾಪ್|9980346243