ದಿನದ ಸುದ್ದಿ
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
ಸುದ್ದಿದಿನಡೆಸ್ಕ್:ಸಂಸತ್ತಿನ ಬಜೆಟ್ ಅಧಿವೇಶನದ ಮುನ್ನಾ ದಿನವಾದ ಇಂದು ದೆಹಲಿಯಲ್ಲಿ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಸುಗಮ ಕಲಾಪ ನಡೆಸಲು ಸರ್ಕಾರ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಸಭೆಯಲ್ಲಿ ಕೋರುವ ನಿರೀಕ್ಷೆಯಿದೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅರ್ಜುನ್‌ರಾಮ್ ಮೇಘವಾಲ್, ಜೆ.ಪಿ.ನಡ್ಡಾ, ಚಿರಾಗ್ ಪಾಸ್ವಾನ್, ರಾಮ್‌ದಾಸ್ ಅಟಾವಳೆ ಹಾಗೂ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಡಿಎಂಕೆ ನಾಯಕರಾದ ಟಿ.ಆರ್.ಬಾಲು, ತಿರುಚಿ ಶಿವ, ಎ.ಐ.ಎಂ.ಐ.ಎಂ ಸಂಸದ ಅಸ್ಸಾದುದ್ದೀನ್ ಓವೈಸಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನ ನಾಳೆ ಆರಂಭವಾಗಲಿದ್ದು, ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಲೋಕಸಭೆಯಲ್ಲಿ 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಲಿದೆ. ಕಳೆದ ತಿಂಗಳು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಈ ಬಜೆಟ್ ಸರ್ಕಾರದ ದೂರದೃಷ್ಟಿ ಹಾಗೂ ಭವಿಷ್ಯದ ಪರಿಣಾಮಕಾರಿ ದಾಖಲೆಯಾಗಲಿದೆ ಎಂದು ಪ್ರತಿಪಾದಿಸಿದ್ದರು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರ, ಆರು ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243