ದಿನದ ಸುದ್ದಿ

ಕೇಂದ್ರ ಬಜೆಟ್ – 2024-25 | ‘ವಿಕಸಿತ ಭಾರತ್’ ಸಂಕಲ್ಪದ ಅನ್ವಯ ಮುಂಗಡಪತ್ರದ ಸಂಪೂರ್ಣ ಮಾಹಿತಿ ; ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನಡೆಸ್ಕ್:’ವಿಕಸಿತ ಭಾರತ್’ ಸಂಕಲ್ಪದ ಅನ್ವಯ 2024-25ನೇ ಸಾಲಿನ ಪೂರ್ಣಪ್ರಮಾಣದ ಮುಂಗಡಪತ್ರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡನೆ ಮಾಡಿದರು.

ಬೆಳಗ್ಗೆ ಕಲಾಪ ಸಮಾವೇಶವಾಗುತ್ತಿದ್ದಂತೆಯೇ ಹಣಕಾಸು ಸಚಿವರಿಗೆ ಆಯ-ವ್ಯಯ ಮಂಡನೆ ಮಾಡುವಂತೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸೂಚಿಸಿದರು. ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ಧ್ಯೇಯೋಧ್ಯೇಶ ಹಾಗೂ ನಾಲ್ಕು ವಲಯದ ಅಭಿವೃದ್ಧಿಪಥ ಹೊಂದುವ 9 ಅಂಶಗಳ ಯೋಜನೆಯನ್ನು ಸುಮಾರು 3 ಗಂಟೆ 50 ನಿಮಿಷಗಳ ಕಾಲ ಸತತವಾಗಿ ಭಾಷಣ ಓದಿ, ಉದ್ದೇಶವನ್ನು ಸದನದ ಮುಂದಿಟ್ಟರು.

ಉದ್ಯೋಗ, ಕೌಶಲ್ಯಾಭಿವೃದ್ಧಿ, ಸಣ್ಣ ಅತೀ ಸಣ್ಣ ಉದ್ಯಮೆದಾರರಿಗೆ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕೆ ಯೋಜನೆಗಳ ಪ್ರಸ್ತಾವನೆಯನ್ನು ಸದನದ ಮುಂದೆ ಪ್ರಸ್ತಾಪಿಸಿದರು. ರೈತ ಸಮುದಾಯದ ಆದಾಯ ಹೆಚ್ಚಿಸುವ ಹಾಗೂ ಆರ್ಥಿಕ ಸಂಪನ್ಮೂಲ ದ್ವಿಗುಣ ಮಾಡುವ ಕಾರ್ಯಕ್ರಮಗಳನ್ನು ಪ್ರಕಟಿಸಿದರು.

ರಾಷ್ಟ್ರೀಯ ಸಹಕಾರ ನೀತಿ ಎಲ್ಲ ವಲಯದಲ್ಲಿಯೂ ಸಹಕಾರ ಬಲವರ್ಧನೆ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಸದನದ ಮುಂದೆ ಪ್ರಸ್ತಾಪಿಸಿದರು. ತೈಲ ಬೀಜ ಉತ್ಪಾದನೆ, ಸಾಸಿವೆ, ಕಡಲೆಕಾಯಿ, ಸೋಯಾ, ಸೂರ್ಯಕಾಂತಿ ಬೆಳೆ ಬೆಳೆಯಲು ರೈತ ಸಮುದಾಯಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಘೋಷಿಸಿದರು.

ತರಕಾರಿ, ಉತ್ಪಾದನೆ, ಸರಬರಾಜು ಮಾಡಲು ಕಾರ್ಯಕ್ರಮ ಪ್ರಕಟಿಸಿದ ಅವರು, 109 ಹೊಸ ಹೆಚ್ಚು ಉತ್ಪಾದನೆ ಮಾಡುವ ತಳಿಗಳನ್ನು ತೋಟಗಾರಿಕೆಯಲ್ಲಿ ಅಳವಡಿಸಿ, ಪ್ರೋತ್ಸಹಿಸಲು ಹಾಗೂ 32 ವಿಧದ ತೋಟಗಾರಿಕಾ ಬೆಳೆಗಳ ಆಧುನಿಕ ಬೆಳೆ ಬೆಳೆಯಲು ರೈತ ಸಮುದಾಯಕ್ಕೆ ಸಲಹೆ ಮಾರ್ಗದರ್ಶನ ನೀಡಲು, ಸಂಶೋಧನೆಗೆ ಹಾಗೂ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವರು ತಮ್ಮ ಆಯ-ವ್ಯಯ ಭಾಷಣದಲ್ಲಿ ಉಲ್ಲೇಖಿಸಿದರು.

ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ನ್ಯಾಯ ಜೊತೆಗೆ ಇಂಧನ ಭದ್ರತೆ, ನಗರಗಳ ಅಭಿವೃದ್ಧಿ, ಮೂಲಸೌಕರ್ಯ, ಅನ್ವೇಷಣೆ, ಸಂಶೋಧನೆಗೆ ಕೇಂದ್ರ ಸರ್ಕಾರ ಮತ್ತಷ್ಟು ಒತ್ತು ನೀಡಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು. ಮೂರು ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು, ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ ರೂಪಾಯಿ ಮೀಸಲು. ಮಹಿಳೆ ಮತ್ತು ಮಕ್ಕಳ ಸಂರಕ್ಷಣೆಗೆ 3 ಲಕ್ಷ ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಜೊತೆಗೆ, ದುಡಿಯುವ ಯುವ ಕೈಗಳಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ಮುದ್ರಾ ಸಾಲ ಮಿತಿಯನ್ನು 10 ಲಕ್ಷದಿಂದ 20 ಲಕ್ಷದವರಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಸ್ವ-ಉದ್ಯೋಗ ಕಾರ್ಯಕ್ರಮಕ್ಕೆ ನೆರವಿನ ಪ್ರಮಾಣ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ಐದು ವರ್ಷಗಳಲ್ಲಿ ಇ-ವಾಣಿಜ್ಯ ವಹಿವಾಟು, ಖಾಸಗಿ, ಸಾರ್ವಜನಿಕವಾಗಿ ಪಿಪಿಪಿ ಯೋಜನೆಯಡಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದರಿಂದ 1 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು.

ದೇಶೀಯವಾಗಿ ಖನಿಜ ಉತ್ಪಾದನಾ ವಲಯದಲ್ಲಿ ಹಾಗೂ ಪುನರ್‌ಬಳಕೆ ಖನಿಜ ವಲಯದಲ್ಲಿ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ ಅವರು, 14 ಪ್ರಮುಖ ನಗರಗಳಲ್ಲಿ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1 ಕೋಟಿ ಕಡು ಬಡವರು ಹಾಗೂ ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು 10 ಲಕ್ಷ ಕೋಟಿ ರೂಪಾಯಿ ಹಣವನ್ನು ನಾಲ್ಕು ಹಂತದಲ್ಲಿ ಜಾರಿಗೆ ತರಲಾಗುವುದು ಎಂದರು. ದೇಶದ ಆರ್ಥಿಕ ಬೆಳವಣಿಗೆ 6.4 ರಷ್ಟು ಇರಲಿದ್ದು, ಸುಸ್ಥಿರ ಬೆಳವಣಿಗೆಗೆ ಹಾಗೂ ಹೂಡಿಕೆಗೆ 1. 25 ಲಕ್ಷ ಕೋಟಿ ರೂಪಾಯಿ ತೆಗೆದಿರಿಸಲಾಗಿದೆ ಎಂದರು.

ಆದಾಯ ತೆರಿಗೆ ಪಾವತಿಸುವವರಿಗೆ 75 ಸಾವಿರ ರೂಪಾಯಿವರೆಗೆ ಯಾವುದೇ ತೆರಿಗೆ ಇರುವುದಿಲ್ಲ. 3 ಲಕ್ಷ ರೂಪಾಯಿ ವರೆಗೆ ವಾರ್ಷಿಕ ಆದಾಯ ತೆರಿಗೆ ವಿನಾಯಿತಿ. ಮೂರರಿಂದ ಏಳು ಲಕ್ಷ ರೂಪಾಯಿವರೆಗೆ ಶೇಕಡ 5 ರಷ್ಟು ಹಾಗೂ 7 ರಿಂದ 10 ಲಕ್ಷದವರಿಗೆ ಶೇಕಡ 10 ರಷ್ಟು, 10 ರಿಂದ 12 ಲಕ್ಷದವರಿಗೆ ಶೇಕಡ 15 ಹಾಗೂ 12 ರಿಂದ 15 ಲಕ್ಷದ ವರೆಗೆ ಶೇಕಡ 20 ರಷ್ಟು ಮತ್ತು 15 ಲಕ್ಷ ಮೇಲ್ಪಟವರಿಗೆ ಶೇಕಡ 30 ರಷ್ಟು ತೆರಿಗೆ ಪಾವತಿಸಬೇಕು ಎಂದು ಸದನದಲ್ಲಿ ಪ್ರಸ್ತಾವ ಮಂಡಿಸಿದರು.

ಇದಕ್ಕೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಪ್ರತಿಯನ್ನು ರಾಷ್ಟ್ರಪತಿಯವರಿಗೆ ಮುಂದೆ ಪ್ರಸ್ತಾಪಿಸಿದರು. ಇದಕ್ಕೂ ಮೊದಲು ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಿತು. ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿದರ ಮುಂದುವರಿದಿದ್ದು, ಸುಮಾರು 30 ಲಕ್ಷ ಯುವಕರಿಗೆ ಅನುಕೂಲವಾಗಿದೆ. 1 ಸಾವಿರಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುವುದು.

20 ಲಕ್ಷಕ್ಕೂ ಹೆಚ್ಚು ಯುವಕರಿಗೆ ಮುಂದಿನ ಐದು ವರ್ಷಗಳಲ್ಲಿ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೀಡುತ್ತಿರುವ ನೆರವಿನ ಮೊತ್ತವನ್ನು ಹೆಚ್ಚಿಸಲಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version